ಬಂಟ್ವಾಳ (ತುಳು ಗ್ರಾಮ-ಸಿರಿದೊಂಪ): ಬಿ.ಸಿ.ರೋಡ್ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದಲ್ಲಿ ತುಳುವೆರೆ ದಿಬ್ಬಣಕ್ಕೆ (ಮೆರವಣಿಗೆ) ಡಿ. 10ರಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ ಚೆಂಡೆ ಬಾರಿಸುವ ಮೂಲಕ ಚಾಲನೆ ನೀಡಿದರು. ಮಂಗಳೂರು-ಬೆಂಗಳೂರು ಸಂಪರ್ಕದ ರಾಷ್ಟ್ರೀಯ ಹೆದ್ದಾರಿ, ನೇತ್ರಾವತಿ ನದಿ ತಟದ ಜೋಡು ಮಾರ್ಗ ತುಳುವರ ಭಾಷಾ ಸಾಂಘಿಕ ಒಕ್ಕೂಟಕ್ಕೆ ಈ ಮೂಲಕ ಸಾಕ್ಷಿಯಾಯಿತು.
ತುಳುನಾಡ ಕೊಂಬು, ಕಂಗಿಲು ನೃತ್ಯ, ಗೊಂಬೆ, ಬಣ್ಣದ ಕೊಡೆ ಸಹಿತ ತುಳುನಾಡಿನ ಸಾಂಸ್ಕೃತಿಕ ಸೊಬಗನ್ನು ಪ್ರತಿಬಿಂಬಿಸುವ ಕಲಾಪ್ರದರ್ಶನಗಳೊಂದಿಗೆ ವೈವಿಧ್ಯವಾಗಿ ಗಣ್ಯ ಅತಿಥಿ, ಅಭ್ಯಾಗತರ ನೇತೃತ್ವದಲ್ಲಿ ತುಳು ಸಾಹಿತ್ಯ ಸಮ್ಮೇಳನ ನಡೆಯುವ ಸಿರಿದೊಂಪ-ಧರ್ಮ ಚಾವಡಿ ವೇದಿಕೆಗೆ ಸಮ್ಮೇಳನ ಅಧ್ಯಕ್ಷ ಮಲಾರ್ ಜಯರಾಮ ರೈ, ಸಮಿತಿ ಅಧ್ಯಕ್ಷ ಸುದರ್ಶನ ಜೈನ್, ಅಕಾಡೆಮಿ ಅಧ್ಯಕ್ಷರನ್ನು ತೆರೆದ ವಾಹನದಲ್ಲಿ ಕುಳ್ಳಿರಿಸಿ ಸಂಭ್ರಮದ ಮೆರವಣಿಗೆಯಲ್ಲಿ ಕರೆತರಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಗೇರು ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್, ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ, ಪುರಸಭಾ ಅಧ್ಯಕ್ಷ ಪಿ. ರಾಮಕೃಷ್ಣ ಆಳ್ವ ಪಾಲ್ಗೊಂಡಿದ್ದರು. ತುಳು ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ, ಸಮಿತಿ ಪ್ರಧಾನ ಸಂಚಾಲಕ ಎ. ಗೋಪಾಲ ಅಂಚನ್, ಪ್ರಧಾನ ಕಾರ್ಯದರ್ಶಿ ಡಿ.ಎಂ. ಕುಲಾಲ್, ಸಂಚಾಲಕ ಡಾ| ವೈ.ಎನ್. ಶೆಟ್ಟಿ, ಖಜಾಂಚಿ ಸುಭಾಶ್ಚಂದ್ರ ಜೈನ್, ವಿಜಯ ಶೆಟ್ಟಿ ಸಾಲೆತ್ತೂರು, ಎಚ್ಕೆ ನಯನಾಡು, ಸೀತಾರಾಮ ಶೆಟ್ಟಿ ಕಾಂತಾಡಿಗುತ್ತು, ನಾರಾಯಣ ಸಿ. ಪೆರ್ನೆ, ಬಂಟ್ವಾಳ ಕಸಾಪ ಅಧ್ಯಕ್ಷ ಕೆ. ಮೋಹನ ರಾವ್, ಸಮಿತಿ ಸಂಚಾಲಕರಾದ ಕೈಯೂರು ನಾರಾಯಣ ಭಟ್, ಪ್ರಕಾಶ ಬಿ. ಶೆಟ್ಟಿ, ಶ್ರೀಶೈಲ ತುಂಬೆ, ಟಿ. ಶೇಷಪ್ಪ ಮೂಲ್ಯ, ದಿವಾಕರದಾಸ್ ಕಾವಳಕಟ್ಟೆ, ಮೋಹನದಾಸ ಕೊಟ್ಟಾರಿ ಮುನ್ನೂರು, ಬಿ. ತಮ್ಮಯ, ರಮೇಶ ಶೆಟ್ಟಿ ಮಜಲೋಡಿ, ಪ್ರಭಾಕರ ಪ್ರಭು ಸಿದ್ಧಕಟ್ಟೆ, ಸುಕುಮಾರ್ ಬಂಟ್ವಾಳ, ದೇವಪ್ಪ ಕುಲಾಲ್ ಪಂಜಿಕಲ್ಲು, ಶ್ರೀನಿವಾಸ ಭಂಡಾರಿ ಮುನ್ನಲಾಯಿಗುತ್ತು, ಚಂದ್ರಶೇಖರ ಗಟ್ಟಿ ಮೊಗರ್ನಾಡು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.
ಧರ್ಮಚಾವಡಿಯಲ್ಲಿ ದೀವಟಿಗೆ ದೊಂದಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಹಿರಿಯ ಸಾಹಿತಿ ಡಾ| ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರು ವಸ್ತುಪ್ರದರ್ಶನ ಮಳಿಗೆ ಉದ್ಘಾಟಿಸಿದರು. ವೇದಿಕೆಯಲ್ಲಿ ಅಕಾಡೆಮಿಯ ತ್ತೈಮಾಸಿಕ ಪತ್ರಿಕೆ ಮದಿಪು ಇದನ್ನು ಸಚಿವರು ಬಿಡುಗಡೆ ಮಾಡಿದರು.
ಕೊಡಿಮರಕ್ಕೆ ಧ್ವಜಾರೋಹಣ
ಮೆರವಣಿಗೆಯು ಸಾಗಿ ಬಂದು ಸಮ್ಮೇಳನದ ಧರ್ಮಚಾವಡಿ ಎದುರು ಸಿರಿದೊಂಪದ ಮುಂಭಾಗದಲ್ಲಿ ನೆಟ್ಟಿದ್ದ ಕೊಡಿಮರಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ಕೆಂಪು ಬಟ್ಟೆಯಲ್ಲಿ ಬೆಳಗುತ್ತಿರುವ ಸೂರ್ಯ ಮತ್ತು ಅರ್ಧ ಚಂದ್ರ ಸಂಕೇತದ ತುಳು ಧ್ವಜವನ್ನು ಅನಾವರಣ ಮಾಡಿದರು. ಬಳಿಕ ಧ್ವಜಾರೋಹಣ ನಡೆಯಿತು. ಸಮ್ಮೇಳನದ ಇತಿಹಾಸದಲ್ಲಿ ಇದೊಂದು ಹೊಸ ಮಾದರಿಯಾಗಿ ಗಮನಾರ್ಹವಾಯಿತು.