ರಾಜಸ್ತಾನ್: ಮರ ಕಡಿಯಲು ವಿರೋಧ ವ್ಯಕ್ತಪಡಿಸಿ, ಮರದ ರಕ್ಷಣೆಗೆ ಮುಂದಾಗಿದ್ದ 20 ವರ್ಷದ ಯುವತಿಯನ್ನು ಸಜೀವವಾಗಿ ಸುಟ್ಟುಹಾಕಿದ ಭೀಕರ ಘಟನೆ ರಾಜಸ್ಥಾನದ ಜೋಧ್ ಪುರ್ ಜಿಲ್ಲೆಯಲ್ಲಿ ನಡೆದಿದೆ.
ರಸ್ತೆ ನಿರ್ಮಾಣದ ಹಿನ್ನೆಲೆಯಲ್ಲಿ ತೋಟದಲ್ಲಿನ ಮರ ಕಡಿಯುತ್ತಿರುವುದನ್ನು ತೀವ್ರವಾಗಿ ವಿರೋಧಿಸಿದ್ದ ಲಲಿತಾ(20ವರ್ಷ) ಎಂಬಾಕೆಯನ್ನು ಜೀವಂತವಾಗಿ ಸುಟ್ಟುಹಾಕಿರುವ ಪ್ರಕರಣ ಭಾನುವಾರ ನಡೆದಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.
ಮರ ಕಡಿಯುವುದನ್ನು ವಿರೋಧಿಸಿದ್ದಕ್ಕೆ ಲಲಿತಾ ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿತ್ತು. ಪರಿಸ್ಥಿತಿ ವಿಕೋಪಕ್ಕೆ ಹೋದ ಪರಿಣಾಮ ಗ್ರಾಮಸ್ಥರು ಯುವತಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವುದಾಗಿ ವರದಿ ತಿಳಿಸಿದೆ.
ಕೂಡಲೇ ಯುವತಿಯನ್ನು ಆಸ್ಪತ್ರೆಗೆ ಸಾಗಿಸಿದರೂ ಕೂಡಾ ಆಕೆಯ ಪ್ರಾಣ ಹೋಗಿರುವುದಾಗಿ ವೈದ್ಯರು ಘೋಷಿಸಿದ್ದರು. ಕೆಲವು ವರದಿ ಪ್ರಕಾರ, ಈ ಘಟನೆಯಲ್ಲಿ ಗ್ರಾಮದ ಮುಖ್ಯಸ್ಥ(ಸರ್ ಪಂಚ್) ಶಾಮೀಲಾಗಿರುವುದಾಗಿ ಹೇಳಿದೆ.
ಸರ್ ಪಂಚ್ ಹಾಗೂ ಇತರರು ಆಕೆ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಜೀವಂತವಾಗಿ ಸುಟ್ಟು ಹಾಕಿರುವುದಾಗಿ ತಿಳಿಸಿದೆ. ಪ್ರಕರಣದ ಆರೋಪಿಗಳನ್ನು ಶೀಘ್ರವೇ ಬಂಧಿಸುವುದಾಗಿ ಪೊಲೀಸ್ ಅಧಿಕಾರಿ ಸುರೇಶ್ ಚೌಧರಿ ಎಎನ್ಐ ಗೆ ತಿಳಿಸಿದ್ದಾರೆ.