ಕನ್ನಡ ಚಿತ್ರರಂಗದಲ್ಲಿ ತಾಯಿ ಮತ್ತು ತಾಯಿಯ ವ್ಯಕ್ತಿತ್ವ, ಆಕೆಯ ತ್ಯಾಗವನ್ನು ಬಣ್ಣಿಸುವ ನೂರಾರು ಹಾಡುಗಳನ್ನು ಕೇಳಿರುತ್ತೀರಿ. ಇಂದಿಗೂ ಅದೆಷ್ಟೋ ಹಾಡುಗಳು ಕೇಳುಗರ ಬಾಯಲ್ಲಿ ಆಗಾಗ್ಗೆ ಗುನುಗುತ್ತಲೇ ಇರುತ್ತವೆ. ಅಂಥದ್ದೇ ಸಾಲಿಗೆ ಈಗ “ಪರಿಮಳ ಡಿಸೋಜಾ’ ಸಿನಿಮಾದ ಮತ್ತೂಂದು ಹಾಡು ಹೊಸದಾಗಿ ಸೇರ್ಪಡೆಯಾಗುತ್ತಿದೆ.
ಹೌದು, ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸಿರುವ “ಪರಿಮಳ ಡಿಸೋಜಾ’ ಸಿನಿಮಾದ ತಾಯಿ ಸೆಂಟಿಮೆಂಟ್ ಹಾಡೊಂದು ಇತ್ತೀಚೆಗೆ ಬಿಡುಗಡೆಯಾಗಿದೆ. “ಅಮ್ಮ ಎಂಬ ಹೆಸರೆ ಆತ್ಮ ಬಲ…’ ಎಂಬ ಈ ಗೀತೆಗೆ ಪ್ರೇಮಕವಿ ಕೆ. ಕಲ್ಯಾಣ್ ಸಾಹಿತ್ಯ ಬರೆದಿದ್ದು, ಜೋಗಿ ಪ್ರೇಮ್ ಈ ಹಾಡಿಗೆ ಧ್ವನಿಯಾಗಿದ್ದಾರೆ.
ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಕೆ. ಕಲ್ಯಾಣ್, ಹಿರಿಯ ನಟಿ ಭವ್ಯಾ, ಝೇಂಕಾರ್ ಮ್ಯೂಸಿಕ್ ಸಂಸ್ಥೆಯ ಭರತ್ ಮುಂತಾದವರು ಹಾಜರಿದ್ದು, ಈ ಹಾಡಿನ ಲಿರಿಕಲ್ ವಿಡಿಯೋವನ್ನು ಬಿಡುಗಡೆ ಮಾಡಿದರು.
ಇದೇ ವೇಳೆ ಮಾತನಾಡಿದ “ಪರಿಮಳ ಡಿಸೋಜಾ’ ಸಿನಿಮಾದ ನಿರ್ದೇಶಕ ಡಾ. ಗಿರಿಧರ್ ಹೆಚ್. ಟಿ, “ನಮ್ಮ ಸಿನಿಮಾಕ್ಕಾಗಿ ಕೆ. ಕಲ್ಯಾಣ್ ಅಮ್ಮನ ಬಗ್ಗೆ ಒಳ್ಳೆಯ ಹಾಡು ಬರೆದಿದ್ದಾರೆ. ಈ ಹಾಡನ್ನು ಅಷ್ಟೇ ಅದ್ಭುತವಾಗಿ ಜೋಗಿ ಪ್ರೇಮ್ ಹಾಡಿದ್ದಾರೆ. ಇದೊಂದು ಮರ್ಡರ್ ಮಿಸ್ಟರಿ ಜೊತೆಗೆ ಆ್ಯಕ್ಷನ್, ಸೆಂಟಿಮೆಂಟ್ ಎಲ್ಲಾ ಅಂಶಗಳಿರುವ ಸಿನಿಮಾ. ಸಿನಿಮಾದ ಕಥೆಗೆ ಪೂರಕವಾಗಿ ಈ ಹಾಡು ಮೂಡಿಬಂದಿದೆ’ ಎಂದು ಮಾಹಿತಿ ನೀಡಿದರು.
ಈ ಹಾಡಿನ ಬಗ್ಗೆ ಮಾತನಾಡಿದ ಪ್ರೇಮಕವಿ ಕೆ. ಕಲ್ಯಾಣ್, “ತಾಯಿ ಬಗ್ಗೆ ಹಾಡು ಬರೆಯಬೇಕೆಂದರೆ ಏನೋ ಒಂಥರ ಖುಷಿ. ಈ ಹಾಡನ್ನು ಶೀಘ್ರವಾಗಿ ಬರೆಯಬೇಕಿತ್ತು. ಆಗ ನಿರ್ಮಾಪಕರು ನಮ್ಮ ಅತ್ತಿಗೆಯ ಮೂಲಕ ಬೇಗ ಬರೆದುಕೊಡಲು ಹೇಳಿಸಿದರು. ಆಗ ನನಗೆ ತಿಳಿಯಿತು ನಿರ್ಮಾಪಕರು ನಮಗೆ ಬಳಗ ಎಂದು. ಅಮ್ಮನ ಹಾಡನ್ನು ಪ್ರೇಮ್ ಅಷ್ಟೇ ಅದ್ಭುತವಾಗಿ ಹಾಡಿದ್ದಾರೆ’ ಎಂದರು.
ಇನ್ನು ಹಿರಿಯ ನಟಿ ಭವ್ಯಾ “ಪರಿಮಳಾ ಡಿಸೋಜಾ’ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇದೇ ವೇಳೆ ಮಾತನಾಡಿದ ಭವ್ಯಾ, “ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ನಾನು ಈ ಚಿತ್ರದಲ್ಲಿ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀನಿ. ಹಾಡು ತುಂಬಾ ಚೆನ್ನಾಗಿದ್ದು, ಎಲ್ಲರ ಮಟನಟಮುಟ್ಟುವಂತಿದೆ’ ಎಂದರು. ನಿರ್ಮಾಪಕ ವಿನೋದ್ ಶೇಷಾದ್ರಿ, ಸಂಗೀತ ನಿರ್ದೇಶಕ ಕ್ರಿಸ್ಟೋಫರ್ ಜೋಸನ್, ಛಾಯಾಗ್ರಾಹಕ ರಾಮು ಹಾಗೂ ಚಿತ್ರದಲ್ಲಿ ನಟಿಸಿರುವ ಕೋಮಲ ಬನವಾಸಿ ಸೇರಿದಂತೆ ಅನೇಕ ಕಲಾವಿದರು ಮತ್ತು ತಂತ್ರಜ್ಞರು “ಪರಿಮಳ ಡಿಸೋಜಾ’ ಚಿತ್ರದ ಬಗ್ಗೆ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಮಸ್ತ ತಾಯಂದಿರ ಪರವಾಗಿ ಸಾಂಕೇತಿಕವಾಗಿ ಮೂರು ಜನ ತಾಯಂದಿರನ್ನು ಸನ್ಮಾನಿಸಲಾಯಿತು.