Advertisement
ಹೀಗೆ ಹೊಸ ಅನುಭವವನ್ನು ನೀಡುತ್ತಿದ್ದ ಜೋಡಾಟ ಮರೆಯಾಗಿ ವರ್ಷಗಳೇ ಕಳೆಯಿತು. ಯಾವ ಮಾಧ್ಯಮದಲ್ಲೂ ಜೋಡಾಟದ ಬಗ್ಗೆ ಕನಿಷ್ಠ ಪ್ರಸ್ತಾಪವೂ ಆಗದಿರುವುದನ್ನು ಕಂಡಾಗ ಜೋಡಾಟವೆಂಬ ಈ ಅಪೂರ್ವ ಯಕ್ಷಗಾನ ಸ್ಪರ್ಧಾಕೂಟ ಅವಸಾನಗೊಂಡಿತೇನೋ ಎಂದನಿಸುತ್ತದೆ. ಕಲಾವಿದರಲ್ಲಿ ಸ್ಫೂರ್ತಿ ತುಂಬಲು ಮತ್ತು ಸಾಮರ್ಥ್ಯ ಅಳೆಯಲು ಈ ರೀತಿಯ ಜೋಡಾಟಗಳನ್ನು ಏರ್ಪಡಿಸಲಾಗುತ್ತಿತ್ತು ಎಂದು ಹಿರಿಯರು ನೆನಪಿಸಿಕೊಳ್ಳುತ್ತಿದ್ದಾರೆ. ಮೇಳಗಳನ್ನು ಕಟ್ಟಿ ಹೊರಡಿಸುವ ಕೆಲವು ಧಾರ್ಮಿಕ ಶ್ರದ್ಧಾ ಕೇಂದ್ರಗಳು, ಮಠಗಳು, ಸಾಮಾಜಿಕ-ಧಾರ್ಮಿಕ ಮುಖಂಡರು, ಶ್ರೀಮಂತ ಕಲಾಪೋಷಕರು , ಅರಸೊತ್ತಿಗೆಯವರು, ಗುತ್ತು ಮನೆತನದ ಜಮೀನಾªರರು ಜೋಡಾಟಗಳನ್ನು ಏರ್ಪಡಿಸಿ ಒಂದು ರೀತಿಯ ಗಮ್ಮತ್ತಿನ ಮನರಂಜನೆ ನೀಡುತ್ತಿದ್ದರಂತೆ.
ಜೋಡಾಟದ ಮೂಲಕ ಒಬ್ಬ ಉತ್ತಮ ಭಾಗವತ, ಉತ್ತಮ ನಾಟ್ಯಗಾರ, ಉತ್ತಮ ಹಾಸ್ಯಗಾರ, ಉತ್ತಮ ವಾಗ್ಮಿಯೆ ಮೊದಲಾದ ಪಟು ಓರ್ವನನ್ನು ಆಯ್ಕೆ ಮಾಡುವ ಪ್ರಯತ್ನ ಇದರ ಹಿಂದಿನ ಉದ್ದೇಶವಾಗಿತ್ತು ಎಂದು ಕೆಲವು ಯಕ್ಷಗಾನ ಪಂಡಿತರು ನೆನಪಿಸಿಕೊಳ್ಳುವುದಿದೆ. ಯಕ್ಷಗಾನ ಎಂದರೆ ಒಂದು ಸಮಷ್ಟಿ ಕಲೆ. ನಾಟ್ಯ, ಗಾನ, ಹಿಮ್ಮೇಳ, ನವರಸ ಭಾವ, ಸಂಗೀತ, ನಾಟಕ, ವರ್ಣ, ಅಲಂಕಾರ ಎಲ್ಲ ಒಂದೆಡೆ ಮೇಳೈಸಿದ ಅಪೂರ್ವ ಕಲೆಯೇ ಯಕ್ಷಗಾನ. “ಪ್ರಾಪಂಚಿಕ ಮಟ್ಟದಲ್ಲಿ ಸಂಶೋಧನೆ ನಡೆಸಿದರೂ ಕಲೆಗಳ ಸರ್ವ ಪ್ರಕಾರವೂ ಏಕತ್ರವಾಗಿರುವ ಕಲೆಯೊಂದು ಇರುವುದಾದರೆ ಅದು ಯಕ್ಷಗಾನ’ ಎಂದು ಜ್ಞಾನಪೀಠ ಪುರಸ್ಕೃತ ಡಾ| ಶಿವರಾಮ ಕಾರಂತರೇ ತಮ್ಮ “ಯಕ್ಷಗಾನ ಗ್ರಂಥ’ದಲ್ಲಿ ಉಲ್ಲೇಖೀಸಿದ್ದಾರೆ. ಇಂಥ ಅಪೂರ್ವ ಕಲೆಯಾದ ಯಕ್ಷಗಾನದಲ್ಲಿ ಸಮಷ್ಟಿತ್ವವನ್ನು ಹೊಂದಿದ ಕಲಾವಿದನನ್ನು ಹುಡುಕುವ ಬಗೆಯಾಗಿ ಈ ಜೋಡಾಟ ಒಂದು ಯತ್ನವಾಗಿರಲು ಸಾಧ್ಯವಿದೆ. ಕಟೀಲು ದೇವಾಲಯದಲ್ಲಿ ಕೊಡೆತ್ತೂರು ಗುತ್ತು ಕೋಟಿ ಶೆಟ್ಟಿ ಎಂಬವರು ಆಡಳಿತಗಾರರಾಗಿದ್ದ ಸಂದರ್ಭದಲ್ಲಿ ಕೆಲವೊಮ್ಮೆ ಜೋಡಾಟಗಳನ್ನು ನಡೆಸುತ್ತಿದ್ದರಂತೆ. ಅದೇ ರೀತಿ ಮುಲ್ಕಿ ಸೀಮೆಯ ಸಾಮಂತರಸರು ಕೂಡಾ ಈ ರೀತಿಯ ಸ್ಪರ್ಧಾತ್ಮಕ ಯಕ್ಷಗಾನ ಕೂಟದ ಪ್ರೋತ್ಸಾಹಕರಾಗಿದ್ದರು ಎಂದು ಕೆಲವು ಹಿರಿಯ ತಲೆಗಳು ನೆನಪಿಸಿಕೊಳ್ಳುತ್ತಿವೆ. ಆಗಿನ ಕಾಲದಲ್ಲಿ ಕಲಾವಿದನೋರ್ವ ಶಹಬಾಸ್ ಎನಿಸಿಕೊಳ್ಳುವುದು ಅವನ ಗಿರಕಿ ಹೊಡೆಯುವ ಲೆಕ್ಕಚಾರದಿಂದ. ಯುದ್ಧದ ಸಂದರ್ಭದಲ್ಲಿನ ಈ ಗಿರಕಿ ಹೊಡೆಯುವುದೇನೋ ಅಷ್ಟು ಸುಲಭದ ಕುಣಿತವಲ್ಲ. ನೂರು, ಇನ್ನೂರು, ಮುನ್ನೂರರವರೆಗೂ ಹಠಕಟ್ಟಿ ಗಿರಕಿ ಹೊಡೆದು ಅದ್ಭುತ ಪ್ರದರ್ಶನ ನೀಡಿ ಭಲೇ ಎನಿಸಿಕೊಂಡ ಕೆಲವು ಕಲಾವಿದರು ಇಂದು ಮೂಲೆ ಸೇರಿದ್ದಾರೆ.
Related Articles
Advertisement
ಮೋಹನದಾಸ ಸುರತ್ಕಲ್