ವಾಷಿಂಗ್ಟನ್: ಕೋವಿಡ್ ನ ಮಾರಣಾಂತಿಕ ಎರಡನೇ ಅಲೆ ಶೀಘ್ರವಾಗಿ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ತಕ್ಷಣವೇ ಕೆಲವು ವಾರಗಳ ಕಾಲ ಸಂಪೂರ್ಣ ಲಾಕ್ ಡೌನ್ ಘೋಷಿಸಬೇಕೆಂದು ಅಮೆರಿಕದ ಹಿರಿಯ ವೈದ್ಯಕೀಯ ಸಲಹೆಗಾರ ಡಾ.ಅಂಥೋನಿ ಫೌಸಿ ಅವರು ಭಾರತಕ್ಕೆ ಸಲಹೆ ನೀಡಿದ್ದಾರೆ.
ಡಾ.ಫೌಸಿ ದ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತ, ಆಕ್ಸಿಜನ್, ಔಷಧ ಮತ್ತು ಪಿಪಿಇ ಕಿಟ್ ಗಳನ್ನು ತಕ್ಷಣವೇ ಸರಬರಾಜು ಮಾಡುವುದು ತುಂಬಾ ಮುಖ್ಯವಾದ ವಿಚಾರವಾಗಿದೆ. ಕೋವಿಡ್ ಬಿಕ್ಕಟ್ಟನ್ನು ಗಮನಿಸಿದಾಗ, ಭಾರತ ಈ ವೇಳೆ ಬಿಕ್ಕಟ್ಟಿನ ಗುಂಪನ್ನು ಒಟ್ಟುಗೂಡಿಸುವ ಮೂಲಕ ಅಗತ್ಯದ ವಸ್ತು, ಉಪಕರಣಗಳನ್ನು ಪಡೆಯುವ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಕೋವಿಡ್ ಸೋಂಕಿನ ಹೋರಾಟದ ವಿರುದ್ಧದ ಗೆಲುವನ್ನು ಘೋಷಿಸಿದ್ದು ಕೂಡಾ ತುಂಬಾ ಅಪಕ್ವವಾಗಿದೆ ಎಂಬುದನ್ನು ಗುರುತಿಸಬೇಕಾಗಿದೆ ಎಂದು ಡಾ.ಫೌಸಿ ಯಾವುದೇ ಸರ್ಕಾರದ ಹೆಸರನ್ನು ಉಲ್ಲೇಖಿಸದೇ ಹೇಳಿರುವುದಾಗಿ ವರದಿ ತಿಳಿಸಿದೆ.
ಒಂದು ವಿಷಯ ಅಗತ್ಯವಾಗಿದ್ದು, ದೇಶವನ್ನು ತಾತ್ಕಾಲಿಕವಾಗಿ ಮುಚ್ಚುವುದು(ಲಾಕ್ ಡೌನ್), ನನ್ನ ಆಲೋಚನೆ ಪ್ರಕಾರ ಇದು ಮುಖ್ಯವಾದದ್ದು. ಒಂದು ವೇಳೆ ನಾವು ಸಮಯವನ್ನು ಮೀರಿದರೆ, ನಾನು ಏನು ಹೇಳಿದ್ದೇನೋ ಅದನ್ನೇ (ಲಾಕ್ ಡೌನ್) ಮಾಡಬೇಕಾಗುತ್ತದೆ. ಸೋಂಕನ್ನು ತಡೆಗಟ್ಟಲು ಆಗ ದೀರ್ಘಾವಧಿಯ ಲಾಕ್ ಡೌನ್ ಘೋಷಿಸಬೇಕಾಗುತ್ತದೆ ಎಂದು ಡಾ.ಫೌಸಿ ಎಚ್ಚರಿಸಿದರು.
ದೇಶದಲ್ಲಿ ಆರು ತಿಂಗಳ ಕಾಲ ಲಾಕ್ ಡೌನ್ ಘೋಷಿಸುವ ಅಗತ್ಯವಿಲ್ಲ, ಆದರೆ ರೂಪಾಂತರಿ ಸೋಂಕು ಹರಡುವುದನ್ನು ತಡೆಗಟ್ಟಲು ತಾತ್ಕಾಲಿಕವಾಗಿ ಲಾಕ್ ಡೌನ್ ಘೋಷಿಸಬೇಕಾಗಿದೆ. ಈ ನಿಟ್ಟಿನಲ್ಲಿ ಭಾರತ ತಾತ್ಕಾಲಿಕ ಲಾಕ್ ಡೌನ್ ಕುರಿತು ನಿರ್ಧಾರ ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.