Advertisement

ಕ್ಷಯ ಸಂಪೂರ್ಣ ನಿರ್ಮೂಲನೆಗೆ ಕೈಜೋಡಿಸಿ

12:43 PM Mar 25, 2017 | Team Udayavani |

ದಾವಣಗೆರೆ: ಭೂತಾಕಾರವಾಗಿ ಆವರಿಸುವ ಕ್ಷಯವನ್ನು ಜಿಲ್ಲೆಯಲ್ಲಿ ಸಂಪೂರ್ಣ ನಿರ್ಮೂಲನೆಗೆ ಪ್ರತಿಯೊಬ್ಬರೂ ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಮನವಿ ಮಾಡಿದ್ದಾರೆ. ಶುಕ್ರವಾರ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ವಿಶ್ವ ಕ್ಷಯರೋಗ ದಿನಾಚರಣೆ-2017 ಉದ್ಘಾಟಿಸಿ ಮಾತನಾಡಿದರು.

Advertisement

ಜಿಲ್ಲೆಯಲ್ಲಿ 2015- 16 ನೇ ಸಾಲಿನಲ್ಲಿ 1,354 ಜನರು ಕ್ಷಯಕ್ಕೆ ತುತ್ತಾಗಿದ್ದು, 1,328 ಜನರು ಸಂಪೂರ್ಣ ಗುಣಮುಖರಾಗಿದ್ದಾರೆ. ವೈದ್ಯರು ಸೇರಿದಂತೆ ಎಲ್ಲರೂ ಮನಸ್ಸು ಮಾಡಿದರೆ ಕ್ಷಯವನ್ನು ನಿರ್ಮೂಲನೆ ಮಾಡಬಹುದು ಎಂದರು. ವಿಶ್ವದ್ಯಾಂತ ವರ್ಷಕ್ಕೆ 10.45 ಮಿಲಿಯನ್‌ ಜನ ಕ್ಷಯರೋಗಿಗಳು ದಾಖಲಾಗುತ್ತಿದ್ದಾರೆ.

 ಭಾರತದಲ್ಲಿ ಪ್ರತಿದಿನ 6 ಸಾವಿರ ಜನ ಕ್ಷಯಕ್ಕೆ ತುತ್ತಾಗುತ್ತಿದ್ದಾರೆ. ಪ್ರತಿ 5 ನಿಮಿಷಕ್ಕೆ ಇಬ್ಬರಂತೆ 600 ಜನರು ಸಾವನ್ನಪ್ಪುತ್ತಿದ್ದಾರೆ. ಕ್ಷಯರೋಗವು ಒಬ್ಬರಿಂದ ಒಬ್ಬರಿಗೆ ಕೇವಲ ಗಾಳಿ ಮೂಲಕ ಸುಲಭವಾಗಿ ಹರಡುವುದರಿಂದ ಅವರನ್ನು ದೂರವೇ ಇಡಲಾಗುತ್ತಿದೆ. ಆದರೆ, ಈಗ ಡಾಟ್ಸ್‌ ನಂತಹ ಉತ್ತಮ ಚಿಕಿತ್ಸೆ ಲಭ್ಯವಿದೆ.

6ರಿಂದ 9 ತಿಂಗಳ ಕಾಲ ನಿರಂತರ ಚಿಕಿತ್ಸೆಯಿಂದ ಸಂಪೂರ್ಣ ಗುಣಮುಖರಾಗಬಹುದು. ಕ್ಷಯದ ಬಗ್ಗೆ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ. ಶುಶ್ರೂಷಕ ವರ್ಗ, ಆಶಾ ಕಾರ್ಯಕರ್ತೆಯರು ಜನರಿಗೆ ಕ್ಷಯ, ನಿವಾರಣೆ ಕುರಿತು ಇನ್ನೂ ಹೆಚ್ಚಿನ ಮಟ್ಟದಲ್ಲಿ ತಿಳಿಸಿ ಹೇಳುವ ಅಗತ್ಯವಿದೆ. ಇಂದಿನಿಂದಲೇ ಜಿಲ್ಲೆಯಲ್ಲಿ ಸಂಪೂರ್ಣವಾಗಿ ಕ್ಷಯರೋಗ ನಿರ್ಮೂಲನೆಗೆ ಶ್ರಮಿಸಬೇಕಿದೆ ಎಂದು ತಿಳಿಸಿದರು. 

ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ| ಜಿ. ಡಿ. ರಾಘವನ್‌ ಮಾತನಾಡಿ, 1882ರಲ್ಲಿ ಜರ್ಮನಿಯ ರಾಬರ್ಟ್‌ ಕಾಕ್‌ ಕ್ಷಯಕ್ಕೆ ಕಾರಣವಾಗುವ ಮೈಕ್ರೋ ಬ್ಯಾಕೀrರಿಯ ಟ್ಯೂಬರ್‌ಕುಲೋಸಿಸ್‌ ಸೂಕ್ಷ್ಮಾಣು ಕಂಡು ಹಿಡಿದ ಸ್ಮರಣಾರ್ಥ 1982 ರಿಂದ ಜಗತ್ತಿನ ಎಲ್ಲಾ ಕಡೆ ಮಾ. 24 ರಂದು ಕ್ಷಯರೋಗ ದಿನಾಚರಣೆ ಆಚರಿಸಲಾಗುತ್ತಿದೆ.

Advertisement

ದಿನಾಚರಣೆ ಅಂಗವಾಗಿ ಮಾಹಿತಿ ಶಿಕ್ಷಣ ಮತ್ತು ಸಂವಹನ, ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಪ್ರತಿ ಮೂರು ತಿಂಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಐಇಸಿ ಕಾರ್ಯಕ್ರಮ, ಸ್ಲಂ, ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ. 1998 ರಲ್ಲಿ ಜಾರಿಗೆ ಬಂದಪರಿಷ್ಕೃತ ರಾಷ್ಟ್ರೀಯ ಕ್ಷಯ ನಿಯಂತ್ರಣ ಕಾರ್ಯಕ್ರಮಗಳಿಂದಾಗಿ ಕ್ಷಯ ನಿಯಂತ್ರಣಕ್ಕೆ ಬಂದಿದೆ.

ರಾಜ್ಯದ ಸರಾಸರಿ ಗುಣಮುಖ ಪ್ರಮಾಣ ಶೇ. 81 ಇದ್ದರೆ ದಾವಣಗೆರೆ ಜಿಲ್ಲೆಯಲ್ಲಿ ಶೇ. 87 ರಷ್ಟಿದೆ. ಗುಣಮುಖ ಪ್ರಮಾಣದಲ್ಲಿ ರಾಜ್ಯದಲ್ಲೇ ದಾವಣಗೆರೆ ಜಿಲ್ಲೆ 3ನೇ ಸ್ಥಾನ ಹೊಂದಿದೆ ಎಂದು ತಿಳಿಸಿದರು. ಜಿಲ್ಲಾ ಆಸ್ಪತ್ರೆ ನಿವಾಸಿ ವೈದ್ಯಾಧಿಕಾರಿ ಡಾ| ಎಂ.ಎಸ್‌. ರಾಘವೇಂದ್ರಸ್ವಾಮಿ ಮಾತನಾಡಿ, ಕ್ಷಯ ರೋಗಿಗಳನ್ನು ಅತ್ಯಂತ ನಿರ್ಲಕ್ಷéದಿಂದ ಕಾಣಲಾಗುತ್ತಿದ್ದು, ಮನೆಯಿಂದ ಹೊರ ಹಾಕುವುದು ಸಾಮಾನ್ಯವಾಗಿದೆ. 

ಅಂತಹವರಿಗೆ ಪೋಷಕಾಂಶ ಅತ್ಯಗತ್ಯ. ಊಟಕ್ಕೂ ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ನೀಡುವ ಮಧ್ಯಾಹ್ನ ಊಟ ಯೋಜನೆಯಲ್ಲಾದರೂ ಊಟದ ವ್ಯವಸ್ಥೆ ಮಾಡಬೇಕು ಹಾಗೂ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಒದಗಿಸಿದಲ್ಲಿ ಅವರಿಗೆ ಅನುಕೂಲವಾಗುತ್ತದೆ ಎಂದು ಜಿಲ್ಲಾಧಿಕಾರಿಗಳ ಗಮನ ಸೆಳೆದರು. ಜಿಲ್ಲಾ ಆಯುಷ್‌ ಅಧಿಕಾರಿ ಡಾ| ಯು. ಸಿದ್ದೇಶ್‌ ಮಾತನಾಡಿ, ಚಿಕಿತ್ಸಾ ಪದ್ಧತಿ ಯಾವುದಾದರೇನು ರೋಗ ಗುಣಮುಖ ನಿವಾರಣೆಯಲ್ಲಿ ಒಂದಾಗೋಣ.

ಕ್ಷಯ ನಿವಾರಣೆಗೆ ಇಲಾಖೆಯಿಂದ ಎಲ್ಲಾ ರೀತಿಯಲ್ಲಿ ಸಹಕರಿಸುವುದಾಗಿ ತಿಳಿಸಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಂ.ಎಸ್‌. ತ್ರಿಪುಲಾಂಬ, ಜಿಲ್ಲಾ ಆಸ್ಪತ್ರೆ ಅಧೀಕ್ಷಕಿ ಡಾ| ಎಚ್‌.ಡಿ. ನೀಲಾಂಬಿಕೆ, ಡಾ| ಆರ್‌.ಜಿ. ಗೀತಾಲಕ್ಷ್ಮಿ ಇತರರು ಇದ್ದರು. ಕ್ಷಯ ಮತ್ತು ಎಚ್‌ಐವಿ ನಿಯಂತ್ರಣದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ವೈದ್ಯರು, ಆಶಾ ಕಾರ್ಯಕರ್ತೆಯರು, ಪ್ರಯೋಗಶಾಲಾ ತಂತ್ರಜ್ಞರು ಮತ್ತು ಇತರೆ ಸಿಬ್ಬಂದಿಯನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.   

Advertisement

Udayavani is now on Telegram. Click here to join our channel and stay updated with the latest news.

Next