Advertisement

ಜೋಡುಪಾಲ ಗುಡ್ಡ ಕುಸಿತ: ಮುಂದುವರಿದ ರಕ್ಷಣಾ ಕಾರ್ಯ

11:32 AM Aug 19, 2018 | |

ಜೋಡುಪಾಲ: ಜೋಡುಪಾಲದಲ್ಲಿ ಗುಡ್ಡ ಕುಸಿತದಿಂದ ಜನಜೀವನ ತತ್ತರಗೊಂಡಿದೆ. ಧಾರಾಕಾರವಾಗಿ ಹರಿದು ಬರುತ್ತಿರುವ ಕೆಸರು ನೀರಿನ ನಡುವೆ ರಕ್ಷಣಾ ಕಾರ್ಯ ಸಾಗಿದೆ. ಮಣ್ಣಿನಡಿ ಸಿಲುಕಿದ್ದ ಯುವತಿಯೊಬ್ಬರ ಶವ ಶನಿವಾರ ಪತ್ತೆಯಾಗಿದೆ. ಶನಿವಾರ ಹಲವು ಕುಟುಂಬಗಳನ್ನು ರಕ್ಷಿಸಲಾಗಿದ್ದು, ಇನ್ನೂ ಹಲವು ಕುಟುಂಬಗಳು ಗುಡ್ಡದಲ್ಲಿ ಸಿಕ್ಕಿ ಹಾಕಿಕೊಂಡಿರುವ ಸಾಧ್ಯತೆ ಇದೆ. ಜೋಡುಪಾಲದ ಬಸಪ್ಪ ಅವರ ಕುಟುಂಬ ಕಣ್ಮರೆಯಾಗಿದ್ದು, ಮಣ್ಣಿನಡಿ ಸಿಲುಕಿರಬಹುದಾದ ಇನ್ನಷ್ಟು ಮನೆ ಮಂದಿಯ ಪತ್ತೆಗೆ ರಕ್ಷಣಾ ತಂಡ ಶೋಧ ಮುಂದುವರಿಸಿದೆ.

Advertisement

ಬಸಪ್ಪ ಪುತ್ರಿಯ ಶವ ಪತ್ತೆ
ಗುಡ್ಡ ಕುಸಿದು ಮನೆಯೇ ಮಣ್ಣಿನೊಳಗೆ ಹುದುಗಿದ್ದ ಸುಳ್ಯ ಸರಕಾರಿ ಆಸ್ಪತ್ರೆಯ ಡಿ ಗ್ರೂಪ್‌ ನೌಕರ ಬಸಪ್ಪ ಅವರ ಶವ ಶುಕ್ರವಾರ ಪತ್ತೆಯಾಗಿತ್ತು. ಶನಿವಾರ ಅವರ ಪುತ್ರಿಯದು ಎನ್ನಲಾದ ಶವ ಮನೆಯಿಂದ ತುಸು ದೂರದಲ್ಲಿ ಪತ್ತೆಯಾಗಿದೆ. ಮೃತದೇಹವನ್ನು ಕೆವಿಜಿ ಆಸ್ಪತ್ರೆಯ ಶವಾಗಾರಕ್ಕೆ ತರಲಾಗಿದೆ. ಮನೆಯಲ್ಲಿದ್ದ ಇನ್ನೂ ಕೆಲವರು ನಾಪತ್ತೆ ಆಗಿರುವ ಬಗ್ಗೆ ಸುಳಿವು ದೊರೆತಿದ್ದು, ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿದಿದೆ.

ಗುಡ್ಡವೇ ಕುಸಿಯುತ್ತಿದೆ
ಸಂತ್ರಸ್ತ ಕುಟುಂಬಗಳು ನೀಡಿರುವ ಮಾಹಿತಿ ಪ್ರಕಾರ ಜೋಡುಪಾಲದ ಆಸುಪಾಸು 100ಕ್ಕೂ ಅಧಿಕ ಮನೆಗಳಿವೆ. ಜನ ವಸತಿ ಮೇಲೆಯೇ ಗುಡ್ಡ ಕುಸಿಯುತ್ತಿದೆ. ಸಂಜೆ ತನಕ ಹಗ್ಗದ ಸಹಾಯದಿಂದ ಜನರನ್ನು ಜೋಡುಪಾಲ ಭಾಗದಿಂದ   ಸುರಕ್ಷಿತವಾಗಿ ದಾಟಿಸಲಾಗಿದೆ.

ಮುಂದುವರಿದ ರಕ್ಷಣಾ ಕಾರ್ಯ
ರಾಷ್ಟ್ರೀಯ ವಿಪತ್ತು ಪಡೆ, ಪೊಲೀಸ್‌ ಪಡೆ, ಅಗ್ನಿಶಾಮಕ ದಳ, ಗೃಹರಕ್ಷಕ ದಳ,  ಕಾರ್ಯಕರ್ತರು ರಕ್ಷಣೆಯಲ್ಲಿ ತೊಡಗಿದ್ದಾರೆ.  ಮಡಿಕೇರಿ-ಸಂಪಾಜೆ ರಸ್ತೆಯ ದೇವರಕೊಲ್ಲಿ ಜಲಪಾತದಿಂದ 3 ಕಿ.ಮೀ.ವರೆಗೆ ರಸ್ತೆ ಪೂರ್ತಿ ಬಿರುಕು ಬಿಟ್ಟಿದೆ. ಮಣ್ಣು ರಾಶಿ ರಸ್ತೆಯಲ್ಲಿದ್ದು ವಾಹನ ಸಂಚಾರ ಸ್ಥಗಿತಗೊಂಡಿದೆ. ರಸ್ತೆಯ ಇಕ್ಕೆಲಗಳಲ್ಲಿ ನೀರು ಹರಿದು ತೋಡು ನಿರ್ಮಾಣವಾಗಿದೆ.

ಅಡಿಕೆ ಪಾಲ ನಿರ್ಮಿಸಿ ರಕ್ಷಣೆ
ರಭಸವಾಗಿ ಕೆಸರು ನೀರು ಹರಿಯುತ್ತಿರುವ ರಸ್ತೆಯ ನಡುವೆ ಅಡಿಕೆ ಕಂಬ ಹಾಸಿ, ಹಗ್ಗದ ಸಹಾಯದಿಂದ 300ಕ್ಕೂ ಅಧಿಕ ಮಂದಿಯನ್ನು ರಕ್ಷಿಸಲಾಗಿದೆ. 

Advertisement

ಎಸಿ-ಡಿಸಿ ಭೇಟಿ
ಜೋಡುಪಾಲ ಘಟನಾ ಸ್ಥಳಕ್ಕೆ ಹಾಗೂ  ಸಂತ್ರಸ್ತರ ಶಿಬಿರಕ್ಕೆ ಶನಿವಾರ ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್‌, ಸಹಾಯಕ ಆಯುಕ್ತ ಎಚ್‌.ಕೆ. ಕೃಷ್ಣಮೂರ್ತಿ ಭೇಟಿ ನೀಡಿದ್ದಾರೆ.   ಸಂತ್ರಸ್ತರ ತುರ್ತು ಅಗತ್ಯಕ್ಕೆ  2ರಿಂದ 3 ಸಾವಿರ ರೂ. ತನಕ ಸಂತ್ರಸ್ತ ಕೇಂದ್ರಗಳ ಮೂಲಕ ವಿತರಿಸಲು ಸೂಚಿಸಲಾಗಿದೆ.

ಸಂಕಷ್ಟದಲ್ಲೂ ಮನೆಗೆ ಕನ್ನ !
ಜೋಡುಪಾಲದಲ್ಲಿ ಮನೆಗಳಿಗೆ ಬೀಗ ಹಾಕಿ ಸಂತ್ರಸ್ತರ ಕೇಂದ್ರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಕೆಲವು ಮನೆಗಳಿಗೆ ಕಳ್ಳರು ಕನ್ನ ಹಾಕಲು ಯತ್ನಿಸಿದ ಮಾಹಿತಿ ಲಭಿಸಿದೆ. ಮೂರ್ನಾಲ್ಕು ಮನೆಗಳ ಬಾಗಿಲು ತೆರೆದಿರುವ ಕಾರಣ ಅನುಮಾನ ಮೂಡಿದೆ. ಪೊಲೀಸ್‌ ಇಲಾಖೆ ನಿಗಾ ಇರಿಸಿದೆ. ಸಂಕಷ್ಟದಲ್ಲೂ ಹೀನ ಕೃತ್ಯಕ್ಕೆ ಮುಂದಾದ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. 

ಗುಡ್ಡ ಮೇಲಿನ ಬಂಡೆ ಜಾರಿದೆ
ಮದೆನಾಡು ಗುಡ್ಡದ ಬಳಿ ಐತಿಹ್ಯ ಹೊಂದಿರುವ ಬೃಹತ್‌ ಬಂಡೆಯೊಂದಿದ್ದು, ಕೆರೆ ಆಕಾರದ ಇದರಲ್ಲಿ ವರ್ಷವಿಡೀ ನೀರಿರುತ್ತದೆ. ಬಂಡೆ ಜಾರಿ ಅಲ್ಲಿಂದಲೇ ನೀರು ಪ್ರವಾಹ ರೀತಿ ಜೋಡುಪಾಲದತ್ತ ನುಗ್ಗಿದೆ ಎಂದು ಸಂತ್ರಸ್ತ ಶಿಬಿರದಲ್ಲಿ ಇರುವ ಜೋಡುಪಾಲದ ವೃದ್ಧರೋರ್ವರು ಹೇಳಿದ್ದಾರೆ.

ಪ್ರವೇಶ ನಿರ್ಬಂಧಕ್ಕೆ ಕ್ರಮ
ರಕ್ಷಣಾ ಕಾರ್ಯ ನಡೆಯು ತ್ತಿರುವ ಪ್ರದೇಶದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಜನರು ತೆರಳುತ್ತಿರುವುದು ಗಮನಕ್ಕೆ ಬಂದಿದೆ. ಹಾಗಾಗಿ ಸಂಪಾಜೆ ಗೇಟು ಬಳಿ ನಿರ್ಬಂಧ ಹೇರಲಾಗುವುದು. ಕಾರ್ಯಾಚರಣೆ ಬಳಿಕ ಪುನರ್‌ವಸತಿ ಕಲ್ಪಿಸುವ ಕಾರ್ಯ ನಡೆಸಲಾಗುವುದು.
 -ಎಚ್‌.ಕೆ. ಕೃಷ್ಣಮೂರ್ತಿ
ಸಹಾಯಕ ಆಯುಕ್ತರು, ಪುತ್ತೂರು

 ಸಣ್ಣ ಕಣಿ ಹೊಳೆ ರೂಪ ಪಡೆಯಿತು !
ಗುಡ್ಡಭಾಗದಿಂದ ಸಣ್ಣ ಕಣಿಯಲ್ಲಿ ಹರಿದು ಬರುತ್ತಿದ್ದ ಮಳೆ ನೀರಿಗೆ ಸಂಪಾಜೆ- ಮಡಿಕೇರಿ ರಸ್ತೆಯ ಜೋಡುಪಾಲದಲ್ಲಿ ಮೋರಿ ನಿರ್ಮಿಸಲಾಗಿತ್ತು. ಮೋರಿಯಿಂದ ತುಸು ಎತ್ತರದಲ್ಲಿ ಹತ್ತಾರು ಮನೆಗಳು ಇವೆ. ಎತ್ತರ ಪ್ರದೇಶದಿಂದ ಗುಡ್ಡ ಕುಸಿದು ರಭಸವಾಗಿ ಹರಿದ ಮಳೆ ನೀರು ಮೋರಿಯನ್ನು ಸೀಳಿದೆ. ಸಣ್ಣ ಕಣಿ ಈಗ ಹೊಳೆಯಂತಾಗಿದೆ. ಇದು ಪಯಸ್ವಿನಿ ಸೇರುವ ತನಕ ಹತ್ತಾರು ಮನೆಗಳು, ಕೃಷಿ ಭೂಮಿಯನ್ನು ಮುಳುಗಿಸಿದೆ. ಮೋರಿಯ ಕೆಳ ಭಾಗದಲ್ಲಿ ಇರುವ ವಸಂತ ಅವರ ಆರ್‌ಸಿಸಿ ಮನೆ ಧರಾಶಾಯಿಯಾಗಿದೆ.

 ಸಂತ್ರಸ್ತರಿಗೆ ನೆರವಿನ ಮಹಾಪೂರ
ಸಂತ್ರಸ್ತ ಶಿಬಿರಕ್ಕೆ ನೆರವಿನ ಮಹಾಪೂರವೇ ಹರಿದಿದೆ. ಕೆವಿಜಿ ಆಸ್ಪತ್ರೆ, ಸುಳ್ಯ ಸರಕಾರಿ ಆರೋಗ್ಯ ಕೇಂದ್ರದ ವತಿಯಿಂದ ತಪಾಸಣೆ ಕಾರ್ಯ ಮುಂದುವರಿದಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವ 20ಕ್ಕೂ ಅಧಿಕ ಮಂದಿಯನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಲ್ಲುಗುಂಡಿ ಗಂಜಿ ಕೇಂದ್ರದಲ್ಲಿ 280 ಮಂದಿ ಸಂತ್ರಸ್ತರು ನೋಂದಾಯಿಸಿದ್ದಾರೆ.  ಕಲ್ಲುಗುಂಡಿ ಶಾಲೆಯಲ್ಲಿ 75 ಕುಟುಂಬ, ಹತ್ತಿರದ ಸಂಪಾಜೆ ಶಾಲೆಯಲ್ಲಿ 154 ಮಂದಿ, ತೆಕ್ಕಿಲ್‌ ಸಭಾಭವನದಲ್ಲಿ 100ಕ್ಕೂ ಅಧಿಕ ಮಂದಿ ಇದ್ದಾರೆ.

ನದಿಯಲ್ಲಿ ಹರಿದ ಕೆಸರು!
ಶನಿವಾರ ಬೆಳಗ್ಗೆ 11.30ರ ಹೊತ್ತಿಗೆ ಕಲ್ಲುಗುಂಡಿ, ಜೋಡುಪಾಲದಲ್ಲಿ ಹರಿದು ಸುಳ್ಯ ಸೇರುವ ಪಯಸ್ವಿನಿ ನದಿಯಲ್ಲಿ ಏಕಾಏಕಿ ಕೆಸರು ನೀರು ಹರಿಯಿತು. ನದಿ ತಟದ ಮನೆಗಳಲ್ಲಿ ಆತಂಕ ಮನೆ ಮಾಡಿತ್ತು. 
ನದಿಯಲ್ಲಿ ಮರಗಳ ರಾಶಿ! ಕಲ್ಲುಗುಂಡಿ, ಕೊಯನಾಡು, ಜೋಡುಪಾಲದ ಸೇತುವೆ ಪಿಲ್ಲರ್‌, ಕಿಂಡಿ ಅಣೆಕಟ್ಟಿನಲ್ಲಿ ಮರಗಳ ರಾಶಿಯೇ ಸಿಲುಕಿಕೊಂಡಿದೆ. ಜೋಡುಪಾಲದ ಹೊಸ ಕಿಂಡಿ ಅಣೆಕಟ್ಟಿನ ಭಾಗ ದಿಮ್ಮಿಯ ಹೊಡೆತಕ್ಕೆ ಬಿರುಕು ಬಿಟ್ಟಿದೆ. 

*ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next