ಉದ್ಯೋಗ ಅಭದ್ರತೆ ನಮ್ಮಲ್ಲನೇಕರನ್ನು ಕಾಡುತ್ತಿರುವುದು ಸುಳ್ಳಲ್ಲ. ಜಾಬ್ ಲಾಸ್ ನಷ್ಟವನ್ನು ತುಂಬಿಕೊಡುವ ವಿಮೆಗಳಿವೆ ಎಂದರೆ ಅನೇಕರಿಗೆ ಅಚ್ಚರಿಯಾಗಬಹುದು.
ಹಲವು ಉದ್ಯಮ ವಲಯಗಳು ಪುನರಾರಂಭಗೊಳ್ಳಲು ಸರ್ಕಾರದ ಅನುಮತಿಗಾಗಿ ಕಾಯುತ್ತಿವೆ. ಟ್ರಾವೆಲ್ಸ್, ಹಾಸ್ಪಿಟಾಲಿಟಿ, ದಿನಸಿ ಹೊರತುಪಡಿಸಿದ ಚಿಲ್ಲರೆ ಮಾರಾಟ ಮುಂತಾದ ಕ್ಷೇತ್ರಗಳ ಪುನರಾರಂಭಕ್ಕೆ ಅನುಮತಿ ದೊರೆತರೂ, ಅವೆಲ್ಲಾ ಸಹಜ ಪರಿಸ್ಥಿತಿಗೆ ಬರಲು ತಿಂಗಳುಗಳೇ ಬೇಕಾಗುತ್ತದೆ. ಇವೆಲ್ಲದರ ನಡುವೆ, ಉದ್ಯೋಗದ ಅಭದ್ರತೆ ನಮ್ಮಲ್ಲಿ ಅನೇಕರನ್ನು ಕಾಡುತ್ತಿದೆ. ಇಂಥ ಸಂದರ್ಭದಲ್ಲಿ, ಜಾಬ್ ಲಾಸ್ ನಷ್ಟವನ್ನು ತುಂಬಿಕೊಡುವ ವಿಮೆಗಳೂ ಇವೆ ಎಂದರೆ ಹಲವರಿಗೆ ಅಚ್ಚರಿಯಾಗಬಹುದು.
ಪಾಲಿಸಿ ಕೊಳ್ಳುವುದು ಎಲ್ಲಿ?: ಜಾಬ್ ಲಾಸ್ ಪ್ಲ್ಯಾನುಗಳನ್ನು ಜನರಲ್ ಇನ್ಶೂರೆನ್ಸ್ ಕಂಪನಿಗಳೇ ನೀಡುತ್ತವೆ. ಎಲ್ಲರೂ ಗಮನದಲ್ಲಿಡಬೇಕಾದ ವಿಚಾರವೆಂದರೆ, ಈ ಪಾಲಿಸಿಗಳು ಪ್ರತ್ಯೇಕವಾಗಿ ಅಥವಾ ಸ್ವತಂತ್ರವಾಗಿ (ಸ್ಟ್ಯಾಂಡ್ ಅಲೋನ್) ಲಭ್ಯ ಇರುವುದಿಲ್ಲ. ಅಪಘಾತ, ಗಂಭೀರ ಕಾಯಿಲೆ, ಗೃಹ ಸಾಲದ ಮೇಲಿನ ಇನ್ಶೂರೆನ್ಸ್ ಮುಂತಾದ ಸ್ಟ್ಯಾಂಡರ್ಡ್ ಪಾಲಿಸಿಗಳ ಜೊತೆಗೆ, ಆಯ್ಕೆಗಳ (ಆಡ್ ಆನ್) ರೂಪದಲ್ಲಿ ಲಭ್ಯವಿರುತ್ತವೆ. ಪಾಲಿಸಿದಾರರು ತಮಗಿಷ್ಟವಿದ್ದಲ್ಲಿ ಅದಕ್ಕೆ ಟಿಕ್ ಮಾರ್ಕ್ ಹಾಕಿ ಆರಿಸಿಕೊಳ್ಳಬಹುದು.
ಹೆಚ್ಚಿನ ಮೊತ್ತದ ವೈಯಕ್ತಿಕ ಸಾಲ ತೆಗೆದುಕೊಂಡಾಗಲೂ, “ಜಾಬ್ ಲಾಸ್’ ಕವರ್ ಮಾಡುವ ಪ್ಲ್ಯಾನ್ ಲಭ್ಯವಾಗುತ್ತದೆ. ಕಂಪನಿಗಳು “ಜಾಬ್ ಲಾಸ್’ ಆಯ್ಕೆಯನ್ನು ಒದಗಿಸಲು ಕಾರಣವಿದೆ. ಗೃಹ ಸಾಲ, ವೈಯಕ್ತಿಕ ಸಾಲವನ್ನು ಪಡೆದ ಗ್ರಾಹಕ, ಉದ್ಯೋಗ ನಷ್ಟದ ಕಾರಣದಿಂದಾಗಿ ಇಎಂಐ ಕಟ್ಟಲು ಕಷ್ಟವಾದರೆ ಎಂಬ ಮುನ್ನೆಚ್ಚರಿಕೆಯಿಂದಾಗಿಯೇ, ಜಾಬ್ ಲಾಸ್ ಪ್ಲ್ಯಾನು ಸೃಷ್ಟಿಯಾಗಿರುವುದು. ಇನ್ನೊಂದು ಮುಖ್ಯವಾದ ವಿಚಾರವೆಂದರೆ, ದೇಶದಲ್ಲಿ ಲಭ್ಯವಿರುವ ಪ್ರತ್ಯೇಕ (ಸ್ಟ್ಯಾಂಡ್ ಅಲೋನ್) ಜಾಬ್‌ಲಾಸ್ ವಿಮೆಯೆಂದರೆ- ರಾಜೀವ್ ಗಾಂಧಿ ಶ್ರಮಿಕ್ ಕಲ್ಯಾಣ್ ಯೋಜನಾ. ಇದು, ಸರ್ಕಾರದ ಪ್ರೋತ್ಸಾಹವಿರುವ ನಿರುದ್ಯೋಗ ವಿಮೆಯಾಗಿದೆ.
ಏನನ್ನು ಕವರ್ ಮಾಡುತ್ತದೆ?: ಉದ್ಯೋಗ ನಷ್ಟದ ವಿಮೆ, ತಿಂಗಳ ಸಂಬಳವನ್ನು ಕವರ್ ಮಾಡುವುದಿಲ್ಲ. ಇನ್ಶೂರರ್, ಪಾಲಿಸಿದಾರರು ಹೊಂದಿರುವ ಇ.ಎಂ.ಐ.ಗಳಲ್ಲಿ ಅತಿ ಹೆಚ್ಚಿನ ಮೊತ್ತ ಕಟ್ಟಬೇಕಾಗಿರುವುದನ್ನು ಮಾತ್ರ ಕವರ್ ಮಾಡುತ್ತದೆ. ಅದೂ ಮೂರು ಕಂತುಗಳನ್ನು. ಇ.ಎಂ.ಐ ಕಂತಿನ ಮೊತ್ತ, ಸಂಬಳದ ಶೇ.50ಕ್ಕಿಂತ ಹೆಚ್ಚಿರಬಾರದು. ಅಲ್ಲದೆ, ಈ ಸವಲತ್ತನ್ನು ಒಂದು ಬಾರಿ ಮಾತ್ರ ಕ್ಲೈಮ್ ಮಾಡಬಹು ದು. ವಿವಿಧ ಕಂಪನಿಗಳು ವಿವಿಧ ಬಗೆಯ ಷರತ್ತುಗಳನ್ನು ಹೊಂದಿರುತ್ತವೆ. ಪಾಲಿಸಿದಾರರು ಈ ಬಗ್ಗೆ ಗಮನ ಹರಿಸಬೇಕು. ಕ್ಲೈಮ್ ಮಾಡಲು ಯಾವ ಯಾವ ನಿಯಮಾವಳಿ ಇದೆ ಎಂಬುದನ್ನು ಅರಿತಿರಬೇಕು. ಜಾಬ್ ಲಾಸ್ ವಿಮೆಯನ್ನು ಆರಿಸಿಕೊಳ್ಳುವ ಮೊದಲು-
* ನೋಟೀಸ್ ಪಿರಿಯೆಡ್ ಸರ್ವ್ ಮಾಡಿದರೆ ಕ್ಲೈಮ್‌ಮಾಡಲು ಸಾಧ್ಯವೇ?
* ಕೆಲಸದಿಂದ ವಂಚಿತರಾದ ಸಮಯದಲ್ಲಿ, ಕಚೇರಿಯಿಂದ ಯಾವುದೇ ಪತ್ರ ಇಲ್ಲವೇ ದಾಖಲೆ ನೀಡದಿದ್ದರೆ ಕ್ಲೈಮ್ ಆಗುತ್ತಾ? ಎಂಬಿತ್ಯಾದಿ ಅನುಮಾನಗಳನ್ನು ಬಗೆಹರಿಸಿಕೊಳ್ಳುವುದು ಸೂಕ್ತ. ಪಾಲಿಸಿದಾರರು ಸ್ವಯಂ ಇಚ್ಛೆಯಿಂದ ನೌಕರಿ ತ್ಯಜಿಸಿದ್ದಲ್ಲಿ, ಈ ವಿಮಾ ಸೌಲಭ್ಯವನ್ನು ಕ್ಲೈಮ್ ಮಾಡಲು ಸಾಧ್ಯವಿಲ್ಲ. ಕಂಪನಿಯೇ ಕೆಲಸದಿಂದ ಕೈಬಿಡುತ್ತಿದೆ ಎಂದು ಸಾರುವ ದಾಖಲೆ ಬೇಕಾಗುತ್ತದೆ.