ವಾಷಿಂಗ್ಟನ್: ಅಮೆರಿಕದ ವೀಸಾ ಮತ್ತು ಶಾಶ್ವತ ಪೌರತ್ವದ ನಿರೀಕ್ಷೆಯಲ್ಲಿದ್ದ ಸಾವಿರಾರು ಭಾರತೀಯರಿಗೆ ಅಧ್ಯಕ್ಷ ಜೋ ಬೈಡೆನ್ ಆಡಳಿತ ಖುಷಿಯ ಸುದ್ದಿಯೊಂದನ್ನು ನೀಡಿದೆ. 1.1 ಕೋಟಿ ಮಂದಿಗೆ ಅಮೆರಿಕದ ಪೌರತ್ವವೂ ಸಿಗುವ ದಿನಗಳು
ಹತ್ತಿರವಾಗಿವೆ.
ಅಮೆರಿಕ ಪೌರತ್ವ ಕಾಯ್ದೆ 2021ನ್ನು ಜಾರಿಗೆ ತರಲು ಹೊಸ ಸರಕಾರ ಮುಂದಾಗಿದ್ದು, ಇದರಿಂದ ಭಾರತೀಯ ಐಟಿ ನೌಕರರು ಮತ್ತು ಅವರ ಕುಟುಂಬಸ್ಥರಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ಬೈಡೆನ್ ಆಡಳಿತವು ಸಂಸತ್ತಿನಲ್ಲಿ ಈ ಸಂಬಂಧ ಮಸೂದೆಯನ್ನು ಮಂಡಿಸಿದೆ. ಮಸೂದೆಗೆ ಸಂಸತ್ತು ಮತ್ತು ಸೆನೆಟ್ ಒಪ್ಪಿಗೆ ಸಿಕ್ಕಿದರೆ 10 ವರ್ಷಗಳಿಂದ ಗ್ರೀನ್ ಕಾರ್ಡ್‌ಗಾಗಿ ಕಾಯುತ್ತಿದ್ದವರಿಗೆ ಸುಲಭವಾಗಿ ಪೌರತ್ವ ಸಿಗಲಿದೆ. ಟ್ರಂಪ್ ಅವಧಿಯಲ್ಲಿ ಗ್ರೀನ್ ಕಾರ್ಡ್ ಸ್ಥಗಿತಗೊಳಿಸಲಾಗಿತ್ತು. ಬೈಡೆನ್ ಆಡಳಿತ ಈ ನೀತಿ ಗಳನ್ನು ತೆಗೆದುಹಾಕಲು ಮುಂದಾಗಿದೆ.
ಬೈಡೆನ್ ಹೇಳಿದ್ದೇನು? ;
ವಲಸೆ ವ್ಯವಸ್ಥೆಯಲ್ಲಿ ಹಿಂದಿನ ಸರಕಾರ ಮಾಡಿರುವ ಕೆಲವು ತಪ್ಪುಗಳನ್ನು ಸರಿಪಡಿಸಿ, ನ್ಯಾಯ, ಮಾನವೀಯತೆಯನ್ನು ಎತ್ತಿ ಹಿಡಿಯಲಾಗುತ್ತದೆ ಎಂದು ಬೈಡೆನ್ ಹೇಳಿದ್ದಾರೆ.
ಮಸೂದೆಯಲ್ಲಿ ಏನಿದೆ? :
- 10 ವರ್ಷಗಳಿಂದ ಕಾಯುತ್ತಿರುವವರಿಗೆ ಗ್ರೀನ್ ಕಾರ್ಡ್.
- ದಾಖಲೆಗಳಿಲ್ಲದಿರುವ ಕಾನೂನುಬದ್ಧ ವಲಸಿಗರಿಗೆ ಪೌರತ್ವ.
- ಒಂದು ದೇಶಕ್ಕೆ ಇಂತಿಷ್ಟೇ ಗ್ರೀನ್ ಕಾರ್ಡ್ ಎಂಬ ನಿಯಮ ರದ್ದತಿ.
- ಎಚ್-1ಬಿ ವೀಸಾದಾರನ ಪತ್ನಿ ಅಥವಾ ಪತಿಗೆ ಉದ್ಯೋಗ.
- ಎಚ್-1ಬಿ ವೀಸಾದಾರರ ಮಕ್ಕಳಿಗೂ ಉದ್ಯೋಗ ಅವಕಾಶ.
- ಅನಾಥರು, ವಿಧವೆಯರು, ಮಕ್ಕಳಿಗೆ ರಕ್ಷಣೆ.