ಮುಂಬೈ : ‘ಜೋಧಾ ಅಕ್ಬರ್’ ಧಾರಾವಾಹಿಯಲ್ಲಿ ಸಲಿಮಾ ಬೇಗಮ್ ಪಾತ್ರ ಮಾಡಿದ್ದ ನಟಿ ಮನೀಷಾ ಯಾದವ್ ಬ್ರೇನ್ ಹ್ಯಾಮರೇಜ್‌ನಿಂದಾಗಿ ಅವರು ಶುಕ್ರವಾರ (ಅಕ್ಟೋಬರ್ 1) ನಿಧನರಾಗಿದ್ದಾರೆ.
ಬ್ರೇನ್ ಹ್ಯಾಮರೇಜ್‌ನಿಂದ ಬಳಲುತ್ತಿದ್ದ ಮನೀಷಾ ಶುಕ್ರವಾರ ಕೊನೆಯುಸಿರೆಳೆದರು. ತಾಯಿಯನ್ನು ಕಳೆದುಕೊಂಡು ಅವರ ಒಂದು ವರ್ಷದ ಮಗು ತಬ್ಬಲಿಯಾಗಿದೆ.
ಮನೀಷಾ ಅವರ ನಿಧನದ ವಿಷಯವನ್ನು ‘ಜೋಧಾ ಅಕ್ಬರ್’ ಧಾರಾವಾಹಿಯ ಸಹ ನಟಿ ಪರಿಧಿ ಶರ್ಮಾ ಸೋಷಿಯಲ್ ಮೀಡಿಯಾದಲ್ಲಿ ಖಚಿತಪಡಿಸಿದ್ದಾರೆ. ಅಗಲಿದ ಮನೀಷಾ ಅವರಿಗೆ ಸಂತಾಪ ಸೂಚಿಸಿದ್ದಾರೆ.
ತಮ್ಮ ಹಾಗೂ ಮನೀಷಾ ಅವರ ನಡುವಿನ ಸ್ನೇಹವನ್ನು ಮೆಲುಕು ಹಾಕಿರುವ ಪರಿಧಿ, “ಮನೀಷಾ ಯಾದವ್ ಇನ್ನಿಲ್ಲ ಎಂದು ತಿಳಿದು ಬೇಸರವಾಗಿದೆ. ಈ ವಿಷಯ ಕೇಳಿ ಶಾಕ್ ಆಯ್ತು. ಈಗಾಗಲೇ ಅವಳಿಗೆ ಒಂದು ವರ್ಷದ ಮಗನಿದ್ದಾನೆ, ಮಗನ ಪರಿಸ್ಥಿತಿ ಕಂಡು ಇನ್ನೂ ಬೇಸರವಾಗುತ್ತಿದೆ. ಜೋಧಾ ಅಕ್ಬರ್ ಧಾರಾವಾಹಿ ಮುಗಿದ ಬಳಿಕ ನಾನು ಮನೀಷಾ ಜೊತೆ ಸಂಪರ್ಕದಲ್ಲಿ ಇರಲಿಲ್ಲ. ಆದರೆ ಮೊಘಲ್ಸ್ ಎಂಬ ನಮ್ಮ ವಾಟ್ಸಪ್ ಗ್ರೂಪ್ ಇತ್ತು, ಆ ಗ್ರೂಪ್‌ನಲ್ಲಿ ಮನೀಷಾ ಕೂಡ ಇದ್ದಳು. ಮಹತ್ವದ ವಿಷಯ ಇದ್ದರೆ ಆ ಗ್ರೂಪ್‌ನಲ್ಲಿ ಎಲ್ಲರೂ ಶೇರ್ ಮಾಡುತ್ತಿದ್ದರು, ಹಾಗೆಯೇ ಮನೀಷಾ ಕೂಡ ಏನಾದರೂ ಶೇರ್ ಮಾಡುತ್ತಿದ್ದರು. ನಿನ್ನೆ ಸಂಜೆ ಆ ಗ್ರೂಪ್ ಮೂಲಕ ಮನೀಷಾ ನಿಧನದ ಸುದ್ದಿ ತಿಳಿಯಿತು” ಎಂದು ಪರಿಧಿ ಶರ್ಮಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
“ಮನೀಷಾ ಎನರ್ಜಿ ತುಂಬ ಹೈ ಆಗಿತ್ತು. ಶೂಟಿಂಗ್ ಮಾಡುವಾಗ ನಾನು ಹಾಗೂ ಮನೀಷಾ ತುಂಬ ಸುಂದರ ಸಮಯ ಕಳೆದಿದ್ದೇವೆ. ಅವಳು ತುಂಬ ಖುಷಿಯಾಗಿರುತ್ತಿದ್ದಳು, ಮನೀಷಾ ಇನ್ನಿಲ್ಲ ಎಂಬ ಸುದ್ದಿ ತಿಳಿದು ತುಂಬ ಖೇದವಾಗಿದೆ. ಅವಳ ಒಂದು ವರ್ಷದ ಮಗುವಿನ ಬಗ್ಗೆ ಇನ್ನೂ ಸಂಕಟವಾಗುತ್ತಿದೆ. ಅವಳ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವೆ” ಎಂದು ಪರಿಧಿ ಶರ್ಮಾ ನೋವು ಹೊರಹಾಕಿದ್ದಾರೆ.