Advertisement

ಜೋಯಿಡಾ : ಕಾಳಿ ನದಿಯಲ್ಲಿ ರ‍್ಯಾಫ್ಟಿಂಗ್ ವೇಳೆ ತಪ್ಪಿದ ಭಾರೀ ಅನಾಹುತ

04:37 PM Apr 15, 2022 | Team Udayavani |

ಜೋಯಿಡಾ : ಪ್ರವಾಸೋದ್ಯಮಕ್ಕೆ ಮೂಲ ಶಕ್ತಿಯಾದ ಕಾಳಿ ನದಿಯ ಇಳವಾ ಎಂಬಲ್ಲಿ ಪ್ರವಾಸಿಗರನ್ನು ಹೊತ್ತುಕೊಂಡು ಹೋಗುತ್ತಿದ್ದ ರ‍್ಯಾಫ್ಟ್ ಒಂದು ನೀರು ರಭಸವಾಗಿ ದುಮ್ಮುಕ್ಕುವಲ್ಲಿ ಕಲ್ಲಿಗೆ ತಾಗಿ ಸಿಕ್ಕಿಹಾಕಿಕೊಂಡ ಸಂದರ್ಭದಲ್ಲಿ ಪಕ್ಕದಲ್ಲೆ ಇದ್ದ ರ‍್ಯಾಫ್ಟ್ ತಂಡದವರ ಸಮಯೋಚಿತ ಸ್ಪಂದನೆಯಿಂದ ಆಗಬಹುದಾದ ಅನಾಹುತವೊಂದು ತಪ್ಪಿದ ಘಟನೆ ಜೋಯಿಡಾ ತಾಲೂಕಿನ ಗಣೇಶಗುಡಿಯ ಇಳವಾ ಎಂಬಲ್ಲಿ ಗುರುವಾರ ನಡೆದಿದೆ. ಹಲವು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Advertisement

ಇಳವಾದಲ್ಲಿ ಮಿಕ್ಕುಳಿದ ರ‍್ಯಾಫ್ಟ್ ಗಳು ಇಲ್ಲದೇ ಇರುತ್ತಿದ್ದಲ್ಲಿ ದೊಡ್ಡ ಅನಾಹುತವಾಗುತ್ತಿತ್ತು. ಇಳಿಜಾರಿನಲ್ಲಿ ಕಲ್ಲಿಗೆ ರ‍್ಯಾಫ್ಟ್ ಸಿಕ್ಕಿ ಹಾಕಿಕೊಂಡಿದೆ. 8 ಜನರು ಇರಬೇಕಾದ ರ‍್ಯಾಫ್ಟ್ ನಲ್ಲಿ ನಿಗದಿಗಿಂತ ಹೆಚ್ಚು ಜನರನ್ನು ಕರೆದುಕೊಂಡು ಹೋಗಿದ್ದು, ಇನ್ನೂ ಸುರಕ್ಷಾ ಪರಿಕರವಾದ ಹೆಲ್ಮೆಟ್ ಧರಿಸದೇ ಇರುವುದು ಸಹ ದೊಡ್ಡ ತಪ್ಪೆ ಆಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಇಳವಾದಲ್ಲಿ ಸಾಕಷ್ಟು ಜಲಸಾಹಸ ಕ್ರೀಡೆ, ಬೋಟಿಂಗ್ ಉದ್ಯಮಗಳ ಚಟುವಟಿಕೆಯಿದೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೇ, ಗಣೇಶಗುಡಿಯಿಂದ ಮೌಳಂಗಿಯವರೆಗೆ ರ‍್ಯಾಫ್ಟಿಂಗ್ ನಡೆಸಲು ಜಂಗಲ್ ಲಾಡ್ಜಸ್ ನವರು ಟೆಂಡರ್ ಕರೆಯುತ್ತಾರೆ. ಜಂಗಲ್ ಲಾಡ್ಜಸ್ ಅಧೀನದಲ್ಲಿ ರ‍್ಯಾಫ್ಟಿಂಗ್ ನಡೆಯುತ್ತದೆ. ಆದರೆ ಗಣೇಶಗುಡಿ, ಇಳವಾ ನದಿ ಹತ್ತಿರದ ಪ್ರದೇಶದಲ್ಲಿ ಜಲಸಾಹಸ ಕ್ರೀಡೆ, ಬೋಟಿಂಗ್ ಮಾಡಲು ಪ್ರವಾಸೋದ್ಯಮ ಇಲಾಖೆ ಕೆಲವೊಂದು ಷರತ್ತುಗಳನ್ನು ವಿಧಿಸಿ ಒಂದೊಂದು ಬೋಟಿಗೂ ಒಂದೊಂದು ಪರವಾನಿಗೆ ನೀಡುತ್ತದೆ. ಆದರೆ ಅದು ರ‍್ಯಾಫ್ಟಿಂಗ್ ಗೆ ಅಲ್ಲ ಎನ್ನುವುದನ್ನು ಇಲ್ಲಿ ಗಮನಿಸಬೇಕು. ಪ್ರವಾಸೋದ್ಯಮ ಇಲಾಖೆಯಿಂದ ಜಲಸಾಹಸ ಕ್ರೀಡೆ, ಬೋಟಿಂಗ್ ಗಷ್ಟೆ ಪರವಾನಿಗೆ ಪಡೆದು, ಅದೇ ಪರವಾನಿಗೆಯನ್ನು ಮುಂದಿಟ್ಟುಕೊಂಡು ರ‍್ಯಾಫ್ಟಿಂಗ್ ಮಾಡಲಾಗುತ್ತಿರುವುದು ಇಷ್ಟೆಲ್ಲಾ ರಾದ್ದಾಂತಗಳಿಗೆ ಕಾರಣವಾಗಿದೆ.

ರಭಸವಾಗಿ ನೀರು ಹರಿಯುವಲ್ಲಿ ಮತ್ತು ಏರು ತಗ್ಗುಗಳಿರುವಲ್ಲಿ ಪ್ರವಾಸೋದ್ಯಮ ಇಲಾಖೆಯವರಿಂದ ರ‍್ಯಾಫ್ಟಿಂಗ್ ಗೆ ಪರವಾನಿಗೆ ಇಲ್ಲದಿದ್ದರೂ, ಬೋಟಿಂಗ್, ಜಲಸಾಹಸ ಕ್ರೀಡೆಯ ಪರವಾನಿಗೆಯಲ್ಲಿಯೇ ಕಾನೂನುಬಾಹಿರವಾಗಿ ರ‍್ಯಾಫ್ಟಿಂಗ್ ಮಾಡಲಾಗುತ್ತಿದೆ. ಇದನ್ನು ನಿಯಂತ್ರಿಸಬೇಕಾದ ಪ್ರವಾಸೋದ್ಯಮ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಗಣೇಶಗುಡಿಯಿಂದ ಮೌಳಂಗಿಯವರೆಗೆ ರ‍್ಯಾಫ್ಟಿಂಗ್ ನಡೆಸಲು ಟೆಂಡರ್ ಕರೆಯುವ ಜಂಗಲ್ ಲಾಡ್ಜಸ್ ಹಾಗೂ ಅರಣ್ಯ ಇಲಾಖೆಯವರು ಗೊತ್ತಿದ್ದೂ, ಗೊತ್ತಿಲ್ಲದಂತೆ ನಾಟಕವಾಡುತ್ತಿರುವ ಹಿಂದಿನ ಮರ್ಮವೇನು ಎಂಬ ಪ್ರಶ್ನೆ ಎದುರಾಗಿದೆ.

Advertisement

ಒಮ್ಮೆಲೇ  ಹಣ ಮಾಡಬೇಕೆಂಬ ಹಪಾಹಪಿತನದಿಂದ ಇದ್ದ ಬಿದ್ದವರೆಲ್ಲ ಪ್ರವಾಸೋದ್ಯಮ ಇಲಾಖೆಯಿಂದ ಪರವಾನಿಗೆ ಪಡೆದರೆ ಏನಾಗಬಹುದು ಎನ್ನುವುದಕ್ಕೆ ಇಳವಾದಲ್ಲಿ ನಡೆದ ಈ ಘಟನೆಯೆ ಸಾಕ್ಷಿ. ಇಂತಹ ಘಟನೆಗಳು ನಡೆಯುವಂತಾಗಲೂ ಪ್ರಮುಖ ಕಾರಣ ಜಂಗಲ್ ಲಾಡ್ಜಸ್ ಮತ್ತು ಅರಣ್ಯ ಇಲಾಖೆಯ ದಿವ್ಯ ನಿರ್ಲಕ್ಷ್ಯ ಹಾಗೂ ಪರವಾನಿಗೆ ನೀಡಿ ಕೈ ತೊಳೆದುಕೊಳ್ಳುತ್ತಿರುವ ಪ್ರವಾಸೋದ್ಯಮ ಇಲಾಖೆ ಎಂದೇ ಹೇಳಲಾಗುತ್ತಿದ್ದು, ಇವೆಲ್ಲವುಗಳ ಹಿಂದೆ ಝಣ ಝಣ ಕಾಂಚಣದ ಲೆಕ್ಕಾಚಾರವೂ ಅಡಗಿದೆ ಎಂಬ ಮಾತು ಚರ್ಚೆಯಲ್ಲಿದ್ದು, ಈ ಇಲಾಖೆಗಳ ದಿವ್ಯ ನಿರ್ಲಕ್ಷ್ಯಕ್ಕೆ ಪ್ರವಾಸೋದ್ಯಮ ಅಪಾಯವನ್ನು ಅಹ್ವಾನಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ವರದಿ : ಸಂದೇಶ್.ಎಸ್.ಜೈನ್

Advertisement

Udayavani is now on Telegram. Click here to join our channel and stay updated with the latest news.

Next