ಬಳ್ಳಾರಿ: ಮಹಾನಗರ ಪಾಲಿಕೆಯ ಎಲ್ಲ ಸದಸ್ಯರು ಪಕ್ಷಬೇಧ ಮರೆತು ಬಳ್ಳಾರಿ ನಗರದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಎಂ.ರಾಜೇಶ್ವರಿ ಸುಬ್ಬರಾಯ್ಡು ಅವರು ಹೇಳಿದರು.
ಮಹಾನಗರ ಪಾಲಿಕೆಗೆ ನೂತನವಾಗಿ ಆಯ್ಕೆಯಾದ ಸದಸ್ಯರಿಗೆ ಬಳ್ಳಾರಿ ಜಿಲ್ಲೆಯ ತೋರಣಗಲ್‌ನ ಜಿಂದಾಲ್‌ನ ಆರ್ ಮತ್ತು ಡಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಪರಿಚಯಾತ್ಮಕ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಹಾನಗರ ಪಾಲಿಕೆಯ ಎಲ್ಲ ಸದಸ್ಯರು ಪರಿಚಯಾತ್ಮಕ ಕಾರ್ಯಾಗಾರದಲ್ಲಿನ ಮಾಹಿತಿಯನ್ನು ಅರಿತುಕೊಂಡು ಪರಿಣಾಮಕಾರಿಯಾಗಿ ಕಾರ್ಯನಿರ್ವ ಹಿಸೋಣ ಎಂದರು. ನೂತನವಾಗಿ ಆಯ್ಕೆಯಾದ ಸದಸ್ಯರಿಗೆ ಈ ರೀತಿಯ ತರಬೇತಿ ಅವಶ್ಯಕತೆ ಇತ್ತು. ಜನಗ್ರಹ ಸಂಸ್ಥೆಯು ತರಬೇತಿ ನೀಡಲು ಮುಂದೆ ಬಂದಿರುವುದು ಸಂತೋಷದ ಸಂಗತಿ ಎಂದರು.
ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಬಳ್ಳಾರಿ ಮಹಾನಗರ ಪಾಲಿಕೆಯಿಂದ ನೂತನವಾಗಿ ಆಯ್ಕೆ ಯಾದ ಸದಸ್ಯರಿಗೆ ಜನಗ್ರಹ ಸಂಸ್ಥೆಯ ಮೂಲಕ ಪಾಲಿಕೆಯ ಸದಸ್ಯರಿಗೆ ಕರ್ತವ್ಯ,ಜವಾಬ್ದಾರಿ ಮತ್ತು ಪಾತ್ರದ ಕುರಿತು ತಿಳಿಸಿಕೊಡುವ ಕೆಲಸ ಮಾಡಲಾಗುತ್ತಿದೆ ಎಂದರು. ಜನಗ್ರಹ ಸಂಸ್ಥೆಯ ನಾಗರಿಕ ಸಹಭಾಗಿತ್ವ ವಿಭಾಗದ ಮುಖ್ಯಸ್ಥ ಶ್ರೀನಿವಾಸ ಅಲವಿಲ್ಲಿ ಅವರು ಮಾತನಾಡಿ, ಬಳ್ಳಾರಿ ಮಹಾನಗರ ಪಾಲಿಕೆ ನೂತನ ಸದಸ್ಯರಿಗೆ ನಡೆಸಲಾದ ಕಾರ್ಯಾಗಾರ ಬಹ ಳಷ್ಟು ಭರವಸೆ ಮೂಡಿಸಿದೆ. ನಮ್ಮ ನಗರಗಳಲ್ಲಿ ನಾಗರಿ ಕರ ಸಹಭಾಗಿತ್ಯವನ್ನು ಉತ್ತೇಜಿಸಿ,ಅವುಗಳನ್ನು ಸಮರ್ಥ ನೀಯ ಮತ್ತು ವಾಸಯೋಗ್ಯ ಮಾಡಲು ಚುನಾಯಿತ ಪ್ರತಿನಿಧಿ ಗಳಿಗಳ ಸಾಮರ್ಥ್ಯಕ್ಕೆ ಉತ್ತೇಜನ ನೀಡಬೇಕು ಎಂಬ ನಿಲುವನ್ನು ಸದೃಢಗೊಳಿಸಿದೆ. ಸದಸ್ಯರ ಉತ್ಸಾಹ ಗಮನಿಸಿದರೇ ಮುಂದಿನ ಐದು ವರ್ಷಗಳಲ್ಲಿ ಬಳ್ಳಾರಿ ಮಾದರಿ ನಗರವಾಗುವುದರಲ್ಲಿ ಸಂಶಯವಿಲ್ಲ ಎಂದರು.
ನೂತನ ಸದಸ್ಯರಿಗೆ ನಂತರ ಮಹಾನಗರ ಪಾಲಿಕೆಯ ಎಲ್ಲ ಶಾಖಾ ಮುಖ್ಯಸ್ಥರು ತಮ್ಮ ಶಾಖೆಗಳ ಕುರಿತು ಸವಿಸ್ತಾರವಾದ ಮಾಹಿತಿ ನೀಡಿದರು. ನಂತರ ಪಾಲಿಕೆ ಸದಸ್ಯರ ತಂಡಗಳನ್ನು ಮಾಡಿ ಮಾದರಿ ವಾರ್ಡ್ ರಚನೆ ಕುರಿತು ಹಾಗೂ ಬಳ್ಳಾರಿ ಅಭಿವೃದ್ಧಿ ಕುರಿತು ಚರ್ಚೆ ನಡೆಸಿದರು. ಪರಿಚಯಾತ್ಮಕ ಹಾಗೂ ಮಹಾನಗರ ಪಾಲಿಕೆ ಕಾಯ್ದೆ, ಹಣಕಾಸಿನ ಸ್ಥಿತಿಗತಿ ಮತ್ತು ಅನುದಾನ, ಸ್ವಚ್ಛತೆ,ಇತ್ಯಾದಿ ಮೂಲಭೂತ ಸೌಲಭ್ಯಗಳ ಕುರಿತು ಜನಗ್ರಹ ಸಂಸ್ಥೆಯ ಸಂತೋಷ ನರಗುಂದ, ಶ್ರೀನಿವಾಸ ಅವರು ವಿವರವಾಗಿ ವಿವರಿಸಿದರು. ನಂತರ ಎರಡನೇ ಅವಧಿಗೆ ಆಯ್ಕೆಯಾದ ಸದಸ್ಯರೊಂದಿಗೆ ಹಿಂದಿನ ಅವ ಧಿಯ ಅನುಭವ ಮತ್ತು ಸಾಧನೆ ಕುರಿತು ಸಂವಾದ ನಡೆಸಲಾಯಿತು. ಈ ಸಂದರ್ಭದಲ್ಲಿ ಉಪಮೇಯರ್ ಮಾಲನ್ ಬಿ, ಮಹಾನಗರ ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಸೇರಿದಂತೆ ನೂತನವಾಗಿ ಆಯ್ಕೆಯಾದ ಮಹಾನಗರ ಪಾಲಿಕೆ ಸದಸ್ಯರು ಇದ್ದರು.