Advertisement

“ಕಲ್ಲು’ಮಯ ಕೊಯ್ನಾಡು ಹೊಳೆ: ಹರಳಿಗಾಗಿ ನಡೆದಿದೆ ಹುಡುಕಾಟ!

09:45 AM Oct 24, 2018 | |

ಸುಳ್ಯ: ಆಗಸ್ಟ್‌ನಲ್ಲಿ ಸುರಿದ ಭಾರೀ ಮಳೆಯ ಸಂದರ್ಭ ಉಕ್ಕೇರಿದ್ದ ಜೋಡುಪಾಲ ಸನಿಹದ ಕೊಯ್ನಾಡು ಹೊಳೆಯಲ್ಲಿ ಈಗ ಬೆಲೆ ಬಾಳುವ ಹರಳಿಗಾಗಿ ಹುಡುಕಾಟ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.
ಇದಕ್ಕೆ ಮುಖ್ಯ ಕಾರಣ ಹೊಳೆಯಲ್ಲಿ ತುಂಬಿರುವ ಸಣ್ಣ ಗಾತ್ರದ ಬಗೆಬಗೆಯ ಕಲ್ಲುಗಳ ರಾಶಿ. ಇವುಗಳ ನಡುವೆ ಸಾವಿರಾರು ರೂ. ಮೌಲ್ಯದ ಹರಳುಗಳೂ ಇವೆ ಎನ್ನಲಾಗಿದ್ದು, ಕದ್ದು ಮುಚ್ಚಿ ಶೋಧ ನಡೆಯುತ್ತಿದೆ.

Advertisement

ಹೊಳೆ ಹರಿಯುವ ಪುಷ್ಪಗಿರಿ ಬೆಟ್ಟದಲ್ಲಿ ಹರಳು ಕಲ್ಲಿನ ನಿಕ್ಷೇಪವಿದೆ ಎನ್ನಲಾಗಿದ್ದು, ಗುಡ್ಡ ಕುಸಿದಾಗ ಬೆಲೆ ಬಾಳುವ ಈ ಹರಳು ಹರಿದು ಬಂದಿರ ಬಹುದು ಎಂಬ ಸಂದೇಹ ಮೂಡಿತ್ತು. ಈಗ ಕಲ್ಲಿನ ರಾಶಿಯೊಂದಿಗೆ ಹರಳು ಕೂಡ ಇರಬಹುದು ಎಂದು ಕೆಲವರು ಕಣ್ಣಿರಿಸಿದ್ದಾರೆ.

ಅಪಾರ ಪ್ರಮಾಣದ ಕಲ್ಲು
ಎರಡು ತಿಂಗಳ ಹಿಂದೆ ಪುಷ್ಪಗಿರಿ, ಜೋಡುಪಾಲ ಭಾಗದಲ್ಲಿ ಗುಡ್ಡ ಕುಸಿದು ಕೆಸರು ರಾಡಿ, ಬೃಹತ್‌ ಮರಗಳೊಂದಿಗೆ ಹೊಳೆ ತುಂಬಿ ಹರಿದಿತ್ತು. ಈಗ ನೀರು ಇಳಿದಿದೆ, ಬಹುಭಾಗ‌ ತಳ ಕಾಣಿಸುತ್ತಿದೆ. ಹೊಳೆಯ ಎಲ್ಲೆಡೆ ಕಲ್ಲು ತುಂಬಿದೆ. ಇದು ಗುಡ್ಡದಿಂದ ಹರಿದು ಬಂದದ್ದು, ಹಿಂದೆ ಇರಲಿಲ್ಲ ಎನ್ನುತ್ತಾರೆ ಕೊಯ್ನಾಡು ನಿವಾಸಿಯೊಬ್ಬರು.

ಹಬ್ಬಿದ ಊಹಾಪೋಹ
ಸ್ಥಳೀಯರು ನೀಡುವ ಮಾಹಿತಿಯ ಪ್ರಕಾರ, ಈ ಬೆಲೆಬಾಳುವ ಹರಳು ಕೆಲವರಿಗೆ ಸಿಕ್ಕಿದೆ. ಅದರ ಮೌಲ್ಯ ಲಕ್ಷಾಂತರ ರೂ. ಹರಳಿಗಾಗಿ ಹುಡುಕಾಡುವ ಬಹುಮಂದಿ ಬೇರೆ ಕಡೆಗಳಿಂದ ಬಂದವರು. ಹರಳಿನ ಪರಿಚಯ ಇದ್ದವರು ಮಾತ್ರ ಹುಡುಕಾಡಲು ಸಾಧ್ಯ ಎಂಬ ಸುದ್ದಿಯೂ ಹಬ್ಬಿದೆ. ಇದು ನಿಜವೇ ಎನ್ನುವ ಬಗ್ಗೆ ಖಾತರಿ ಇಲ್ಲ.

ಗಣಿಗಾರಿಕೆ ಪ್ರಭಾವ!
ಪುಷ್ಪಗಿರಿ ಬೆಟ್ಟದ ಕೆಲವು ಭಾಗದಲ್ಲಿ ಹರಳು ನಿಕ್ಷೇಪ ಇರುವ ಕಾರಣ ಅದರ ಸಂಗ್ರಹದ ದಂಧೆ ಇತ್ತು. ಕೂಜಿಮಲೆ, ಸುಟ್ಟತ್‌ಮಲೆ ಭಾಗದಲ್ಲಿ ಹರಳು ಲೂಟಿಗೆ ಸಾಕ್ಷಿ ಎಂಬಂತೆ ಗುಡ್ಡ ಅಗೆದ ಕುರುಹುಗಳಿವೆ. ರಾತೋರಾತ್ರಿ ಕೆಲವರ ಕುಮ್ಮಕ್ಕಿನಿಂದ ಈ ದಂಧೆ ಎಗ್ಗಿಲ್ಲದೆ ನಡೆಯುತ್ತಿತ್ತು. ಈಗ ಕಡಿವಾಣ ಹಾಕಿದ್ದೇವೆ ಅನ್ನುವುದು ಅರಣ್ಯ ಇಲಾಖೆಯ ಹೇಳಿಕೆ.

Advertisement

ಆದರೆ ಹರಳು ಲೂಟಿಗಾಗಿ ಬೆಟ್ಟದ ನಾನಾ ಭಾಗದಲ್ಲಿ ಸುರಂಗ ತೋಡಿದ್ದರಿಂದ ಅಲ್ಲಿ ನೀರು ನಿಂತು ಗುಡ್ಡ ಕುಸಿದಿರಬಹುದು ಎಂಬ ಅನುಮಾನವನ್ನು ಹೊಳೆ ಭಾಗದಲ್ಲಿರುವ ಕಲ್ಲಿನ ರಾಶಿ ಪುಷ್ಟೀಕರಿಸುತ್ತದೆ. ಎರಡು ತಿಂಗಳ ಹಿಂದೆ ಭಾರೀ ಮಳೆಯಾದಾಗ ಅರಣ್ಯದಲ್ಲಿ ಭಾರೀ ಭೂ ಕುಸಿತ ಉಂಟಾಗಿತ್ತು. ಆ ಸಂದರ್ಭ ಬಹು ವರ್ಣದ ಕಲ್ಲುಗಳು ಹೊಳೆಗೆ ಹರಿದಿದ್ದು, ನೀರು ಇಳಿದ ಕಾರಣ ಈಗ ಕಾಣಿಸುತ್ತಿವೆ.

ಗಮನಕ್ಕೆ ಬಂದಿಲ್ಲ
ಹೊಳೆಭಾಗದಲ್ಲಿ ಬೆಲೆಬಾಳುವ ಹರಳು ಹುಡುಕಾಟ ನಡೆಸುತ್ತಿರುವ ಬಗ್ಗೆ ಅರಣ್ಯ ಇಲಾಖೆಯ ಗಮನಕ್ಕೆ ಬಂದಿಲ್ಲ. ಅರಣ್ಯ ವ್ಯಾಪ್ತಿಯ ಪ್ರದೇಶದಲ್ಲಿ ಇಂತಹ ಯಾವುದೇ ದೂರು ಬಂದಿಲ್ಲ. ಈ ಬಗ್ಗೆ ಮಾಹಿತಿ ಸಿಕ್ಕರೆ ಕ್ರಮ ಕೈಗೊಳ್ಳಲಾಗುವುದು.
ಮಂಜುನಾಥ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಮಡಿಕೇರಿ ವಿಭಾಗ

ಕೆಳಭಾಗಕ್ಕೆ ಹರಿವು
ಎತ್ತರದ ಗುಡ್ಡಭಾಗದಲ್ಲಿರುವ ಬಗೆಬಗೆಯ ಕಲ್ಲುಗಳು ಮಳೆ ನೀರಿ ನೊಂದಿಗೆ ಕೆಳಕ್ಕೆ ಸಾಗಿ ಬರುತ್ತವೆ. ಪ್ರಾಕೃತಿಕ ವಿಕೋಪದಿಂದ ಅರಣ್ಯ ಭಾಗದಲ್ಲಿ ಗುಡ್ಡ ಕುಸಿದು ಈ ಕಲ್ಲುಗಳು ಹೊಳೆಯಲ್ಲಿ ಬಂದಿರುವ ಸಾಧ್ಯತೆ ಹೆಚ್ಚು. ಇದು ಹೆಚ್ಚಿನ ನದಿ, ಹೊಳೆಗಳಲ್ಲಿ ಕಂಡುಬರುವ ಪ್ರಕ್ರಿಯೆ.
 ಜಾನಕಿ ಭೂ ವಿಜ್ಞಾನಿ, ಮಂಗಳೂರು

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next