ಶಿವಮೊಗ್ಗ: ಮಲೆನಾಡಿನಲ್ಲಿ ಮುಂಗಾರು ಮಳೆಯ ಅಬ್ಭರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕಳೆದ ಐದು ದಿನಗಳಿಂದ ಸುರಿಯುತ್ತಿರುವ ಮುಂಗಾರು ಮಳೆಗೆ ನದಿ, ಹಳ್ಳಕೊಳ್ಳಗಳು ತುಂಬಿ ಹರಿಯಲಾರಂಭಿಸಿವೆ. ಶರಾವತಿ ನದಿ ಕಣಿವೆಯಲ್ಲೂ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದಾಗಿ ವಿಶ್ವವಿಖ್ಯಾತ ಜೋಗ ಜಲಪಾತ ಮೈದುಂಬಿ ಧುಮ್ಮಿಕ್ಕಲಾರಂಭಿಸಿದೆ. ಕ್ಷೀರ ಸಾಗರವೇ ಹರಿಯುತ್ತಿದೆಯೇನು ಎನ್ನುವಂತೆ ಭಾಸವಾಗುತ್ತಿದೆ.
ಜೋಗ ಜಲಪಾತದ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ಜೋಗ ಜಲಪಾತ ಮೈದುಂಬಲಾರಂಭಿಸಿದೆ. ಹೊಸನಗರ ತಾಲೂಕಿನಲ್ಲಿ ದಾಖಲೆಯ 30 ಸೆಂಟಿ ಮೀಟರ್ ಗೂ ಹೆಚ್ಚಿನ ಮಳೆಯಾಗಿದೆ. ಹೀಗಾಗಿ ಲಿಂಗನಮಕ್ಕಿಜಲಾಶಯಕ್ಕೆ 30 ಸಾವಿರ ಕ್ಯೂಸೆಕ್ ಗೂ ಹೆಚ್ಚಿನ ನೀರು ಹರಿದುಬರುತ್ತಿದೆ. ಇನ್ನು ಜಲಾಶಯದಿಂದ ಜಲಪಾತದ ನಡುವಿನ ಪ್ರದೇಶದಲ್ಲೂ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದಾಗಿ ಜೋಗ ಜಲಪಾತಕ್ಕೆ ಹರಿವು ಹೆಚ್ಚಿದೆ. ರಾಜಾ –ರಾಣಿ- ರೋರರ್- ರಾಕೆಟ್ ಫಾಲ್ಸ್ ಗಳು ಒಂದಕ್ಕಿಂತ ಒಂದು ಹೆಚ್ಚಿನ ರಭಸದಿಂದ ಧುಮ್ಮಿಕ್ಕುತ್ತಿವೆ.
ಇದನ್ನೂ ಓದಿ:ಕಲಾ ಸಂಚಾರಿ ಕಣ್ತುಂಬ ಕನಸು: ಉದಯವಾಣಿ ಜೊತೆಗೆ ಸಂಚಾರಿ ವಿಜಯ್ ಕೊನೆಯ ಮಾತುಕತೆ
ಮಲೆನಾಡಿನ ಧಾರಾಕಾರ ಮಳೆಗೆ ವಿಶ್ವವಿಖ್ಯಾತ ಜೋಗ ಜಲಪಾತವೇನೋ ಮೈದುಂಬಿ ಧುಮ್ಮಿಕ್ಕುತ್ತಿದೆ. ಆದರೆ ಈ ವರ್ಷ ಜೋಗ ಜಲಪಾತದ ವೈಭವವನ್ನು ತುಂಬಿಕೊಳ್ಳುವ ಭಾಗ್ಯ ಮಾತ್ರ ಪ್ರವಾಸಿಗರಿಗೆ ಇಲ್ಲವಾಗಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಜೋಗ ಜಲಪಾತ ವೀಕ್ಷಣೆಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ. ಹೀಗಾಗಿ ಜೋಗದ ಪ್ರಮುಖ ದ್ವಾರಕ್ಕೆ ಬೀಗ ಹಾಕಲಾಗಿದೆ. ಯಾವುದೇ ಪ್ರವಾಸಿಗರಿಗೆ ಜೋಗ ಜಲಪಾತ ವೀಕ್ಷಣೆಗೆ ಅವಕಾಶ ನೀಡುತ್ತಿಲ್ಲ. ಬಂದವರನ್ನು ವಾಪಸ್ ಕಳುಹಿಸುವ ಕೆಲಸ ಮಾಡಲಾಗುತ್ತಿದೆ.
ಜೋಗ ಜಲಪಾತ ವೀಕ್ಷಣೆಗಾಗಿ ಹತ್ತಾರು ಮಂದಿ ಪ್ರವಾಸಿಗರು ಆಗಮಿಸಿ ಜೋಗ ವೀಕ್ಷಣೆ ಸಾಧ್ಯವಾಗದೆ ನಿರಾಸೆಯಿಂದ ಮರಳುತ್ತಿದ್ದಾರೆ. ಜೋಗ ಜಲಪಾತದ ದ್ವಾರಕ್ಕೆ ಬೀಗ ಹಾಕಲಾಗಿದ್ದು, ಸರ್ಕಾರದ ಆದೇಶದ ಬಳಿಕವಷ್ಟೇ ಜೋಗ ಜಲಪಾತದ ವೀಕ್ಷಣೆ ಸಾಧ್ಯವಾಗಲಿದೆ. ಆದರೆ ಇದಾವುದದರ ಪರಿವೇ ಇಲ್ಲದ ಶರಾವತಿ ಜೋಗದ ಕಣಿವೆಗೆ ಅದೇ ಉತ್ಸಾಹದಿಂದ ಧುಮ್ಮಿಕ್ಕುತ್ತಿದ್ದಾಳೆ.