ಸಾಧು ಕೋಕಿಲ ಅವರ ಕಾಮಿಡಿ, ಅವರ ಹಾವಭಾವ ನೋಡಿದವರು ಬಾಲಿವುಡ್‌ನ ಖ್ಯಾತ ಕಾಮಿಡಿಯನ್ ಜಾನಿ ಲಿವರ್‌ನ ಅನುಕರಣೆ ಮಾಡುತ್ತಿದ್ದಾರೆಂದು ಹೇಳಿದ್ದರು. ಸಾಧು ಕೋಕಿಲ ಅದನ್ನು ಒಪ್ಪಿಕೊಂಡಿದ್ದರು ಕೂಡಾ. “ನಾನು ಜಾನಿಯನ್ನು ಅನುಕರಣೆ ಮಾಡುತ್ತೇನೆ’ ಎಂದು ಈ ಹಿಂದೊಮ್ಮೆ ಹೇಳಿದ್ದ ಸಾಧು ಈ ಬಾರಿ ಜಾನಿ ಲಿವರ್ ಎದುರೇ “ನಾನು ಜಾನಿ ಲಿವರ್‌ನ ಅಭಿಮಾನಿ ಹಾಗೂ ಅವರೇ ನನ್ನ ಗುರುಗಳು’ ಎನ್ನುವ ಮೂಲಕ ಜಾನಿ ಮೇಲಿನ ಪ್ರೀತಿಯನ್ನು ತೋರಿಸಿದ್ದಾರೆ.
“ನಾನು ಜಾನಿ ಲಿವರ್‌ನ ಮೊದಲ ಬಾರಿಗೆ ನೋಡಿದ್ದು ಮುಂಬೈನಲ್ಲಿ. ಡಾ.ರಾಜ್ ಅವರ ಜೊತೆ ಯಾವುದೋ ಕಾರ್ಯಕ್ರಮಕ್ಕೆ ಹೋಗಿದ್ದೆ. ಅಲ್ಲಿನ ಷಣ್ಮುಗನಂದ ಹಾಲ್‌ನಲ್ಲಿ ಜಾನಿ ಲಿವರ್ ಕಾರ್ಯಕ್ರಮ ಕೊಡುತ್ತಿದ್ದರು. ಸತತವಾಗಿ ತಮ್ಮ ವಿಭಿನ್ನ ಹಾವಭಾವಗಳ ಮೂಲಕ ನಗಿಸುತ್ತಿದ್ದರು. ನಿಜ ಹೇಳಬೇಕೆಂದರೆ ಅವತ್ತೇ ನಾನು ಹುಚ್ಚನಾಗಿಬಿಟ್ಟೆ. ಅವತ್ತಿನಿಂದಲೇ ಜಾನಿಯಂತೆ ನಾನು ಆಡತೊಡಗಿದೆ.
ನಿಜ ಹೇಳಬೇಕೆಂದರೆ ಕಾಮಿಡಿ ಟೈಮಿಂಗ್‌ನಲ್ಲಿ ಹೇಗೆ ರಿಯಾಕ್ಷನ್ಸ್ ಕೊಡಬೇಕೆಂಬುದನ್ನು ಇವರ ರಿಯಾಕ್ಷನ್ ನೋಡಿಯೇ ಕಲಿತಿದ್ದು. ಇವರು ನನಗೆ ಗುರುಗಳಿದ್ದಂಗೆ. ಟಾಪ್ ಕಾಮಿಡಿಯನ್ ಆದರೂ ತುಂಬಾ ಸಿಂಪಲ್ ಆಗಿರುತ್ತಾರೆ. ನಮಗೆ ನಾವೇ ದೊಡ್ಡವರು ಎಂದುಕೊಂಡಿರುತ್ತೇವೆ. ಆದರೆ, ನಮಗಿಂತ ದೊಡ್ಡವರನ್ನು ನೋಡಿದಾಗ ಮಾತ್ರ ನಾವು ಇನ್ನೂ ಚಿಕ್ಕವರು ಎಂದು ಗೊತ್ತಾಗುತ್ತದೆ. ಪಾದರಸದಂತಹ ವ್ಯಕ್ತಿತ್ವದ ಜಾನಿ, ನಿರ್ದೇಶಕರು ಎಷ್ಟೇ ಹೊತ್ತಿಗೆ ಕರೆದರೂ ಸಿದ್ಧರಾಗಿರುತ್ತಾರೆ.
ಯಾವುದೇ ಪ್ರಾಂಟಿಂಗ್ ಇಲ್ಲದೇ ಆರಾಮವಾಗಿ ನಟಿಸುತ್ತಾರೆ. ಹೀರೋ, ವಿಲನ್ ಪಾತ್ರಗಳನ್ನು ಯಾವುದೇ ಭಾಷೆಯಲ್ಲಾದರೂ ಸುಲಭವಾಗಿ ಮಾಡಿಬಿಡಬಹುದು. ಆದರೆ ಪರಭಾಷೆಯಲ್ಲಿ ಕಾಮಿಡಿ ಮಾಡೋದು ಸುಲಭವಲ್ಲ. ಏಕೆಂದರೆ ನಮಗೆ ಸಂದರ್ಭ ಹಾಗೂ ಡೈಲಾಗ್ ಅರ್ಥವಾಗಬೇಕು. ಆದರೆ, ಜಾನಿ ಲಿವರ್ ಆ ವಿಷಯದಲ್ಲಿ ಗ್ರೇಟ್’ ಎಂದು ಜಾನಿ ಬಗ್ಗೆ ಹೇಳಿಕೊಂಡರು ಸಾಧು.
ಸಾಧು ಎಂಆರ್‌ಐ ಮಾಡಿಸಿದರೆ ಮತ್ತಷ್ಟು ಟ್ಯಾಲೆಂಟ್ ಪತ್ತೆಯಾಗಬಹುದು: ಕೇವಲ ಸಾಧುಕೋಕಿಲ ಮಾತ್ರ ಜಾನಿ ಲಿವರ್ ಗುಣಗಾನ ಮಾಡಿಲ್ಲ, ಜಾನಿ ಲಿವರ್ ಕೂಡಾ ಸಾಧು ಕೋಕಿಲ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. “ಸಾಧು ಸಿಕ್ಕಾಪಟ್ಟೆ ಪ್ರತಿಭಾವಂತ. ಆತ ನಿರ್ಮಾಪಕ, ನಿರ್ದೇಶಕ, ಸಂಗೀತ ನಿರ್ದೇಶಕ, ನಟ, ಗಾಯಕ …. ಹೀಗೆ ಏನೇನೋ ಆಗಿದ್ದಾರೆ.
ಅದೇ ಕಾರಣಕ್ಕೆ ನಾನು ಸಾಧುಗೆ ಆಗಾಗ ಹೇಳುತ್ತಿರುತ್ತೇನೆ, ಎಂಆರ್‌ಐ ಮಾಡಿಸಿ, ಆಗ ಇನ್ನೂ ಒಂದಷ್ಟು ಪ್ರತಿಭೆಗಳು ಪತ್ತೆಯಾಗಬಹುದೆಂದು. ಅಷ್ಟೊಂದು ಪ್ರತಿಭಾವಂತ ಸಾಧು’ ಎಂಬುದು ಜಾನಿ ಲಿವರ್ ಮಾತು. ಅಂದಹಾಗೆ, “ಗರ’ ಚಿತ್ರದಲ್ಲಿ ಜಾನಿ ಲಿವರ್ ಹಾಗೂ ಸಾಧುಕೋಕಿಲ ಜೊತೆಯಾಗಿ ನಟಿಸಿದ್ದು, “ಜುಗಾರಿ ಬ್ರದರ್ಸ್’ ಆಗಿ ಕಾಣಿಸಿಕೊಂಡಿದ್ದಾರೆ.