Advertisement

10 ಲಕ್ಷ ಕನ್ನಡಿಗರಿಗೆ ತಪ್ಪಿತು ಐಟಿ-ಬಿಟಿ ಉದ್ಯೋಗ!

03:45 AM Feb 04, 2017 | Team Udayavani |

ಬೆಂಗಳೂರು: ಒಂದೆಡೆ ಐಟಿ, ಬಿಟಿ ಸೇರಿದಂತೆ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುತ್ತೇವೆ ಎಂದು ಹೇಳಿಕೊಂಡು ಬರುತ್ತಿರುವ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ, ಇನ್ನೊಂದು ಕಡೆಯಲ್ಲಿ ತಾನೇ ಮಾಡಿದ ತಪ್ಪಿನಿಂದಾಗಿ ಎಂಟರಿಂದ ಹತ್ತು ಲಕ್ಷ ಮಂದಿ ಕನ್ನಡಿಗರಿಗೆ ಉದ್ಯೋಗ ತಪ್ಪಿಸಿರುವುದೂ ಬೆಳಕಿಗೆ ಬಂದಿದೆ.

Advertisement

ಇತ್ತೀಚೆಗಷ್ಟೇ ಡಾ. ಸರೋಜಿನಿ ಮಹಿಷಿ ವರದಿಯಂತೆ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಲೇಬೇಕೆಂಬ ಶಿಫಾರಸ್ಸು ಜಾರಿಗೆ ಯತ್ನಿಸುವುದಾಗಿ ರಾಜ್ಯ ಸರ್ಕಾರ ಹೇಳಿತ್ತು. ಆದರೆ, 2014ರಲ್ಲಿಯೇ ಸದ್ದು ಗದ್ದಲವಿಲ್ಲದೆ ರಾಜ್ಯದಲ್ಲಿ ಐಟಿ ಬಿಟಿ, ಬಿಪಿಒ, ಸ್ಟಾರ್ಟಪ್‌ ಕಂಪನಿಗಳಿಗೆ ಕನ್ನಡಿಗರನ್ನೇ ನೇಮಕ ಮಾಡಿಕೊಳ್ಳಬೇಕೆನ್ನುವ ಕಾಯ್ದೆಯಿಂದ ಸಂಪೂರ್ಣ ವಿನಾಯಿತಿ ನೀಡಿದೆ.

ಏನಿದು ಅವಾಂತರ?: ರಾಜ್ಯದಲ್ಲಿ ಸ್ಥಾಪನೆಯಾಗುವ ಐಟಿ,ಬಿಟಿ ಸೇರಿದಂತೆ ಸ್ಟಾರ್ಟ್‌ಅಪ್‌, ಆ್ಯನಿಮೇಶನ್‌, ಗೇಮಿಂಗ್‌, ಕಂಪ್ಯೂಟರ್‌ ಗ್ರಾμಕ್ಸ್‌, ಟೆಲಿಕಾಂ, ಬಿಪಿಒ, ಕೆಪಿಒ ಸೇರಿದಂತೆ ಜ್ಞಾನಾಧಾರಿತ ಉದ್ಯಮಗಳಿಗೆ ಕೇಂದ್ರ ಸರ್ಕಾರದ ಕಾರ್ಮಿಕ ಕಾಯ್ದೆ 1946 ರ (ಸ್ಟಾಂಡಿಂಗ್‌ ಆರ್ಡರ್ಸ್‌) ನಿಯಮಗಳಿಂದ ವಿನಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಅತ್ಯಾಚಾರವಾದರೂ ಕೇಳುವ ಹಾಗಿಲ್ಲ: ಐಟಿ ಬಿಟಿ ಸ್ಟಾರ್ಟ ಅಪ್‌, ಬಿಪಿಒ ಸೇರಿದಂತೆ ಜ್ಞಾನಾಧಾರಿತ ಉದ್ಯಮಗಳಿಗೆ ರಾಜ್ಯ ಸರ್ಕಾರ ಕಾರ್ಮಿಕ ಕಾಯ್ದೆಯಿಂದ ವಿನಾಯಿತಿ ನೀಡಿರುವುದರಿಂದ ಆ ಸಂಸ್ಥೆಗಳಲ್ಲಿ ನಡೆಯುವ ಯಾವುದೇ ಚಟುವಟಿಕೆಗಳೂ ಹೊರಗೆ ಬರುವುದಿಲ್ಲ. ಒಂದು ವೇಳೆ ಈ ರೀತಿಯ ಕಂಪನಿಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದರೆ, ಉದ್ಯೋಗಿಗಳು ಮತ್ತು ಆಡಳಿತ ಮಂಡಳಿಯ ಸಮಿತಿಯಲ್ಲಿಯೇ ಬಗೆ ಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. 

2001ರಲ್ಲಿಯೇ ಐಟಿ ಉದ್ಯಮಕ್ಕೆ ಉತ್ತೇಜನ ನೀಡಲು ಆಗಿನ ರಾಜ್ಯ ಸರ್ಕಾರ 10 ವರ್ಷಗಳವರೆಗೆ ಕಾರ್ಮಿಕ ಕಾಯ್ದೆಯಿಂದ ವಿನಾ ಯಿತಿ ನೀಡಿತ್ತು. ಆದರೆ, ಅದೇ ಆದೇಶದ ಲಾಭ ಪಡೆದಿರುವ ಐಟಿ,ಬಿಟಿ ಕಂಪನಿಗಳು, ತಮ್ಮ ಎಲ್ಲ ವ್ಯವಹಾರಗಳು ಹಾಗೂ ನೇಮಕಾತಿ ವಿಷಯದಲ್ಲಿ ರಾಜ್ಯ ಸರ್ಕಾರ ಯಾವುದೇ ರೀತಿಯ ಹಸ್ತಕ್ಷೇಪ ಮಾಡದಂತೆ ನೋಡಿಕೊಂಡಿದ್ದವು.

Advertisement

2014ರಲ್ಲಿ ರಾಜ್ಯ ಸರ್ಕಾರ ಮತ್ತೆ ಐದು ವರ್ಷಗಳಿಗೆ ಐಟಿ, ಬಿಟಿ ಸೇರಿದಂತೆ ಜ್ಞಾನಾಧಾರಿತ ನವೋದ್ಯಮಗಳಿಗೆ ವಿನಾಯಿತಿ ನೀಡಿದ್ದು, ಇದರಿಂದ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡಬೇಕೆಂಬ ಸರೋಜಿನಿ ಮಹಿಷಿ ವರದಿಯ ಶಿಫಾರಸ್ಸಿಗೆ ಹಿನ್ನಡೆಯಾದಂತಾಗಿದೆ. ಕಾರ್ಮಿಕ ಇಲಾಖೆ ಮಾಡಿರುವ ಈ ಆದೇಶದಿಂದ ಐಟಿ, ಬಿಟಿ, ಸ್ಟಾರ್ಟ್‌ ಅಪ್‌ ಕಂಪನಿಗಳಿಗೆ ಉದ್ಯಮ ಸ್ಥಾಪಿಸಲು ಅನುಮತಿ ನೀಡು ವುದಷ್ಟೇ ರಾಜ್ಯ ಸರ್ಕಾರದ ಕೆಲಸವಾ ಗಿದ್ದು, ಉಳಿದಂತೆ ಈ ಉದ್ಯಮಗಳ ಕಾರ್ಯ ವೈಖರಿ, ಅಲ್ಲಿ ನಡೆಯುವ ಯಾವುದೇ ಚಟುವಟಿಕೆಗಳ ಬಗ್ಗೆಯೂ ಕೇಳಲು ರಾಜ್ಯಕ್ಕೆ ಅಧಿಕಾರವಿಲ್ಲ.

500 ಜನರಲ್ಲಿ ಐವರು ಕನ್ನಡಿಗರು!: ಬೆಂಗಳೂರು ಸೇರಿದಂತೆ ರಾಜ್ಯದಲ್ಲಿರುವ ಮಾಹಿತಿ, ಜೈವಿಕ ತಂತ್ರಜ್ಞಾನ ಕಂಪನಿಗಳು ಒಮ್ಮೆ ಐನೂರು ಜನರನ್ನು ನೇಮಕ ಮಾಡಿ ಕೊಂಡರೆ, ಅವರಲ್ಲಿ ಕನ್ನಡಿಗರಿಗೆ ಕೇವಲ ಐವರು ಕನ್ನಡಿಗರಿಗೆ ಮಾತ್ರ ಅವಕಾಶ ದೊರೆಯುತ್ತಿದೆ. ಶೇ.100ರಷ್ಟು ಕನ್ನಡಿಗರಿಗೇ ಉದ್ಯೋಗ ನೀಡಬೇಕೆನ್ನುವ ಕಾನೂನಿನಲ್ಲಿ ಶೇ.10 ರಷ್ಟೂ ಜಾಗ ಕನ್ನಡಿಗರಿಗೆಸಿಗುತ್ತಿಲ್ಲ. ಇದೇ ಕಾರಣದಿಂದ ರಾಜ್ಯದ ಎಲ್ಲ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಐಟಿ ಕಂಪನಿಗಳು ಕ್ಯಾಂಪಸ್‌ ಇಂಟರ್‌ವ್ಯೂ ನಡೆಸುತ್ತಿಲ್ಲ. ಕೇವಲ ಬೆರಳೆಣಿಕೆ ಯಷ್ಟು ಪ್ರತಿಷ್ಠಿತ ಕಾಲೇಜುಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಿವೆ.

ರಾಜ್ಯ ಸರ್ಕಾರವೇ ಪರೋಕ್ಷವಾಗಿ ಐಟಿ ಕ್ಷೇತ್ರದಲ್ಲಿ ನಿರುದ್ಯೋಗ ಹೆಚ್ಚಳಕ್ಕೆ ಉಡುಗೊರೆ ನೀಡಿದಂತಾಗಿದೆ. ಒಂದು ಮಾಹಿತಿ ಪ್ರಕಾರ ಬೆಂಗಳೂರು ನಗರ ಒಂದರಲ್ಲಿಯೇ ಸುಮಾರು 3500 ಕ್ಕೂ ಹೆಚ್ಚು ಐಟಿ ಕಂಪನಿಗಳಿದ್ದು, 290 ಬಿಟಿ ಕಂಪನಿಗಳಿವೆ.
ಇವುಗಳಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚು ಜನ ಉದ್ಯೋಗಿಗಳಿದ್ದಾರೆ. 

ಈ ಕಂಪನಿಗಳಲ್ಲಿ ಸಿ ಮತ್ತು ಡಿ ದರ್ಜೆಯ ಹುದ್ದೆಗಳೂ ಸೇರಿದಂತೆ ಶೇ.50ರಷ್ಟೂ ಕೂಡ ಕನ್ನಡಿಗರಿಗೆ ಉದ್ಯೋಗ ದೊರೆತಿಲ್ಲ ಎನ್ನಲಾಗಿದೆ. ಸರೋಜಿನಿ ಮಹಿಷಿ ಪರಿಷ್ಕೃತವರದಿ ಪ್ರಕಾರ ಎ ಮತ್ತು ಬಿ. ದರ್ಜೆಯ ಹುದ್ದೆಗಳಲ್ಲಿ ಕನ್ನಡಿಗರಿಗೆ ಶೇ.65 ರಿಂದ 70 ರಷ್ಟು ಹಾಗೂ ಸಿ ಮತ್ತು ಡಿ. ದರ್ಜೆಯ ಹುದ್ದೆಗ ಳಲ್ಲಿ ಶೇ.100 ರಷ್ಟು ಕನ್ನಡಿಗರಿಗೆ ಉದ್ಯೋಗ ನೀಡಬೇಕೆಂದು ಶಿಫಾರಸ್ಸು ಮಾಡಲಾ ಗಿದೆ. ಕಾರ್ಮಿಕ ಇಲಾಖೆಯ ನಿರೀಕ್ಷರು ಮತ್ತು ಅಧಿಕಾರಿಗಳು ಕಂಪನಿಗಳ ಕಾರ್ಯ ಚಟುವಟಿಕೆಗಳ ಬಗ್ಗೆ ತಪಾಸಣೆ ನಡೆಸುವುದಕ್ಕೂ ನಿರ್ಬಂಧ ಹೇರಲಾಗಿದೆ.

ಈ ರೀತಿಯ ಆದೇಶ ಮಾಡಿರುವುದು ನನ್ನ ಗಮನಕ್ಕೆ ಬಂದಿದೆ. ಐಟಿ ಕಂಪನಿಗಳಿಗೆ ಉತ್ತೇಜನ ನೀಡಲು ಸರ್ಕಾರ ಹಿಂದೆಯೇ ವಿನಾಯಿತಿ ನೀಡಿದೆ. ರಾಜ್ಯ ಸರ್ಕಾರ ಕನ್ನಡಿಗರಿಗೆ ಉದ್ಯೋಗ ಕೊಡಿಸಲು ತೀರ್ಮಾನ ತೆಗೆದುಕೊಳ್ಳುವ ಸಂದರ್ಭದಲ್ಲಿ ಈಗಿರುವ ಆದೇಶದ ಜೊತೆಗೆ ಕನ್ನಡಿಗರಿಗೆ ಕಡ್ಡಾಯ ಉದ್ಯೋಗ ನೀಡಬೇಕೆಂಬ ಅಂಶವನ್ನು ಸೇರಿಸಿ ಆದೇಶ ಹೊರಡಿಸಲಾಗುವುದು. ವಿನಾಯಿತಿ ನೀಡಿರುವುದು ಸ್ಟಾಂಡಿಂಗ್‌ ಆದೇಶ ಇರುವುದರಿಂದ ಅದನ್ನು ರಾಜ್ಯ ಸರ್ಕಾರ ಯಾವಾಗ ಬೇಕಾದರೂ ಬದಲಾಯಿಸಬಹುದು. ಆ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನ ನಡೆಸುತ್ತಿದೆ.
– ಸಂತೋಷ್‌ ಲಾಡ್‌ ಕಾರ್ಮಿಕ ಸಚಿವ.

ಐಟಿ ಬಿಟಿ ಕಂಪನಿಯವರು ಪಾಳೆಗಾರರು ಇದ್ದ ಹಾಗೆ, ಒಬ್ಬೊಬ್ಬರು ಒಂದೊಂದು ಪಾಳೆಗಾರಿಕೆ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರದಿಂದ ಮುನ್ನೂರು ನಾನೂರು ಎಕರೆ ಜಮೀನು ತೆಗೆದುಕೊಂಡು ಬಂಗಲೆ ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ. ಐಟಿ. ಬಿಟಿಯವರು ಕನ್ನಡ ದ್ರೋಹಿಗಳು, ಅವರ ಮೈಯಲ್ಲಿ ಕನ್ನಡ ವಿರೋಧಿ ರಕ್ತ ಹರಿಯುತ್ತಿದೆ. ಸರ್ಕಾರ ಅವರಿಗೇಕೆ ವಿನಾಯಿತಿ ನೀಡಬೇಕು. ಕಾರ್ಮಿಕ ಕಾಯ್ದೆಯಿಂದ ವಿನಾಯಿತಿ ನೀಡಿರುವುದನ್ನು ತಕ್ಷಣ ವಾಪಸ್‌ ಪಡೆಯಬೇಕು.
– ವಾಟಾಳ್‌ ನಾಗರಾಜ್‌ ಕನ್ನಡ ವಾಟಾಳ್‌ ಪಕ್ಷದ ನಾಯಕ.

ಐಟಿ ಕಂಪನಿಗಳಲ್ಲಿ ಹೊಸ ನೇಮಕಾತಿಗಳಲ್ಲಿ ಕನ್ನಡಿಗರು ತೀರಾ ಕಡಿಮೆ ಸಂಖ್ಯೆಯಲ್ಲಿರುತ್ತಾರೆ. ನಮ್ಮ ರಾಜ್ಯದಲ್ಲಿ ಕ್ಯಾಂಪಸ್‌ ಇಂಟರ್‌ವ್ಯೂ ಮಾಡುವುದಿಲ್ಲ. ಆಂಧ್ರ, ತಮಿಳುನಾಡು, ಕೋಲ್ಕತ್ತಾಗಳಲ್ಲಿ ಕ್ಯಾಂಪಸ್‌ ಇಂಟರ್‌ವ್ಯೂಸ್‌ ಮಾಡುವ ಮೂಲಕ ಹೆಚ್ಚಿನ ಸಂಖ್ಯೆಯವರನ್ನು ಸೇರಿಸಿಕೊಳ್ಳುತ್ತಾರೆ. ರಾಜ್ಯ ಸರ್ಕಾರ ಐಟಿ ಕಂಪನಿಗಳನ್ನೂ ಇತರ ಉದ್ಯಮಗಳಂತೆ ನೋಡಬೇಕು ಹೆಚ್ಚಿನ ವಿನಾಯಿತಿ ನೀಡುವುದರಿಂದ ಕನ್ನಡಿಗರು ಅಲ್ಪ ಸಂಖ್ಯಾತರಾಗುವ ಸ್ಥಿತಿ ನಿರ್ಮಾಣವಾಗುತ್ತಿದೆ.
– ಪ್ರಕಾಶ್‌ ಹೆಬ್ಬಳ್ಳಿ ಐಟಿ ಕಂಪನಿ ಉದ್ಯೋಗಿ.

– ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next