ಬೆಂಗಳೂರು: ಕೋವಿಡ್ 19 ಲಾಕ್‌ಡೌನ್ ಹಿನ್ನೆಲೆಯಲ್ಲಿ ವಿದೇಶಗಳಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ಉದ್ಯೋಗ ಕಳೆದುಕೊಂಡಿದ್ದರೆ ಸ್ಕಿಲ್ ಪೋರ್ಟಲ್ ನಲ್ಲಿ ನೋಂದಾಯಿಸಿಕೊಳ್ಳುವಂತೆ ಕರ್ನಾಟಕ ಕೌಶಲ್ಯಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ರತ್ನಪ್ರಭಾ ತಿಳಿಸಿದ್ದಾರೆ.
ಶನಿವಾರ ಸಾಗರೋತ್ತರ ಕನ್ನಡಿಗರೊಂದಿಗೆ ಸಂವಾದ ನಡೆಸಿ, ಕರ್ನಾಟಕ ಕೌಶಲ್ಯಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಪ್ರಾರಂಭಿಸಿರುವ “ಸ್ಕಿಲ್ ಪೋರ್ಟಲ್” ಬಗ್ಗೆ ಮಾಹಿತಿ ನೀಡಿ ಕೆಲಸ ಕಳೆದುಕೊಂಡಿರುವ ವಲಸೆ ಕಾರ್ಮಿಕರಿಗೆ ಮತ್ತು ಹೊರನಾಡ ಕನ್ನಡಿಗರಿಗೆ ಉದ್ಯೋಗದಾತರು ಮತ್ತು ಉದ್ಯೋಗಾಂಕ್ಷಿಗಳಿಗೆ ಸೇತುವೆಯಾಗಿ ಸಹಾಯ ಮಾಡುತ್ತಿದೆ ಎಂದು ತಿಳಿಸಿ, ಉದ್ಯೋಗ ಕಳೆದುಕೊಂಡಿರುವ ಎಲ್ಲರೂ ಸ್ಕಿಲ್ ಪೋರ್ಟಲ್ ಅಲ್ಲಿ ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಿದರು.
ಸೌದಿಯಲ್ಲಿ ಉದ್ಯೋಗ ಕಳೆದು ಕೊಂಡು ಖನ್ನತೆಗೆ ಒಳಗಾಗಿದ್ದ ಫತೆ ಅಹಮದ್ ಅವರಿಗೆ ಕೆಲಸದ ಭರವಸೆ. ಲೋಕೇಶ್ ಅನ್ನುವವರಿಗೆ ಉದ್ಯೋಗ ಒದಗಿಸಿಕೊಡುವಲ್ಲಿ ರತ್ನಪ್ರಭಾ ಸ್ಥಳದಲ್ಲಿಯೇ ಪರಿಹಾರ ಒದಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಇದೇ ತಿಂಗಳಲ್ಲಿ ಈ ಪೋರ್ಟಲ್ ಮುಖಾಂತರ ಆನ್‌ಲೈನ್ ಜಾಬ್ ಮೇಳ ಮಾಡುತ್ತಿದ್ದು ಅದರಲ್ಲಿ ಭಾಗವಹಿಸಿ ಸೂಕ್ತ ಉದ್ಯೋಗ ಪಡೆದಕೊಳ್ಳುವಂತೆ ಸೂಚಿಸಿದರು.
ಅಲ್ಲದೇ ತಾವು ಮುಖ್ಯ ಕಾರ್ಯದರ್ಶಿ ಆಗಿದ್ದ ಸಮಯದಲ್ಲಿ ಪ್ರಾರಂಭಿಸಲು ಉದ್ದೇಶಿಸಿದ್ದ ಅಂತಾರಾಷ್ಟ್ರೀಯ ವಲಸೆ ಕೇಂದ್ರ ಈಗ ಕಾರ್ಯಾರಂಭವಾಗಿದ್ದು, ಇದರ ಮುಖಾಂತರ ವಿದೇಶಗಳಲ್ಲಿ ಉದ್ಯೋಗ ಕಳೆದುಕೊಂಡಿರುವ ಕಾರ್ಮಿಕರಿಗೆ, ನೌಕರರಿಗೆ ಅಲ್ಲಿಯೇ ಉದ್ಯೋಗ ಕೊಡಿಸುವ ಭರವಸೆ ನೀಡಿದರು. ಅಲ್ಲದೇ ಈಗಾಗಲೇ ಅಲ್ಲಿಂದ ವಾಪಸ್ ಬಂದಿರುವ ಕಾರ್ಮಿಕರಿಗೆ ಇಲ್ಲಿನ ಕೈಗಾರಿಕೆಗಳು ಮತ್ತು ಉದ್ಯಮಿಗಳೊಂದಿಗೆ ಸಭೆ ನಡೆಸಿ ಉದ್ಯೋಗ ನೀಡುವ ಭರವಸೆ ನೀಡಿದರು.
ಮತ್ತೇ ಅಲ್ಲಿಂದ ಬಂದು ಇಲ್ಲಿ ಉದ್ಯಮ ಪ್ರಾರಂಭಿಸಲು ಇಚ್ಚಿಸುವ ಎನ್ ಆರ್‌ಐ ಉದ್ಯಮಿಗಳಿಗೆ ಇರುವ ಅವಕಾಶಗಳು ಮತ್ತು ಸರ್ಕಾರದಿಂದ ದೊರಕುವ ಸೌಲಭ್ಯ, ಸಬ್ಸಿಡಿ, ಉತ್ತೇಜಕ ಯೋಜನೆಗಳ ಬಗ್ಗೆ ತಿಳಿಸಿದರು.ಸಾಗರೋತ್ತರ ಕನ್ನಡಿಗರ ಸಂವಾದದಲ್ಲಿ ಅಮೆರಿಕಾ, ಇಟಲಿ, ದುಬೈ, ಆಸ್ಟ್ರೇಲಿಯಾ ರಾಷ್ಟ್ರಗಳ ಅನಿವಾಸಿ ಕನ್ನಡಿಗರಾದ, ಗೋಪಾಲ್ ಕುಲಕರ್ಣಿ, ರವಿ ಮಹಾದೇವ್, ಚಂದ್ರಶೇಖರ್ ಲಿಂಗದಳ್ಳಿ ಸೇರಿದಂತೆ 20ಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು.