ಅಮೆರಿಕದಲ್ಲಿ ಬೃಹತ್ತಾಗಿ ಬೆಳೆದುನಿಂತಿರುವ ವಿದ್ಯಾರ್ಥಿಗಳ ಸಾಲ ಹೆಚ್ಚು ಸಂಕಟಕ್ಕೆ ದೂಡಿದೆ. 2010ರಿಂದಲೂ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದು, 1.7 ಟ್ರಿಲಿಯನ್ ಡಾಲರ್‌ನಷ್ಟು ಶೈಕ್ಷಣಿಕ ಸಾಲ ವಸೂಲಾಗದೇ ಉಳಿದಿದೆ. ಹಾಲಿ ಅಧ್ಯಕ್ಷ ಜೋ ಬೈಡೆನ್ ಅವರು ಆಡಳಿತಕ್ಕೆ ಬರುವ ಮುನ್ನ ವಿದ್ಯಾರ್ಥಿ ಗಳ ಈ ಸಾಲದ ಹೊರೆಯನ್ನು ಕಡಿಮೆ ಮಾಡುವುದಾಗಿ ಹೇಳಿದ್ದರು.
ಏನಿದು ಭಾಗಶಃ ಸಾಲ ಮನ್ನಾ? :
ಭಾರತೀಯ ಕಾಲಮಾನದ ಪ್ರಕಾರ ಬುಧವಾರ ರಾತ್ರಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ವಿದ್ಯಾರ್ಥಿ ಗಳಿಗೆ ಭಾಗಶಃ ನಿರಾಳ ನೀಡಿದ್ದಾರೆ. ವಾರ್ಷಿಕವಾಗಿ 1.25 ಲಕ್ಷ ಡಾಲರ್‌ಗಿಂತ ಕಡಿಮೆ ವರಮಾನವಿರುವವರಿಗೆ 10 ಸಾವಿರ ಡಾಲರ್‌ನಷ್ಟು ಸಾಲ ಮನ್ನಾ ಮಾಡಲಾಗಿದೆ. ಅಂದರೆ 20 ಸಾವಿರ ಡಾಲರ್ ಸಾಲವಿದ್ದರೆ ಇದರಲ್ಲಿ 10 ಸಾವಿರ ಡಾಲರ್ ಅನ್ನು ಮನ್ನಾ ಮಾಡಲಾಗುತ್ತದೆ. ಒಂದು ವೇಳೆ ದಂಪತಿ ಅಥವಾ ಮನೆ ಯಜಮಾನ ಸಾಲ ಪಡೆದಿದ್ದರೆ ಇಂಥವರ ಆದಾಯ ಮಿತಿಯನ್ನು 2.50 ಲಕ್ಷ ಡಾಲರ್‌ಗೆ ಏರಿಕೆ ಮಾಡಲಾಗಿದೆ. ಹಾಗೆಯೇ ಸರಕಾರದ ವತಿಯಿಂದ ಅನುದಾನ ಪಡೆದು ಕಾಲೇಜಿಗೆ ಸೇರಿದ್ದ ವಿದ್ಯಾರ್ಥಿಗಳ 20 ಸಾವಿರ ಡಾಲರ್ ನಷ್ಟು ಸಾಲವನ್ನು ಮನ್ನಾ ಮಾಡಲಾಗಿದೆ. ಅಲ್ಲದೆ ಈ ವರ್ಷದ ಕಡೆಯ ವರೆಗೂ ಶೈಕ್ಷಣಿಕ ಸಾಲ ಪಡೆದವರ ಪೇಮೆಂಟ್ ಅನ್ನು ಸ್ಥಗಿತ ಮಾಡಲಾಗಿದೆ.
ಏಕೆ ಈ ನಿರ್ಧಾರ? :
2008ರ ಆರ್ಥಿಕ ಮಹಾಕುಸಿತದ ಅನಂತರ ಅಮೆರಿಕದಲ್ಲಿ ಶೈಕ್ಷಣಿಕ ವ್ಯವಸ್ಥೆ ದುಬಾರಿಯಾಯಿತು. ಅದರಲ್ಲಿ 2010 ರಿಂದ ಟ್ಯೂಷನ್ ಶುಲ್ಕ ಗಗನಮುಖಿಯಾಗಿದೆ. ಸರಕಾರಿ ಮತ್ತು ಖಾಸಗಿ ಕಾಲೇಜು ಗಳೆರಡರಲ್ಲೂ ಶುಲ್ಕ ಹೆಚ್ಚಳವಾಗಿದೆ. ಹೀಗಾಗಿ ಕಾಲೇಜು ಸೇರುವವರು ಅನಿವಾರ್ಯವಾಗಿ ಸಾಲ ಪಡೆದು ಶುಲ್ಕ ಕಟ್ಟಬೇಕಾಗುತ್ತದೆ. ಇಂಥವರ ಸಾಲ ಬೃಹದಾಕಾರವಾಗಿ ಬೆಳೆದಿದೆ.
ಒಟ್ಟು ಸಾಲವೆಷ್ಟು? :
ಸರಿಸುಮಾರು 1.7 ಟ್ರಿಲಿಯನ್ ಡಾಲರ್‌ನಷ್ಟು ವಿದ್ಯಾರ್ಥಿಗಳ ಸಾಲ ವಸೂಲಾಗದೇ ಉಳಿದಿದೆ. ಇದು ಅಮೆರಿಕದ ಆರ್ಥಿಕತೆಗೆ ದೊಡ್ಡ ಪೆಟ್ಟನ್ನೇ ನೀಡಿದೆ. ಹೀಗಾಗಿಯೇ ಬೈಡೆನ್ ಚುನಾವಣೆ ಪ್ರಚಾರದ ವೇಳೆ ವಿದ್ಯಾರ್ಥಿಗಳ ಸಾಲದ ಕುರಿತಂತೆ ಗಟ್ಟಿ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದರು. ಈಗ 10 ಸಾವಿರ ಡಾಲರ್ ಮನ್ನಾ ಮಾಡುವ ಬಗ್ಗೆ ಘೋಷಿಸಿದ್ದಾರೆ.
ಎಷ್ಟು ಮಂದಿಗೆ ಅನುಕೂಲ? :
ಅಮೆರಿಕದ 40 ದಶಲಕ್ಷ ಮಂದಿ ಶೈಕ್ಷಣಿಕ ಸಾಲದ ಹಿಡಿತದಲ್ಲಿ ಇದ್ದಾರೆ. ಬೈಡೆನ್ ಪ್ರಕಾರ ಶೇ.95ರಷ್ಟು ಮಂದಿಗೆ ಇದರಿಂದ ಅನುಕೂಲವಾಗುತ್ತದೆ. ಇದರಲ್ಲಿ 20 ದಶಲಕ್ಷ ಮಂದಿಯ ಸಾಲ ಸಂಪೂರ್ಣವಾಗಿ ಮನ್ನಾ ಆಗುತ್ತದೆ. ಉಳಿದವರದ್ದು ಭಾಗಶಃ ಮನ್ನಾ ಆಗಲಿದೆ.