Advertisement

ಜೋಡುಪಾಲ ಸಂತ್ರಸ್ತ ಮೋಹಿತ್‌ಗೆ ಸಿಕ್ಕಿತು ಸೂರು..!

02:19 AM Jun 27, 2020 | Sriram |

ಸುಳ್ಯ: ಎರಡು ವರ್ಷಗಳ ಹಿಂದೆ ಸಂಭವಿಸಿದ ಭೀಕರ ಪ್ರಾಕೃತಿಕ ದುರಂತಕ್ಕೆ ಸಿಲುಕಿ ಮನೆ, ಹೆತ್ತವರು, ಸಹೋದರಿಯನ್ನು ಕಳೆದುಕೊಂಡು ಚಿಕ್ಕಪ್ಪನ ಆಸರೆಯಲ್ಲಿದ್ದ ಜೋಡುಪಾಲದ ಮೋಹಿತ್‌ಗೆ ಪ್ರಾಕೃತಿಕವಿಕೋಪದಡಿ ಸಂತ್ರಸ್ತರಿಗೆ ನಿರ್ಮಿಸಿದ ಸೂರು ದೊರೆತಿದೆ..!

Advertisement

ಜಲ ಪ್ರವಾಹಕ್ಕೆ ಮೋಹಿತ್‌ನ ಜೋಡುಪಾಲದ ಮನೆ ಸಂಪೂರ್ಣ ನೆಲ ಸಮವಾದ ಕಾರಣ ಸುಳ್ಯದಲ್ಲಿರುವ ಚಿಕ್ಕಪ್ಪ ಉಮೇಶ್‌ ಅವರ ಬಾಡಿಗೆ ಕೊಠಡಿಯಲ್ಲಿ ದಿನ ದೂಡುತ್ತಿರುವ ಬಗ್ಗೆ ಉದಯವಾಣಿ 2019ರ ಮೇ 14 ರಂದು ವರದಿ ಪ್ರಕಟಿಸಿತು.

ಗೋಳಿಕಟ್ಟೆಯಲ್ಲಿ ಮನೆ
ದ.ಕ.ಜಿಲ್ಲೆಯ ಗಡಿಭಾಗದ ಸನಿಹದಲ್ಲಿರುವ ಮದೆ ಗೋಳಿಕಟ್ಟೆಯಲ್ಲಿ ಸಂತ್ರಸ್ತರಿಗೆ ನಿರ್ಮಿಸಲಾದ 80 ಮನೆಗಳ ಪೈಕಿ ಸರಕಾರ ನೀಡಿದ ಮನೆಯಲ್ಲಿ ವಾಸ ಆರಂಭಿಸಿದ್ದೇನೆ ಎಂದು ಮೋಹಿತ್‌ ಹೇಳಿದ್ದಾರೆ. 9.85 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ಮನೆಯಲ್ಲಿ ಎರಡು ಬೆಡ್‌ರೂಂ, ಅಡುಗೆ ಕೋಣೆ, ಶೌಚಾಲಯ, ಸ್ನಾನಗೃಹವಿದೆ.

ಉದ್ಯೋಗದ ನಿರೀಕ್ಷೆ..!
ತುಮಕೂರು ತಿಪಟೂರು ಸೆಲ್ಕೂ ಸೋಲಾರ್‌ ಕಂಪೆನಿ ಉದ್ಯೋಗಿ ಆಗಿದ್ದ ಮೋಹಿತ್‌ ಮನೆ ಮಂದಿಯನ್ನು ಕಳೆದುಕೊಂಡ ಬಳಿಕ ಆ ಕೆಲಸ ಬಿಟ್ಟಿದ್ದಾರೆ. ಪ್ರಾಕೃತಿಕ ವಿಕೋಪಕ್ಕೆ ಬಲಿಯಾದ ತಂದೆ ಬಸಪ್ಪ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಡಿ ಗ್ರೂಪ್‌ ನೌಕರರಾಗಿದ್ದರು. ಅನುಕಂಪ ಆಧಾರದಲ್ಲಿ ಮೋಹಿತ್‌ಗೆ ಸರಕಾರಿ ಉದ್ಯೋಗ ದೊರಕಿಸಿ ಕೊಡುವ ಆಶ್ವಾಸನೆ ಸಿಕ್ಕಿದೆ. ಅದಕ್ಕೆ ಬೇಕಾದ ಎಲ್ಲ ದಾಖಲೆ ಪತ್ರಗಳನ್ನು ಸಲ್ಲಿಸಲಾಗಿದೆ.

ಮನೆಯಲ್ಲಿ ಇಲ್ಲದ ಕಾರಣ ಪಾರು..!
ಜೋಡುಪಾಲದಲ್ಲಿ 2018ರ ಆಗಸ್ಟ್‌ನಲ್ಲಿ ಭೀಕರ ಜಲ ಸ್ಫೋಟ ಸಂಭವಿಸಿದ ವೇಳೆ ಮೋಹಿತ್‌ ತಿಪಟೂರಿನಲ್ಲಿ ಉದ್ಯೋಗದಲ್ಲಿದ್ದರಿಂದ ಪಾರಾಗಿದ್ದರು. ಈ ಜಲಸ್ಫೋಟದಲ್ಲಿ ಗುಡ್ಡ ಭಾಗದ ಮನೆಯಲ್ಲಿದ್ದ ಮೋಹಿತ್‌ ಅವರ ತಂದೆ ಬಸಪ್ಪ, ತಾಯಿ ಗೌರಮ್ಮ, ಸಹೋದರಿ ಮೋನಿಶಾ ಮತ್ತು ಸಂಬಂಧಿ ಮದೆ ಗ್ರಾಮದ ಬೆಟ್ಟತ್ತೂರು ನಿವಾಸಿ ಮಂಜುಳಾ ಮೃತಪಟ್ಟಿದ್ದರು. ಬೆಟ್ಟದಿಂದ ಧುಮ್ಮಿಕ್ಕಿ ಬಂದ ಪ್ರವಾಹ ಶೀಟು ಹಾಸಿದ ಮನೆ ಸಹಿತ ಮನೆ ಮಂದಿಯನ್ನು ಕೊಚ್ಚಿಕೊಂಡು ಹೋಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next