ಸಾಗರ: ನಿರಂತರ ಮಳೆಯಿಂದ ವಿಶ್ವವಿಖ್ಯಾತ ಜೋಗ ಜಲಪಾತ ಕಳೆಗಟ್ಟಿದ್ದು, ಕಳೆದೆರಡು ದಿನಗಳಿಂದ ಜೋಗದತ್ತ ರಾಜ್ಯದ ವಿವಿಧೆಡೆಯಿಂದ ಜನಪ್ರವಾಹ ಹರಿದು ಬರುತ್ತಿದೆ. ಭಾನುವಾರ ಒಂದೇ ದಿನ ಪ್ರಾಧಿಕಾರದ ಗೇಟ್‌ನಲ್ಲಿ ಒಂದೂವರೆ ಲಕ್ಷ ರೂ. ಗೂ ಹೆಚ್ಚಿನ ಪ್ರವೇಶ ಧನ ಸಂಗ್ರಹವಾಗಿದೆ.
ಶರಾವತಿ ಕೊಳ್ಳದಲ್ಲಿ ಭಾನುವಾರವಿಡೀ ಸುರಿಯುತ್ತಿರುವ ಮಳೆಯಿಂದ ಜೋಗ ಜಲಪಾತ ಹೆಚ್ಚು ರಭಸದಿಂದ ಕೆಳಗೆ ಧುಮ್ಮಿಕ್ಕುತ್ತಿದೆ. ನಿರಂತರ ಮಳೆ ಸುರಿಯುತ್ತಿರುವುದರಿಂದ ಜನ ಜಲಪಾತಕ್ಕಿಂತ ಹೆಚ್ಚಾಗಿ ಮಂಜು ಮುಸುಕಿದ ಜಲಪಾತ ಪ್ರದೇಶವನ್ನಷ್ಟೇ ನೋಡುವಂತಾಗಿದೆ. ಕೆಲವೊಮ್ಮೆ ಮಳೆ ಬಿಟ್ಟು ಮಂಜು ಸರಿದು ಜಲಪಾತದ ಧಾರೆಗಳಾದ ರಾಜಾ, ರಾಣಿ, ರೋರರ್ ಹಾಗೂ ರಾಕೆಟ್ ಮಿಂಚಿನಂತೆ ಕಂಡು ಮರೆಯಾಗುವುದನ್ನೇ ನೋಡಿ ಪ್ರವಾಸಿಗರು ಸಂಭ್ರಮಿಸಿದರು.
ಶನಿವಾರದ ಸ್ವಾತಂತ್ರ್ಯೊತ್ಸವ, ಭಾನುವಾರ ರಜಾ ದಿನವಾಗಿದ್ದರಿಂದ ರಾಜ್ಯದ ವಿವಿಧೆಡೆಯಿಂದ ಹಾಗೂ ಕೊರೊನಾ ಹಿನ್ನೆಲೆಯಲ್ಲಿ ಮನೆಯಿಂದಲೇ ಕೆಲಸ ಮಾಡುತ್ತಿರುವ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯ ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜೋಗಕ್ಕೆ ಆಗಮಿಸಿದ್ದರು. ಒಮ್ಮೆಲೆ ಪ್ರವಾಸಿಗರು ಲಗ್ಗೆ ಇಟ್ಟ ಪರಿಣಾಮ ಜೋಗದಲ್ಲಿ ಎರಡೂ ದಿನ ಟ್ರಾಫಿಕ್ ಜಾಮ್ ತೀರಾ ಸಾಮಾನ್ಯವಾಗಿತ್ತು.
ಈ ಮಧ್ಯೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸುತ್ತಿರುವುದರಿಂದ ಜೋಗ ಅಭಿವೃದ್ಧಿ ಪ್ರಾ ಧಿಕಾರ ಕೋವಿಡ್ ಹಿನ್ನೆಲೆಯಲ್ಲಿ ಕೈಗೊಂಡಿದ್ದ ಎಲ್ಲ ಮುನ್ನೆಚ್ಚರಿಕೆ ಕ್ರಮಗಳಿಗೆ ತಿಲಾಂಜಲಿ ಇಡುವುದು ಅನಿವಾರ್ಯವಾಗಿದೆ. ಕೋವಿಡ್ ಕಾರಣದಿಂದಾಗಿ ಜಲಪಾತಕ್ಕೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧಗಳನ್ನು ಹೇರಲಾಗಿತ್ತು. ಜೋಗದ ಪ್ರಧಾನ ದ್ವಾರದಲ್ಲಿ ಸ್ಯಾನಿಟೈಸರ್ ಮತ್ತು ಥರ್ಮಲ್ ಸ್ಕ್ಯಾನಿಂಗ್‌ನ್ನು ಕಡ್ಡಾಯವಾಗಿ ನಡೆಸಲಾಗುತ್ತಿತ್ತು. ಕಳೆದ ವಾರ ಸುರಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಜಲಪಾತ ವೀಕ್ಷಣೆಗೆ ಬಂದಾಗ ಉಂಟಾದ ನೂಕುನುಗ್ಗಲಿನಲ್ಲಿ ಮೊತ್ತಮೊದಲ ಬಾರಿಗೆ ನಿಯಮಗಳನ್ನು ಗಾಳಿಗೆ ತೂರಲಾಗಿತ್ತು. ಮತ್ತೆ ನಾಲ್ಕು ದಿನ ನಿಯಮ ಪಾಲನೆಯ ಪ್ರಯತ್ನ ನಡೆಯಿತಾದರೂ ಸಿಬ್ಬಂದಿ ಕೊರತೆಯೂ ಸೇರಿದಂತೆ ಜಲಪಾತ ವೀಕ್ಷಣೆಗೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆಯ ಎದುರು ವ್ಯವಸ್ಥೆಯೇ ಅಸಹಾಯಕವಾಗಿ ನಿಲ್ಲಬೇಕಾಗಿದೆ.