ಮುಂಬಯಿ: ಜೋಗೇಶ್ವರಿ ಪಶ್ಚಿಮದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಎ. 29ರಂದು ಅಕ್ಷಯ ತೃತೀಯ ಪವಿತ್ರ ದಿನದಂದು ರಾಯರ ಬೃಂದಾವನ ಮತ್ತು ಆಂಜನೇಯ ವಿಗ್ರಹವನ್ನು ಗಂಧಲೇಪನದಲ್ಲಿ ಅಲಂಕರಿಸುವ ಮೂಲಕ 46ನೇ ಬೃಂದಾವನ ಪ್ರತಿಷ್ಠಾಪನ ದಿನಾಚರಣೆಯು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಶ್ರೀ ಕೃಷ್ಣ ವಿಟuಲ ಪ್ರತಿಷ್ಠಾನ ಮುಂಬಯಿ ವತಿಯಿಂದ ಜರಗಿದ ಈ ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ವಿಟuಲ ಪ್ರತಿಷ್ಠಾನದ ಸಂಸ್ಥಾಪಕಾಧ್ಯಕ್ಷ ವೇದ ಪುರೋಹಿತ, ಹರಿಕಥಾ ವಿದ್ವಾಂಸ ಕೈರಬೆಟ್ಟು ವಿಶ್ವನಾಥ ಭಟ್ ಅವರ ನೇತೃತ್ವದಲ್ಲಿ ಎ. 28, ಎ. 29 ಹಾಗೂ ಎ. 30ರಂದು ಕ್ರಮವಾಗಿ ನಿರಂತರ ಮೂರು ದಿನಗಳಲ್ಲಿ ಭಕ್ತ ಪ್ರಹ್ಲಾದ, ಶ್ರೀ ರಾಘವೇಂದ್ರ ಮಹಿಮೆ ಮತ್ತು ಶ್ರೀನಿವಾಸ ಕಲ್ಯಾಣ ಹರಿಕಥಾ ಕಾಲಕ್ಷೇಪ ಕಾರ್ಯಕ್ರಮವು ನಡೆಯಿತು. ಶೇಖರ ಸಸಿಹಿತ್ಲು ಮತ್ತು ಬಳಗದವರು ಹಿಮ್ಮೇಳ ಹಾರ್ಮೋನಿಯಂ ಮತ್ತು ಮೃದಂಗದಲ್ಲಿ ಸಹಕರಿಸಿದರು.
ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಬುದೇಂದ್ರ ತೀರ್ಥ ಸ್ವಾಮೀಜಿ ಅವರ ಆಶೀರ್ವಾದಿಂದ ಜರಗಿದ ಈ ಧಾರ್ಮಿಕ ಕಾರ್ಯಕ್ರಮದ ಕೊನೆಯ ದಿನ ಶ್ರೀನಿವಾಸ ಪದ್ಮಾವತಿ ದೇವಿಗೆ ಕಲ್ಯಾಣೋತ್ಸವ ವಿವಿಧ ಧಾರ್ಮಿಕ, ವಿಧಿ-ವಿಧಾನಗಳ ಮೂಲಕ ನಡೆಯಿತು. ಮಠದ ಪ್ರಧಾನ ಅರ್ಚಕರಾದ ಗುರುರಾಜ ಆಚಾರ್ ಮತ್ತು ರಾಘವೇಂದ್ರ ಆಚಾರ್, ಮಠದ ಮುಖ್ಯ ಪ್ರಬಂಧಕರಾದ ರಮಾಕಾಂತ್ ಮಾನ್ವಿ, ವಿಚಾರಣಕರ್ತ, ದೇವಸ್ಥಾನದ ಪ್ರತಿನಿಧಿ ಡಾ| ವಿ. ಪೂರ್ಣಪ್ರಜ್ಞ ಅವರು ಕಲ್ಯಾಣೋತ್ಸವದ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು.
ಪ್ರಾರಂಭದಲ್ಲಿ ಶೃಂಗರಿಸಿದ ರಥದ ಮೂಲಕ ಶ್ರೀನಿವಾಸ ದೇವರ ವಿಗ್ರಹವನ್ನು ಓಲಗ, ವಾದ್ಯ, ಸಂಗೀತಗಳ ನಿನಾದದೊಂದಿಗೆ ದೇವಸ್ಥಾನದೊಳಗೆ ತಂದು ಪ್ರತಿಷ್ಠಾಪಿಸಲಾಯಿತು. ಅನಂತರ ಅರ್ಚಕರು, ಭೂದೇವಿ, ಶ್ರೀದೇವಿಯ ನಡುವೆ ವಿಗ್ರಹ ಇರಿಸಿ ಧಾರ್ಮಿಕ ಪಾರಂಪಾರಿಕವಾಗಿ ಪೂಜಾ ವಿಧಿಯ ಮೂಲಕ ಶ್ರೀನಿವಾಸ ಕಲ್ಯಾಣ ಉತ್ಸವವನ್ನು ವಿಜೃಂಭಣೆಯಿಂದ ನಡೆಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಭಾರತ್ ಕಾಲೇಜ್ ಆಫ್ ಫೈನ್ ಆರ್ಟ್ಸ್ ಮುಂಬಯಿ ಕಲಾವಿದೆ ಯಶೋದಾ ಮತ್ತು ಬಳಗದವರಿಂದ ಕಥಕ್ಕಳಿ, ಭರತನಾಟ್ಯ ಇತ್ಯಾದಿ ನೃತ್ಯ ಪ್ರಕಾರಗಳು ಪ್ರದರ್ಶನಗೊಂಡವು. ಮೂರು ದಿನಗಳ ಕಾಲ ನಡೆದ ಉತ್ಸವದಲ್ಲಿ ನೂರಾರು ಭಕ್ತಾದಿಗಳು ಆಗಮಿಸಿ ಪ್ರಸಾದ ಸ್ವೀಕರಿಸಿದರು.
ಮಂತ್ರಾಲಯ ಶ್ರೀ ರಾಘವೇಂದ್ರ ಮಠದ ಬೃಂದಾವನವು 1971ರಲ್ಲಿ ಅಕ್ಷಯ ತೃತೀಯ ದಿನದಂದು ಪ್ರತಿಷ್ಠಾಪನೆಗೊಂಡಿದ್ದು, ಆ ಪ್ರಕಾರವಾಗಿ ಪ್ರತೀ ವರ್ಷ ಅಕ್ಷಯ ತೃತೀಯ ದಿನದಂದು ಪ್ರತಿಷ್ಠಾಪನಾ ದಿನಾಚರಣೆ, ಗಂಧಲೇಪನ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.