Advertisement

ಸ್ಮಾರ್ಟ್‌ಸಿಟಿ ಯಶಸ್ಸಿಗೆ ಕೈ ಜೋಡಿಸಿ

01:10 PM Jul 01, 2019 | Team Udayavani |

ಬೆಳಗಾವಿ: ಸ್ಮಾರ್ಟ್‌ಸಿಟಿ ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆ. ಈ ಯೋಜನೆಯ ಪರಿಣಾಮಕಾರಿ ಅನುಷ್ಠಾನ ಹಾಗೂ ಯಶಸ್ವಿಗೆ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ಸಭಾಭವನದಲ್ಲಿ ರವಿವಾರ ಸ್ಮಾರ್ಟ್‌ ಸಿಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು ಈ ಮಹತ್ವಾಕಾಂಕ್ಷಿ ಯೋಜನೆಯ ಅನುಷ್ಠಾನದಲ್ಲಿ ಅಧಿಕಾರಿಗಳು ಒಬ್ಬರ ಮೇಲೆ ಒಬ್ಬರು ಜವಾಬ್ದಾರಿ ಅಥವಾ ಕಾರಣ ಹೇಳುವ ಬದಲು ಎಲ್ಲರೂ ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಸ್ಮಾರ್ಟ್‌ ಸಿಟಿ ಯೋಜನೆ ಕೇವಲ ರಸ್ತೆ, ಬೀದಿ ದೀಪ, ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಮಾತ್ರ ಸೀಮಿತವಾಗಿಲ್ಲ. ಮುಂದಿನ 30 ವರ್ಷದ ಕಲ್ಪನೆಯನ್ನು ಮುಂದಿಟ್ಟುಕೊಂಡು ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು. ರಾತ್ರಿ ಸಮಯದಲ್ಲಿ ಬೆಳಗಾವಿಯಲ್ಲಿ ಮಹಿಳೆಯರು ನಿರ್ಭಿತವಾಗಿ ಓಡಾಡುವಂತಾಗಬೇಕು. ಈ ನಿಟ್ಟಿನಲ್ಲಿ ಸ್ಮಾರ್ಟ್‌ಸಿಟಿ ನಿರ್ಮಾಣವಾಗಬೇಕು ಎಂದರು.

ಕಾಮಗಾರಿಗಳಿಂದ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ ಎಂದು ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿವೆ. ಪುಟ್ಪಾತ್‌ ಅಥವಾ ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಪೊಲೀಸ್‌ ಅಧಿಕಾರಿಗಳು ಸಂಚಾರಕ್ಕೆ ಸಮಸ್ಯೆಯಾಗದಂತೆ ಮುಂಜಾಗೃತಾ ಕ್ರಮಕೈಗೊಳ್ಳಬೇಕು ಎಂದು ಪೊಲೀಸ್‌ ಆಯುಕ್ತ ಬಿ.ಎಸ್‌. ಲೋಕೇಶಕುಮಾರ ಅವರಿಗೆ ಸಚಿವರು ಸೂಚಿಸಿದರು.

ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಮಾತನಾಡಿ ಸ್ಮಾರ್ಟ್‌ಸಿಟಿ ಯೋಜನೆಗಳು ಕೇವಲ ಬೆಳಗಾವಿ ನಗರಕ್ಕೆ ಮಾತ್ರ ಸೀಮಿತವಾಗುವುದು ಬೇಡ. ನಗರ ವ್ಯಾಪ್ತಿಯಲ್ಲಿ ಬರುವ ಗ್ರಾಮೀಣ ಕ್ಷೇತ್ರದ ಪ್ರದೇಶಗಳನ್ನೂ ಸಹ ಇದರಲ್ಲಿ ಸೇರ್ಪಡೆ ಮಾಡಿಕೊಂಡು ಕಾಮಗಾರಿ ಕೈಗೊಳ್ಳಬೇಕು ಎಂದರು.

Advertisement

ಸ್ಮಾರ್ಟ್‌ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ಜಿಯಾವುಲ್ಲಾ ಮಾತನಾಡಿ, ಸ್ಮಾರ್ಟ್‌ಸಿಟಿ ಯೋಜನೆಯಡಿಯಲ್ಲಿ ಒಟ್ಟು 568 ಕೋಟಿ ರೂ. ಅನುದಾನದಡಿ 80.15 ಕೋಟಿ ರೂದಲ್ಲಿ ಆಜ್ಞೆ ಮತ್ತು ನಿಯಂತ್ರಣಾ ಕೇಂದ್ರ, 22.82 ಕೋಟಿ ರೂ. ವೆಚ್ಚದಲ್ಲಿ ವ್ಯಾಕ್ಸಿನ್‌ ಡಿಪೋದಲ್ಲಿ ಪಾರಂಪರಿಕ(ಹೆರಿಟೇಜ್‌ ಪಾರ್ಕ್‌)ಉದ್ಯಾನ ಅಭಿವೃದ್ಧಿ ಹಂತ 1 ಮತ್ತು 2, ಸುಮಾರು 281,98 ಕೋಟಿ ರೂ. ವೆಚ್ಚದಲ್ಲಿ ನಗರದ ಸುಮಾರು 41.45 ಕಿ.ಮಿಗಳಷ್ಟು ಮುಖ್ಯ ರಸ್ತೆಗಳನ್ನು ಸ್ಮಾರ್ಟ್‌ ರಸ್ತೆಗಳಾಗಿ ನಿರ್ಮಿಸುವುದು, 47.5 ಕೋಟಿ ರೂದಲ್ಲಿ ಟಿಳಕವಾಡಿಯ ಕಲಾಮಂದಿರ ಬಳಿ ಬಹು ಉದ್ದೇಶಿತ ವಾಣಿಜ್ಯ ಸಂಕೀರ್ಣ ನಿರ್ಮಾಣ, 44.50 ಕೋಟಿ ರೂ. ವೆಚ್ಚದಲ್ಲಿ ಸಿಟಿ ಬಸ್‌ ನಿಲ್ದಾಣ ಹಾಗೂ ರೈಲ್ವೆ ಸ್ಟೇಶನ್‌ ಬಸ್‌ ನಿಲ್ದಾಣ ಹಾಗೂ ಬಸ್‌ ಶೆಲ್ಟರ್‌ಗಳ ನಿರ್ಮಾಣ ಮೊದಲಾದ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಮಾಹಿತಿ ನೀಡಿದರು.

ನಗರದ ಸುಮಾರು 29.51 ಕಿ.ಮಿಗಳಷ್ಟು ಮುಖ್ಯ ರಸ್ತೆಗಳನ್ನು 162.72 ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್‌ ರಸ್ತೆಗಳಾಗಿ ನಿರ್ಮಿಸುವುದು, 55.85 ಕೋಟಿ ರೂ ದಲ್ಲಿ ನಗರದಲ್ಲಿ ಒಟ್ಟು 183 ಕಿ.ಮೀ ಉದ್ದಕ್ಕೆ ಅಂಡರ್‌ಗ್ರೌಂಡ್‌ ಎಲ್.ಟಿ. ವಿದ್ಯುತ್‌ ಕೇಬಲ್ ಮತ್ತು ಅಲಂಕೃತ ಬೀದಿದೀಪ ಅಳವಡಿಸುವುದು, 8 ಕೋಟಿ ರೂ ದಲ್ಲಿ ಕೋಟೆಕೆರೆ ಅಭಿವೃದ್ಧಿ ಹಾಗೂ 100 ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ನಂ.4ರಿಂದ ಕೇಂದ್ರ ಬಸ್‌ ನಿಲ್ದಾಣದವರೆಗೆ ಮೇಲ್ಸೇತುವೆ ನಿರ್ಮಾಣ ಸೇರಿದಂತೆ 232 ಕೋಟಿ ರೂ. ಕಾಮಗಾರಿಗಳ ಟೆಂಡರ್‌ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ| ಎಸ್‌.ಬಿ. ಬೊಮ್ಮನಹಳ್ಳಿ, ಪೊಲೀಸ್‌ ಆಯುಕ್ತ ಬಿ.ಎಸ್‌. ಸ್ಮಾರ್ಟ್‌ ಸಿಟಿ ತಾಂತ್ರಿಕ ವಿಭಾಗದ ಪ್ರಧಾನ ವ್ಯವಸ್ಥಾಪಕ ಕೆ.ಎಫ್‌. ಹುಲಕುಂದ, ಸ್ಮಾರ್ಟ್‌ಸಿಟಿ ಸಲಹೆಗಾರರಾದ ಸೋನಾಲಿ ಸರ್ನೋಬತ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next