Advertisement

ನ್ಯೂಜಿಲ್ಯಾಂಡಿನ ಜಾನ್‌ ರೀಡ್‌ ನಿಧನ

11:53 PM Oct 14, 2020 | mahesh |

ಆಕ್ಲಂಡ್‌: ನ್ಯೂಜಿಲ್ಯಾಂಡಿನ ಸರ್ವಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿದ್ದ ಮಾಜಿ ನಾಯಕ ಮತ್ತು ವಿಸ್ಡನ್‌ ವರ್ಷದ ಕ್ರಿಕೆಟಿಗ ಪುರಸ್ಕೃತ ಜಾನ್‌ ರೀಡ್‌ (92) ಅವರು ದೊಡ್ಡ ಕರುಳಿನ ಕ್ಯಾನ್ಸರ್‌ನಿಂದಾಗಿ ಬುಧವಾರ ನಿಧನ ಹೊಂದಿದರು.

Advertisement

ನಿಧನ ಹೊಂದುವ ಮೊದಲು ರೀಡ್‌ ಅವರು ದೇಶದ ಅತೀ ಹಿರಿಯ ಟೆಸ್ಟ್‌ ಕ್ರಿಕೆಟಿಗ ಮತ್ತು ವಿಶ್ವದ ಐದನೇ ಹಿರಿಯ ಕ್ರಿಕೆಟಿಗರೆಂಬ ಗೌರವಕ್ಕೆ ಪಾತ್ರರಾಗಿದ್ದರು. ಜಾನ್‌ ಆರ್‌. ರೀಡ್‌ ಅವರು ನ್ಯೂಜಿಲ್ಯಾಂಡ್‌ ಕ್ರಿಕೆಟಿನ ಕಾಲಿನ್‌ ಮೀಡ್ಸ್‌ ಆಗಿದ್ದರು ಎಂದು ನ್ಯೂಜಿಲ್ಯಾಂಡ್‌ ಕ್ರಿಕೆಟ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡೇವಿಡ್‌ ವೈಟ್‌ ಹೇಳಿದ್ದಾರೆ. ಅವರು ಪತ್ನಿ ನೋರ್ಲಿ, ಮಕ್ಕಳಾದ ಆಲಿಸನ್‌, ರಿಚರ್ಡ್‌ ಮತ್ತು ಆ್ಯನ್‌ ಅವರನ್ನು ಅಗಲಿದ್ದಾರೆ.

ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಆಗಿದ್ದ ರೀಡ್‌ ಮಧ್ಯಮ ವೇಗದಲ್ಲಿ ಬೌಲಿಂಗ್‌ ನಡೆಸುತ್ತಿದ್ದರು. 1949ರಲ್ಲಿ ಇಂಗ್ಲೆಂಡ್‌ ವಿರುದ್ಧ ಮ್ಯಾಂಚೆಸ್ಟರ್‌ ಟೆಸ್ಟ್‌ ಆಡುವ ಮೂಲಕ ಅವರು ಟೆಸ್ಟ್‌ಗೆ ಪದಾರ್ಪಣೆಗೈದಿದ್ದರು. 1965ರ ವರೆಗೆ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಿದ್ದರು. ಆರು ಶತಕ ಸಹಿತ 3,428 ರನ್‌ ಹೊಡೆದಿದ್ದಾರೆ. 1961ರಲ್ಲಿ ಜೊಹಾನ್ಸ್‌ಬರ್ಗ್‌ನಲ್ಲಿ ಬಾಕ್ಸಿಂಗ್‌ ಡೇ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 142 ರನ್‌ ಹೊಡೆದಿರುವುದು ಅವರ ಜೀವನಶ್ರೇಷ್ಠ ನಿರ್ವಹಣೆಯಾಗಿದೆ. ಅವರು 85 ವಿಕೆಟ್‌ ಕೂಡ ಉರುಳಿಸಿದ್ದಾರೆ. 246 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ ಅವರು 16,128 ರನ್‌ ಮತ್ತು 466 ವಿಕೆಟ್‌ ಉರುಳಿಸಿದ ಸಾಧನೆ ಮಾಡಿದ್ದಾರೆ.

1955-56ರಲ್ಲಿ ಭಾರತ ಪ್ರವಾಸದ ವೇಳೆ ರೀಡ್‌ 70 ಸರಾಸರಿಯಂತೆ 493 ರನ್‌ ಹೊಡೆದಿದ್ದರು. ನಿವೃತ್ತಿಯ ಬಳಿಕ ಅವರು ರಾಷ್ಟ್ರೀಯ ಆಯ್ಕೆಗಾರ, ತಂಡ ವ್ಯವಸ್ಥಾಪಕ ಮತ್ತು ಐಸಿಸಿ ಮ್ಯಾಚ್‌ ರೆಫ‌ರಿಯಾಗಿ ಕರ್ತವ್ಯ ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next