ವಾಷಿಂಗ್ಟನ್: ಕೋವಿಡ್ ಸೋಂಕಿನ ನಡುವೆಯೇ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಪ್ರಚಾರ ಬಿರುಸಾಗುತ್ತಿದೆ. ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಹೈವೋಲ್ಟೇಜ್ ಚುನಾವಣೆಯಲ್ಲಿ ಡೆಮಾಕ್ರಾಟ್ ಪಕ್ಷದ ನಾಯಕ ಜೋ ಬಿಡೆನ್ ಅವರು ಟ್ರಂಪ್ ಪ್ರತಿಸ್ಪರ್ಧಿ. ಅವರಿಬ್ಬರ ನಡುವಿನ ಮಾಸ್ಕ್ ಮುನಿಸು ಈಗ ತೀರಾ ವೈಯಕ್ತಿಕ ಮಟ್ಟಕ್ಕೆ ತಲುಪಿದೆ.
ಕೋವಿಡ್ ನಿಂದ ದೂರ ಉಳಿಯಲು ಮಾಸ್ಕ್ ಧರಿಸುವುದು ಕಡ್ಡಾಯವೆಂದು ಆಜ್ಞೆ ಹೊರಡಿಸಿರುವ ಟ್ರಂಪ್, ತಾವು ಮಾತ್ರ ಮಾಸ್ಕ್ ಬಳಸುತ್ತಿಲ್ಲ. ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಮಾಸ್ಕ್ ಇಲ್ಲದೆ, ನಿರ್ವಹಿಸುತ್ತಿದ್ದಾರೆ.
ಅದರ ವಿರುದ್ಧ ಜೋ ಬಿಡನ್ ಪದೇ ಪದೆ ಬಹಿರಂಗವಾಗಿ ಟೀಕಿಸಿದ್ದರು. ‘ಅಧ್ಯಕ್ಷ ಟ್ರಂಪ್ ಅವರ ನಿಲುವಿನಿಂದಲೇ ದೇಶದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪ್ರಾಣಹಾನಿಯಾಗಿದೆ. ಅವರೊಬ್ಬ ಮೂರ್ಖನಂತೆ ವರ್ತಿಸುತ್ತಿದ್ದಾರೆ’ ಎಂದು ಹರಿಹಾಯ್ದಿದ್ದರು. ಅದಕ್ಕೆ ತಿರುಗೇಟು ನೀಡುವ ನಿಟ್ಟಿನಲ್ಲಿ ಫಾಕ್ಸ್ ನ್ಯೂಸ್‌ನ ರಾಜಕೀಯ ವಿಶ್ಲೇಷಕ ಬ್ರಿಟ್ ಹ್ಯೂಮ್ ಜೋ ಬಿಡೆನ್ ಕಪ್ಪು ಬಣ್ಣದ ಮಾಸ್ಕ್ ಮತ್ತು ಗಾಗಲ್ಸ್ ಧರಿಸಿದ್ದ ಫೋಟೋವನ್ನು ಟ್ವೀಟ್ ಮಾಡಿದ್ದರು.
ಇದರ ಜತೆಗೆ ‘ಇದರಿಂದಾಗಿಯೇ ಟ್ರಂಪ್ ಯಾಕೆ ಸಾರ್ವಜನಿಕವಾಗಿ ಮಾಸ್ಕ್ ಧರಿಸುತ್ತಿಲ್ಲ. ಬಿಡೆನ್ ಮಾಸ್ಕ್ ಧರಿಸಿದ್ದಾರೆ’ ಎಂದು ಬರೆದುಕೊಂಡಿದ್ದರು. ಅದನ್ನು ಅಧ್ಯಕ್ಷ ಟ್ರಂಪ್ ರಿಟ್ವೀಟ್ ಮಾಡಿದ್ದರು. ಜತೆಗೆ ಇಬ್ಬರು ಮುಖಂಡರು ಸೌಜನ್ಯತೆ ಮೀರಿ ಕೆಳಮಟ್ಟಕ್ಕೆ ಇಳಿದಿರುವುದನ್ನು ಮಾಧ್ಯಮಗಳೂ ಟೀಕಿಸಿವೆ.
ಫ್ಯಾಕ್ಟ್ ಚೆಕ್ ಅಳವಡಿಕೆ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಎರಡು ಟ್ವೀಟ್‌ಗಳಿಗೆ ‘ಫ್ಯಾಕ್ಟ್ ಚೆಕ್’ (ಸತ್ಯ ಪರಿಶೀಲನೆ) ಅನ್ನು ಟ್ವಿಟರ್ ಅಳವಡಿಸಿದೆ. ಅಮೆರಿಕ ಚುನಾವಣೆಯಲ್ಲಿ ಅಂಚೆ ಪತ್ರಗಳ ಮೂಲಕ ನಡೆಯುವ ಮತಗಳಲ್ಲಿ ಭಾರೀ ಅಕ್ರಮ ನಡೆಯಬಹುದು. ಅಂಚೆ ಪೆಟ್ಟಿಗೆಗಳನ್ನು ದೋಚಿ, ನಕಲಿ ಮತಪತ್ರ ಸೃಷ್ಟಿಸಲಾಗುತ್ತಿದೆ. ಕ್ಯಾಲಿಫೋರ್ನಿಯಾ ಗವರ್ನರ್ ಲಕ್ಷಾಂತರ ಜನರಿಗೆ ಮತ ಪತ್ರಗಳನ್ನು ಕಳುಹಿ ಸಿದ್ದಾರೆ’ ಎಂದು ಟ್ರಂಪ್ ಟ್ವೀಟ್‌ನಲ್ಲಿ ಆರೋಪಿಸಿದ್ದರು.
ಇದರ ಬೆನ್ನಲ್ಲೇ ಟ್ವಿಟ್ಟರ್ ‘ಫ್ಯಾಕ್ಟ್ ಚೆಕ್’ ಅಳವಡಿಸಿದೆ. ಟ್ರಂಪ್ ಅವರ ಟ್ವೀಟಿನ ಕೆಳಭಾಗದಲ್ಲಿ ಫ್ಯಾಕ್ಟ್ ಚೆಕ್‌ನ ಕೊಂಡಿಗಳಿದ್ದು, ಇದನ್ನು ಕ್ಲಿಕ್ಕಿಸಿದರೆ, ಅಕ್ರಮ ಮತದಾನದ ಕುರಿತು ಟ್ರಂಪ್ ಹೇಳಿಕೆ ಸುಳ್ಳು ಎಂದು ಸಾಬೀತು ಮಾಡುವ ವರದಿಗಳು ಬರುತ್ತವೆ. ಈ ನೀತಿಗೆ ಕೆಂಡಾಮಂಡಲವಾಗಿರುವ ಟ್ರಂಪ್, ‘2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಹಸ್ತಕ್ಷೇಪ ನಡೆಸುತ್ತಿದೆ. ವಾಕ್ ಸ್ವಾತಂತ್ರ್ಯ ಹರಣಕ್ಕೆ ಮುಂದಾಗಿದೆ. ಇದಕ್ಕೆ ಅವಕಾಶ ಕೊಡುವುದಿಲ್ಲ ಎಂದಿದ್ದಾರೆ.
ಒಬಾಮ ವಿರುದ್ಧ ಟೀಕೆ
ಮಾಜಿ ಅಧ್ಯಕ್ಷ ಬರಾಕ್ ಒಬಾಮ ಗಾಲ್ಫ್ ಆಡಿದ್ದಕ್ಕೆ ಟ್ರಂಪ್ ಟೀಕೆ ಮಾಡಿದ್ದಾರೆ. ಲಾಕ್ ಡೌನ್ ವೇಳೆ ಅವರು ಈ ರೀತಿ ವರ್ತನೆ ಮಾಡಿದ್ದು ಸರಿಯೇ ಎಂದು ಪ್ರಶ್ನೆ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಟ್ರಂಪ್ ಕಾರ್ಯವೈಖರಿ ವಿರುದ್ಧ ಟೀಕಿಸಿದ್ದಕ್ಕೆ ಪ್ರತಿಯಾಗಿ ಈ ಮಾತುಗಳನ್ನಾಡಲಾಗಿದೆ.