ತನ್ನ ಆಪ್ತರಿಬ್ಬರ ಕೊಲೆಯ ಹಿಂದಿನ ರಹಸ್ಯ ಬಯಲು ಮಾಡಲು ಮಲೆನಾಡಿಗೆ ಹೊರಡುವ ನಾಯಕ. ಮೇಲ್ನೋಟಕ್ಕೆ ಫೋಟೋಗ್ರಾಫರ್ ನಂತೆ ನಟಿಸುತ್ತಲೇ ಊರ ಮಾಹಿತಿ ತಿಳಿಯುವ ನಾಯಕನಿಗೆ ಕೆದಕುತ್ತಾ ಹೋದಂತೆ ಗೊತ್ತಾಗುವ ಒಂದಷ್ಟು ಸತ್ಯಗಳು, ಅದರ ಬೆನ್ನು ಬಿದ್ದಾಗ ಅಲ್ಲೊಂದು ಟ್ವಿಸ್ಟ್… ಈ ನಡುವೆಯೇ ಕಣ್ಣಿಗೆ ಬೀಳುವ ಹುಡುಗಿ, ಅಲ್ಲಿಂದ ಲವ್‌ಟ್ರ್ಯಾಕ್.. ಈ ಲವ್‌ಸ್ಟೋರಿಯ ಹಿಂದೊಂದು ನಿಗೂಢ ಹೆಜ್ಜೆ…
ಇದು ಈ ವಾರ ತೆರೆಕಂಡಿರುವ “ಜೋಗ್ 101′ ಚಿತ್ರದ ಒನ್‌ಲೈನ್. ಮೇಲಿನ ಅಂಶಗಳನ್ನು ಓದಿದ ಬಳಿಕ ಇದೊಂದು ಥ್ರಿಲ್ಲರ್ ಸಿನಿಮಾ ಎಂದು ಗೊತ್ತಾಗಿರುತ್ತದೆ. ಥ್ರಿಲ್ಲರ್ ಜೊತೆಗೆ ನಿರ್ದೇಶಕರು ಲವ್, ಕಾಮಿಡಿ ಅಂಶಗಳನ್ನು ಸೇರಿಸಿದ್ದಾರೆ.
ಚಿತ್ರದ ಕಥೆಯ ಬಗ್ಗೆ ಹೇಳಬೇಕಾದರೆ ಜೋಡಿ ಕೊಲೆಯೊಂದರ ಬೆನ್ನು ಬೀಳುವ ನಾಯಕ ಒಂದು ಕಡೆಯಾದರೆ, ಅಮಾಯಕರ ಕೊಲೆಯನ್ನೇ ಕಸುಬನ್ನಾಗಿಸಿರುವ ಕುಟುಂಬ ಮತ್ತೂಂದು ಕಡೆ… ಈ ನಡುವೆಯೇ ಒಂದೆರಡು “ನಟೋರಿಯಸ್’ ಗ್ಯಾಂಗ್… ಹೀಗೆ ಸಾಗುವ ಕಥೆಯಲ್ಲಿ ಆಗಾಗ ಬರುವ ತಿರುವುಗಳು ಖುಷಿ ಕೊಡುತ್ತವೆ. ಇಡೀ ಸಿನಿಮಾದ ಕಥೆ ನಿಂತಿರೋದು ದ್ವಿತೀಯಾರ್ಧದಲ್ಲಿ. ಅದರಲ್ಲೂ ಚಿತ್ರದ ಕ್ಲೈಮ್ಯಾಕ್ಸ್ ಅನಿರೀಕ್ಷಿತವಾಗಿರುವುದು ಚಿತ್ರದ ಪ್ಲಸ್ ಎನ್ನಬಹುದು.
ನಾಯಕ ವಿಜಯ ರಾಘವೇಂದ್ರ ಪಾತ್ರಕ್ಕೆ ಹೊಂದಿಕೊಂಡಿದ್ದು, ಸಹಜ ನಟನೆಯ ಮೂಲಕ ಇಷ್ಟವಾಗುತ್ತಾರೆ. ಉಳಿದಂತೆ ತೇಜಸ್ವಿನಿ, ರಾಜೇಶ್ ನಟರಂಗ ಇತರರು ನಟಿಸಿದ್ದಾರೆ. ಸುನೀತ್ ಅವರ ಛಾಯಾಗ್ರಹಣದಲ್ಲಿ ಜೋಗ ಸುಂದರ.