ಶಹಾಬಾದ: ಮಕ್ಕಳಿಗೆ ಕ್ಷಯರೋಗ (ಟಿಬಿ) ಉಂಟಾದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಬಹುದು. ಆದ್ದರಿಂದ “ಕ್ಷಯ ರೋಗ ಮುಕ್ತ ಕರ್ನಾಟಕ’ಕ್ಕೆ ಸಾರ್ವಜನಿಕರು, ವಿದ್ಯಾರ್ಥಿಗಳು ಕೈ ಜೋಡಿಸಬೇಕೆಂದು ತಾಲೂಕಾ ಹಿರಿಯ ಕ್ಷಯರೋಗ ಮೇಲ್ವಿಚಾರಕಿ ರಜನಿ ಟಿಳ್ಳೆ ಹೇಳಿದರು.
ನಗರದ ಎಸ್.ಎಸ್. ಮರಗೋಳ ಪದವಿ ಮಹಾವಿದ್ಯಾಲಯದಲ್ಲಿ ಜಿಲ್ಲಾ ಪಂಚಾಯಿತಿ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರ, ತಾಲೂಕು ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ಆಜಾದಿಕಾ ಅಮೃತ ಮಹೋತ್ಸವ’ ಕಾರ್ಯಕ್ರಮದಡಿ “ಟಿಬಿ ಸೋಲಿಸಿ ಕರ್ನಾಟಕ ಗೆಲ್ಲಿಸಿ’ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕ್ಷಯರೋಗ ನಿರ್ಮೂಲನೆಗೆ ವಿದ್ಯಾರ್ಥಿಗಳು ಅವರವರ ಗ್ರಾಮಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.
ಜಿಲ್ಲಾ ಕ್ಷಯರೋಗ ಡಿಆರ್ ಟಿಬಿ ಸಮಾಲೋಚಕ ಮಂಜುನಾಥ ಕಂಬಾಳಿಮಠ ಮಾತನಾಡಿ, ನಮ್ಮ ಆರೋಗ್ಯ ನಮ್ಮ ಕೈುಲ್ಲಿ ಇದೆ. ಕ್ಷಯರೋಗ ಗುಣಪಡಿಸಲು ಸಾಧ್ಯ. ಶಾಲಾ-ಕಾಲೇಜಿನಲ್ಲಿ ಕ್ಷಯರೋಗದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು.
ಪ್ರಮುಖರಾದ ಕ್ಷಯರೋಗ ನಿರ್ಮೂಲನಾ ಕೇಂದ್ರದ ಹಿರಿಯ ಆರೋಗ್ಯ ಮೇಲ್ವಿಚಾರಕ ಸಂತೋಷ ಕುಡಳ್ಳಿ ರಸ ಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ನಂತರ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಎಸ್.ಎಸ್. ಮರಗೋಳ ಪದವಿ ವಿದ್ಯಾಲಯದ ಪ್ರಾಚಾರ್ಯ ಡಾ| ಅನಿಲಕುಮಾರ ಕೋಪ್ಪಳಕರ್, ಪ್ರಾಧ್ಯಾಪಕರಾದ ಮಲ್ಲಪ್ಪ ಬೋತಗಿ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿ ಕಾರಿ ಡಾ| ಅಬ್ದಲ್ ರಹೀಮ್, ಉಪನ್ಯಾಸಕರಾದ ಶಿವಶಂಕರ ಹೀರೆಮಠ, ಮಹ್ಮದ್ ಇರ್ಫಾನ್ ಮತ್ತಿತರರು ಇದ್ದರು.