ಮುಂಬೈ: ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ತಂಡವು ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಸವಾಲನ್ನು ಎದುರಿಸಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಸ್ಟಾರ್ ಬೌಲರ್ ಕೂಟದಿಂದಲೇ ಹೊರ ಬಿದ್ದಿದ್ದಾರೆ.
ಇಂಗ್ಲೆಂಡ್ ನ ವೇಗಿ ಜೋಫ್ರಾ ಆರ್ಚರ್ ಅವರು ಗಾಯದ ಕಾರಣದಿಂದ ಮುಂಬೈ ಇಂಡಿಯನ್ಸ್ ಕ್ಯಾಂಪ್ ನಿಂದ ಹೊರಬಿದ್ದಿದ್ದಾರೆ. ಅವರ ಬದಲಿಗೆ ಮತ್ತೊಬ್ಬ ಇಂಗ್ಲೆಂಡ್ ಬೌಲರ್ ಕ್ರಿಸ್ ಜೋರ್ಡಾನ್ ತಂಡ ಸೇರಿದ್ದಾರೆ.
“ಕ್ರಿಸ್ ಜೋರ್ಡಾನ್ ಈ ಸೀಸನ್ ನ ಉಳಿದ ಭಾಗಕ್ಕೆ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಳ್ಳುತ್ತಾರೆ. ಅವರು ಜೋಫ್ರಾ ಆರ್ಚರ್ ಸ್ಥಾನವನ್ನು ಪಡೆದಿದ್ದಾರೆ. ಅವರ ಚೇತರಿಕೆ ಮತ್ತು ಫಿಟ್ನೆಸ್ ಅನ್ನು ಇಸಿಬಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರೆಸಿದೆ. ಜೋಫ್ರಾ ಅವರು ತವರಿಗೆ ಹಿಂದಿರುಗುತ್ತಾರೆ” ಎಂದು ಮುಂಬೈ ಟ್ವಿಟ್ಟರ್ ನಲ್ಲಿ ಪೋಸ್ಟ್ ನಲ್ಲಿ ಬರೆದಿದ್ದಾರೆ.
2016 ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಜೋರ್ಡಾನ್ ಇದುವರೆಗೆ 28 ಐಪಿಎಲ್ ಪಂದ್ಯಗಳನ್ನು ಆಡಿ 27 ವಿಕೆಟ್ ಗಳನ್ನು ಪಡೆದಿದ್ದಾರೆ. ಇಂಗ್ಲೆಂಡ್ ತಂಡವನ್ನು 87 ಟಿ20 ಪಂದ್ಯಗಳಲ್ಲಿ ಪ್ರತಿನಿಧಿಸಿದ ಜೋರ್ಡಾನ್ 96 ವಿಕೆಟ್ ಗಳನ್ನು ಕಬಳಿಸಿದ್ದಾರೆ.
ಹತ್ತು ಪಂದ್ಯಗಳನ್ನು ಆಡಿರುವ ಮುಂಬೈ ಇಂಡಿಯನ್ಸ್ ಐದು ಗೆಲುವು ಐದು ಸೋಲಿನಿಂದ ಹತ್ತು ಅಂಕ ಪಡೆದಿದೆ.