ಬೆಂಗಳೂರು: ಹೊಸಪೇಟೆಯ ನದಿಯಲ್ಲಿ ಹಿರಿಯ ಜೋಗತಿ ನನ್ನ ಉಡುದಾರ ಹರಿದು ಹೆಣ್ಣುಮಕ್ಕಳ ಉಡುಪು ತೊಡಿಸಿ ದೀಕ್ಷೆ ನೀಡಿದಾಗ ಅದನ್ನು ಕಂಡ ನನ್ನವ್ವ , ಬಿಕ್ಕಿ,ಬಿಕ್ಕಿ ಅತ್ತಿದ್ದರು. ಆ ಹೆತ್ತ ಕರಳಿನ ನೋವು ನನಗೀಗ ಅರ್ಥವಾಗುತ್ತಿದೆ ಎಂದು ಹಿರಿಯ ಜೋಗತಿ ನೃತ್ಯ ಕಲಾವಿದೆ ಮಂಜಮ್ಮ ಜೋಗತಿ ಬದುಕಿನ ಪಯಣದ ಸುರಳಿ ಬಿಚ್ಚಿಟ್ಟರು.
ನಯನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮವ್ವನಿಗೆ 21 ಜನ ಮಕ್ಕಳು. ಅದರಲ್ಲಿ ಉಳಿದಿದ್ದು ಕೇವಲ ನಾಲ್ಕ ಜನ. ಅದರಲ್ಲಿ 2 ಗಂಡು 2 ಹೆಣ್ಣು. ಆರನೇ ತರಗತಿಯಲ್ಲಿರುವಾಗಲೇ ನನ್ನಲ್ಲಿ ಹೆಣ್ತನ ಕಂಡು ಬಂತು. ಉಡುಗೆ ತೊಡುಗೆ ಹಾವ-ಭಾವ ಎಲ್ಲವೂ ಹೆಣ್ಣು ಮಕ್ಕಳಂತೆ ಇತ್ತು ಎಂದರು.
ನಮ್ಮದು ವ್ಯಾಪಾರಸ್ಥರ ಕುಟುಂಬ. ನನ್ನಲ್ಲಿನ ಬದಲಾದ ಈ ಗುಣ ಮನೆಯವರಲ್ಲಿ ಅಸಹನೆ ಹುಟ್ಟು ಹಾಕಿತು. ಪ್ರೌಢಶಿಕ್ಷಣ ಹಂತಕ್ಕೆ ಬರುವ ವೇಳೆಗೆ ನಾನು ಸಂಪೂರ್ಣ ಹೆಣ್ಣಾಗಿ ಬದಲಾಗಿದ್ದೆ. ಜತೆಗೆ ನನ್ನೊಳಗಿನ ಭಾವನೆ ಕೂಡ ಬಹಳಷ್ಟು ಬದಲಾಗಿತ್ತು. ಹೀಗಾಗಿಯೇ ಮನೆಯಲ್ಲಿ ಏನೂ ಮಾಡಲು ಅವರು ಬಿಡುತ್ತಿರಲಿಲ್ಲ. ಇದರಿಂದ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆ ಪ್ರಯತ್ನ ಮಾಡಿದೆ. ಆ ನಂತರ ನನ್ನನ್ನು ಮನೆಯಿಂದ ಹೂರ ಹಾಕಿದರು. ನನ್ನ ಸ್ಥಿತಿಕಂಡು ಕಣ್ಣೀರಿಟ್ಟ ನನ್ನವ್ವ ನನ್ನ ಹಿಂದೆಯೇ ಕೆಲದೂರ ಬಂದಿದ್ದರು ಎನ್ನುತ್ತಾ ಮಂಜಮ್ಮ ಹನಿಗಣ್ಣಾದರು.
ಹಳೆ ಸೀರೆಗಳನ್ನು ಬೇಡುತ್ತಿದ್ದೆ: ಮನೆಯಿಂದ ಹೊರಹಾಕಿದ ನಂತರ ದೇವಸ್ಥಾನಗಳಲ್ಲಿ ಅವರಿವರ ಮನೆಯಲ್ಲಿ ಜೀವನ ಕಳೆಯುತ್ತಿದ್ದೆ. ಬಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಂಡೆ. ಜೋಗತಿ ನೃತ್ಯ ಕಲಿತೆ. ದಾವಣಗೆರೆಯಲ್ಲಿರುವಾಗ ಒಂದು ದಿನ ರಾತ್ರಿ 8 ಗಂಟೆ ವೇಳೆ ರೈಲ್ವೆ ಗೇಟ್ ಸಮೀಪ ಇದ್ದ ಮನೆಯತ್ತ ಹೋಗುತ್ತಿದೆ ವೇಳೆ ಕೆಲವರು ನನ್ನ ತಡೆಹಿಡಿದು ಉಡುಪುಗಳನೆಲ್ಲ ಹರಿದು ಲೈಂಗಿಕ ಕಿರುಕಳು ನೀಡಿದರು. ಆ ಸನ್ನಿವೇಶ ನೆನಪಿಸಿಕೊಂಡರೆ ಜೀವನ ಸಾಕೆನಿಸುತ್ತದೆ ಎಂದರು.
ಯಾವುದೇ ಹಳ್ಳಿಗಳಲ್ಲಿ ನೃತ್ಯ ಮತ್ತು ನಾಟಕಗಳನ್ನು ಮಾಡುವಾಗ ಅಣ್ಣ ನಿಮ್ಮ ಹೆಂಡ್ತೀರ ಹಳೆ ಸೀರೆ ಇದ್ರೆ ಕೊಡಿ. ಕಾಲಿಗೆ ಕಟ್ಟಿಕೊಳ್ಳಲು ಹಳೇ ಎತ್ತಿನ ಗೆಜ್ಜೆ ಕೊಡಿ ಎಂದು ಬೇಡುತ್ತಿದ್ದೆ. ಒಂದು ಹೊತ್ತಿನ ಊಟಕ್ಕಾಗಿ ಬಹಳಷ್ಟು ಪರಿತಪಿಸಿರುವೆ. ಹಸಿವು ಪಾಠ ಕಲಿಸಿದೆ ಎಂದು ಹೇಳಿದರು.
ಬ್ಲ್ಯಾಕ್ ಬ್ಯೂಟಿ ಎಂದೆ ಹೆಸರುವಾಸಿ ಆಗಿದ್ದೆ: ಬಳ್ಳಾರಿಯಲ್ಲಿ ಇದ್ದ ದಿನಗಳಲ್ಲಿ ನಾನು ಬ್ಲ್ಯಾಕ್ ಬ್ಯೂಟಿ ಎಂದು ಹೆಸರುವಾಸಿಯಾಗಿದ್ದೆ. ಆಗಿನ ಜೋಗತಿಯರ ಉಡುಪುಗಳು ಮಾಡ್ರನ್ ಆಗಿ ಇರುತ್ತಿರಲಿಲ್ಲ. ನಾನು ಎಸ್ಸೆಸ್ಸೆಲ್ಸಿವರೆಗೂ ಓದಿದ್ದೆ ಹೀಗಾಗಿಯೇ ಮಾಡ್ರನ್ ಆಗಿದ್ದೆ. ಪ್ರೌಢಶಾಲಾ ಮಕ್ಕಳಿಗೂ ಕೂಡ ಪಾಠ ಮಾಡುತ್ತಿದ್ದೆ. ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಇಡ್ಲಿ ಮಾರಾಟಕ್ಕೂ ಇಳಿದೆ ಎಂದು ಮಂಜಮ್ಮ ಜೋಗತಿ ತನ್ನ ಬದುಕಿನ ಹೋರಾಟವನ್ನು ನೆನೆದರು.
ನೃತ್ಯ ಕ್ಷೇತ್ರದಲ್ಲಿ ಸಾಧನೆಗಾಗಿ ಹಲವು ಪ್ರಶಸ್ತಿ ಬಂದಿವೆ. ನನ್ನಿಂದ ದೂರವಾಗಿದ್ದ ನನ್ನವರು ಈಗ ಹತ್ತಿರವಾಗಿದ್ದಾರೆ. ಎಲ್ಲರನ್ನೂ ಒಡಗೂಡಿಸಿದ ಜತೆಗೆ ನಾಟಕ ಅಕಾಡೆಮಿ ಅಧ್ಯಕ್ಷರ ಸ್ಥಾನಕ್ಕೂ ತಂದು ಕೂರಿಸಿದ ಜೋಗತಿ ಕಲೆಗೆ ನಾನು ಚಿರಋಣಿ ಎಂದರು.
ತೃತೀಯ ಲಿಂಗಿಗಳಿಗೂ ಶಿಕ್ಷಣ ಅತ್ಯಗತ್ಯ: ತೃತೀಯಲಿಂಗಿಗಳು ಲೈಂಗಿಕ ಚಟುವಟಿಕೆಗಳಿಗೆ ಬಳಕೆ ಆಗುತ್ತಿದ್ದಾರೆ. ಎಲ್ಲೆಂದರಲ್ಲಿ ಬಿಕ್ಷೆ ಬೇಡುತ್ತಿದ್ದಾರೆ ಎಂಬ ಆರೋಪವಿದೆ. ಅವರಿಗೆ ಸರಿಯಾದ ಶಿಕ್ಷಣವಿಲ್ಲ. ಹೀಗಾಗಿ, ಭಿಕ್ಷುಕರಾಗಿದ್ದಾರೆ. ಸರ್ಕಾರ ಶಿಕ್ಷಣ ನೀಡಿದರೆ ಅವರೂ ಸ್ವಾವಲಂಬಿಗಳಾಗುತ್ತಾರೆ ಎಂದು ಸರ್ಕಾರಕ್ಕೆ ಮನವಿ ಮಾಡಿದರು. ನಾನು ಕೂಡ ಅಂತವರಿಗಾಗಿಯೇ ಕಾರ್ಯಕ್ರಮ ರೂಪಿಸುತ್ತೇನೆ ಎಂದು ಮಂಜಮ್ಮ ತಿಳಿಸಿದರು.