Advertisement

ಜೋಡೋ ನಡಿಗೆ ದೇಶಕ್ಕೊಂದು ಕೊಡುಗೆ; ಡಿ.ಕೆ. ಶಿವಕುಮಾರ್‌

06:11 PM Sep 15, 2022 | Team Udayavani |

ಚಾಮರಾಜನಗರ: ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಹಮ್ಮಿಕೊಂಡಿರುವ ಭಾರತ್‌ ಜೋಡೋ ನಡಿಗೆ ದೇಶಕ್ಕೊಂದು ಕೊಡುಗೆಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

Advertisement

ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಜಿಲ್ಲಾ ಕಾಂಗ್ರೆಸ್‌ ಸಮಿತಿಯಿಂದ ಬುಧವಾರ ನಡೆದ ಭಾರತ್‌ ಜೋಡೋ ಪಾದಯಾತ್ರೆ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದರು. ಬಿಜೆಪಿಯವರು ದೇಶವನ್ನು ಇಬ್ಭಾಗ ಮಾಡಲು ಹೊರಟಿದ್ದಾರೆ ಅದನ್ನು ತಪ್ಪಿಸಲು, ಹಿರಿಯರು ತಂದು ಕೊಟ್ಟಿರುವ ಸ್ವಾತಂತ್ರ್ಯ ಉಳಿಸಲು, ಸಂವಿಧಾನ ಉಳಿಸಲು, ಹಾಗೂ ಹೆಣ್ಣುಮಕ್ಕಳಿಗೆ, ಯುವಕರಿಗೆ ಶಕ್ತಿ ತುಂಬಲು ಭಾರತ್‌ ಜೋಡೋ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಸೆ.30 ರಂದು ಗುಂಡ್ಲುಪೇಟೆಗೆ ಜೋಡೋ ಯಾತ್ರೆ ಪ್ರವೇಶ ಮಾಡಲಿದೆ. ಈ ಭಾರತ್‌ ಜೋಡೋ ಪಾದಯಾತ್ರೆಯಲ್ಲಿ ಹನೂರು, ಚಾಮರಾಜನಗರ, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಿಂದ ತಲಾ 10 ಸಾವಿರ ಜನರು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಪ್ರತಿ ಗ್ರಾಪಂನಲ್ಲೂ ಭಾರತ್‌ ಜೋಡೋ ಪಾದಯಾತ್ರೆ ಸಭೆ ನಡೆಸಬೇಕು. ಪ್ರತಿ ಮನೆಮನೆಗೂ ಅಹ್ವಾನ ಪತ್ರಿಕೆ ಕೊಟ್ಟು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿಸಿ ಇಡೀ ದೇಶಕ್ಕೆ ದೊಡ್ಡ ಸಂದೇಶ ಕೊಡುವ ಕೆಲಸವನ್ನು ಶಾಸಕ ಪುಟ್ಟರಂಗಶೆಟ್ಟರು ಮಾಡಬೇಕು ಎಂದರು.

ಪುಟ್ಟರಂಗಶೆಟ್ಟಿ ಸ್ಟ್ರಾಂಗ್‌: ನನಗಿಂತ, ಸಿದ್ದರಾಮಯ್ಯ ಅವರಿಗಿಂತ ಪುಟ್ಟರಂಗಶೆಟ್ಟಿ ಸ್ಟಾ›ಂಗ್‌ ಆಗಿದ್ದಾರೆ. ಪಾದಯಾತ್ರೆಯಲ್ಲಿ ರಾಷ್ಟ್ರ ನಾಯಕರೊಂದಿಗೆ ಹೆಜ್ಜೆ ಹಾಕಿದರೆ ಮದುವೆ ಗಂಡು ತರಹ ಕಾಣಬೇಕು. ಮತ್ತೂಂದು ಹೆಣ್ಣು ಕೊಡಂಗೆ ಇರಬೇಕು ಎಂದು ಹಾಸ್ಯ ಚಟಾಕಿ ಹಾರಿಸಿದರು. ನಿಮ್ಮೊಂದಿಗೆ ಕೊಳ್ಳೇಗಾಲದ ಮಾಜಿ ಶಾಸಕರಾದ ಎ.ಆರ್‌. ಕೃಷ್ಣಮೂರ್ತಿ, ಬಾಲರಾಜು ಹೆಜ್ಜೆ ಹಾಕಲಿ, ಜಯಣ್ಣ ನಿಮ್ಮ ಸ್ಪೀಡ್‌ಗೆ ಬರಲು ಸಾಧ್ಯವಿಲ್ಲ. ಅವರನ್ನು ಬಿಟ್ಟು ಬಿಡೋಣ. ನಾನು, ಧ್ರುವ ಸಿದ್ದರಾಮಯ್ಯ ಇತರೇ ನಾಯಕರು ಹಿಂದೆ ಬರುತ್ತೇವೆ. ಜಿಲ್ಲೆಯ ವ್ಯಾಪ್ತಿಯಲ್ಲಿ ನಿಮ್ಮದೇ ಹವಾ ಇರಬೇಕು. ಮುಂದಿನ ಚುನಾವಣೆಯಲ್ಲಿ 4 ವಿಧಾನಸಭೆ ಕ್ಷೇತ್ರಗಳಲ್ಲಿಲೂ 25 ಸಾವಿರ ಮತಗಳ ಅಂತರದಲ್ಲಿ ತಾವೆಲ್ಲರು ಗೆದ್ದು ವಿಧಾನಸಭೆ ಪ್ರವೇಶ ಮಾಡಬೇಕು ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು. ಪುಟ್ಟರಂಗಶೆಟ್ಟರೇ ಕಾಸುಕೊಟ್ಟು ಜನರನ್ನು ಕರೆ ತರಬೇಡಿ. ನಿಮ್ಮ ಕೈಯಲ್ಲಿ ಜನರನ್ನು ಸೇರಿಸೋಕೆ ಆಗದಿದ್ದರೆ ಹೇಳಿ ಕನಕಪುರದಿಂದ ಜನ ಕರೆ ತಂದು
ಪಾದಯಾತ್ರೆ ಮಾಡಿಸುತ್ತೇನೆ ಎಂದರು!

ಆಕ್ಸಿಜನ್‌ ದುರಂತದಲ್ಲಿ ಸತ್ತವರಿಗೆ ಪರಿಹಾರ ನೀಡದ ಸರ್ಕಾರ: ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಮಾತನಾಡಿ, ಆಕ್ಸಿಜನ್‌ ದುರಂತದಲ್ಲಿ ಮೃತಪಟ್ಟ 36 ಕುಟುಂಬಗಳಿಗೆ ಪಕ್ಷದ ವತಿಯಿಂದ ತಲಾ ಒಂದು ಲಕ್ಷ ಪರಿಹಾರ ನೀಡಿದ್ದೇವೆ. ಬಿಜೆಪಿ ನಾಯಕರಿಗೆ ಮಾನವೀಯತೆ ಇಲ್ಲ. ಮೋಜು ಮಾಡ್ತಾರೆ ಅತಿಯಾದ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಮುಖ್ಯಮಂತ್ರಿಗಳು ಜಿಲ್ಲಾ ಕೇಂದ್ರಕ್ಕೆ ಬಂದಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮರಾಜನಗರಕ್ಕೆ 12 ಬಾರಿ ಬಂದಿದ್ದು, ಜಿಲ್ಲೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಜಿಲ್ಲಾಭಿವೃದ್ದಿಗೆ ಒತ್ತು ನೀಡಿದ್ದಾರೆ. ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ ಅವರು ತಳಮಟ್ಟದಿಂದ ಕಾಂಗ್ರೆಸ್‌ ಬಲಪಡಿಸಿದ್ದಾರೆ ಎಂದರು.

Advertisement

ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ರಾಹುಲ್‌ ಗಾಂಧಿ ಯವರ ಜತೆಯಲ್ಲಿ ನಡೆಯುವುದೇ ನಮ್ಮ ಸೌಭಾಗ್ಯವಾಗಿದೆ. ಬಿಜೆಪಿ ಸರ್ಕಾರ ಅನುದಾನ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದರು. ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ ಅವರ ನೇತೃತ್ವದಲ್ಲಿರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಎಐಸಿಸಿ ಕಾರ್ಯದರ್ಶಿ ಹಾಗೂ ಮೈಸೂರು ವಿಭಾಗದ ಉಸ್ತುವಾರಿ ರೋಜಿಜಾನ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಪಿ. ಮರಿಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಸ್‌.ಸಿ.ಬಸವರಾಜು, ಮಂಜುಳಾ ಮಾನಸ, ಶಾಸಕ ಆರ್‌.ನರೇಂದ್ರ, ಮಾಜಿ ಶಾಸಕ ಎಸ್‌. ಬಾಲರಾಜು, ಜಿ.ಪಂ.ಮಾಜಿ ಅಧ್ಯಕ್ಷ ಸಿ.ಎ.ಮಹದೇವಶೆಟ್ಟಿ, ಮಾಜಿ ಸದಸ್ಯ ಕೆ.ಪಿ. ಸದಾಶಿವಮೂರ್ತಿ, ಜಿಲ್ಲಾ ಕಾಂಗ್ರೆಸ್‌ ವಕ್ತಾರ ಕೆರೆಹಳ್ಳಿನವೀನ್‌, ಡಿಸಿಸಿ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್‌, ಪ್ರಧಾನ ಕಾರ್ಯದರ್ಶಿಗಳಾದ ಆರ್‌.ಮಹದೇವ್‌, ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷ ಲತಾ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಾದ ಮಹಮ್ಮದ್‌ ಅಸ್ಗರ್‌, ಗುರುಸ್ವಾಮಿ, ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ವಕೀಲ ಅರುಣ್‌ ಕುಮಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next