ಚೆನ್ನೈ: ಭರ್ಜರಿ ಫಾರ್ಮ್ ನಲ್ಲಿರುವ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರೂಟ್ ಚೆನ್ನೈ ಅಂಗಳದಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ತಮ್ಮ ನೂರನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ದ್ವಿಶತಕ ಬಾರಿಸಿದ ರೂಟ್, ಈ ದಾಖಲೆ ಬರೆದ ವಿಶ್ವದ ಏಕೈಕ ಆಟಗಾರ ಎಂಬ ದಾಖಲೆಗೆ ಪಾತ್ರರಾದರು.
ಅಜೇಯ 128 ರನ್ ಮಾಡಿದ್ದಲ್ಲಿಂದ ಎರಡನೇ ದಿನದ ಬ್ಯಾಟಿಂಗ್ ಆರಂಭಿಸಿದ ರೂಟ್, ಭಾರತೀಯ ಬೌಲಿಂಗ್ ದಾಳಿಯನ್ನು ನಿರಾತಂಕವಾಗಿ ಎದುರಿಸಿದರು. ಜೊತೆಗೂಡಿದ ಬೆನ್ ಸ್ಟೋಕ್ಸ್ ಕೂಡಾ ಉತ್ತಮ ಬ್ಯಾಟಿಂಗ್ ನಡೆಸಿದರು.
377 ಎಸತೆ ಎದುರಿಸಿದ ಜೋ ರೂಟ್ 218 ರನ್ ಬಾರಿಸಿದರು. 19 ಬೌಂಡರಿ ಮತ್ತು ಎರಡು ಸಿಕ್ಸರ್ ಬಾರಿಸಿದರು. ಅದರಲ್ಲೂ ಸಿಕ್ಸರ್ ಮೂಲಕವೇ ದ್ವಿಶತಕ ಪೂರ್ಣಗೊಳಿಸಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ:ರೂಟ್ ನಡೆದದ್ದೇ ದಾರಿ… : ನೂರನೇ ಟೆಸ್ಟ್ ಪಂದ್ಯದಲ್ಲಿ ನೂರರ ಆಟ
ಬೆನ್ ಸ್ಟೋಕ್ಸ್ 87 ರನ್ ಗಳಿಸಿದರೆ, ಒಲಿ ಪೋಪ್ 34 ರನ್ ಬಾರಿಸಿದರು. 165 ಓವರ್ ಗಳ ಅಂತ್ಯಕ್ಕೆ ಇಂಗ್ಲೆಂಡ್ ತಂಡ ಆರು ವಿಕೆಟ್ ನಷ್ಟಕ್ಕೆ 501 ರನ್ ಗಳಿಸಿದೆ. ಭಾರತದ ಪರ ಬುಮ್ರಾ, ಅಶ್ವಿನ್ ಮತ್ತು ನದೀಂ ತಲಾ ಎರಡು ವಿಕೆಟ್ ಪಡೆದರು.