ಸಾಗರ : ಜು. 10ರಂದು ನಗರದ ಜೋಸೆಫ್ ನಗರದ ಚರ್ಚ್ ಹಾಲ್‌ನಲ್ಲಿ ಪದವೀಧರ ನಿರುದ್ಯೋಗಿಗಳಿಗೆ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ನವಚೇತನ ವೇದಿಕೆ ಮುಖ್ಯಸ್ಥ ಕೆ.ಜಿ.ಪ್ರಶಾಂತ್ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ 9.30ಕ್ಕೆ ಉದ್ಯೋಗ ಮೇಳ ಪ್ರಾರಂಭಗೊಳ್ಳಲಿದ್ದು ಬೆಂಗಳೂರಿನ ಹೆಸರಾಂತ ಗ್ಯಾಲ್‌ಗರ್ ಸಂಸ್ಥೆ ಜಿಲ್ಲೆಯಲ್ಲಿ ಅವಶ್ಯಕವಿರುವ 300 ಉದ್ಯೋಗಾವಕಾಶವನ್ನು ಭರ್ತಿ ಮಾಡಲು ಮುಂದಾಗಲಿದೆ ಎಂದು ಹೇಳಿದರು.
ಅಂತರಾಷ್ಟ್ರೀಯ ಮಟ್ಟದಲ್ಲಿ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಗ್ಯಾಲ್ಗರ್ ಸಂಸ್ಥೆ ವಿಶ್ವಾದ್ಯಂತ 40 ಸಾವಿರ ಉದ್ಯೋಗಿಗಳನ್ನು ಹೊಂದಿದೆ. ಭಾರತದಲ್ಲಿ ಅವರಿಗೆ ಎಂಟು ಸಾವಿರ ಉದ್ಯೋಗಿಗಳ ಅಗತ್ಯವಿದೆ. ಈ ತಿಂಗಳು ಮೂರನೇ ವಾರದಲ್ಲಿ ಶಿವಮೊಗ್ಗದಲ್ಲಿ ತನ್ನ ಶಾಖಾ ಕಚೇರಿಯನ್ನು ತೆರೆಯಲಿದೆ. ಉದ್ಯೋಗಾಕಾಂಕ್ಷಿಗಳು ಸ್ಥಳದಲ್ಲಿಯೇ ತಮ್ಮ ಹೆಸರು ನೋಂದಾಯಿಸಿಕೊಳ್ಳುವ ಅವಕಾಶ ಕಲ್ಪಿಸಿದೆ. ಆಯ್ಕೆಯಾದ ಅಭ್ಯರ್ಥಿಗಳು ಉದ್ಯೋಗದಲ್ಲಿ ಸೇರ್ಪಡೆಯಾಗುತ್ತಾರೆ ಎಂದು ಹೇಳಿದರು.
ಮೊದಲ ಹಂತದಲ್ಲಿ ಶಿವಮೊಗ್ಗದಲ್ಲಿ 300 ಜನರನ್ನು ನೇಮಕಾತಿ ಮಾಡಿಕೊಳ್ಳುವ ಕಂಪನಿಯು ಸದ್ಯದಲ್ಲಿಯೇ ಬೆಂಗಳೂರಿನಲ್ಲಿ ಅಗತ್ಯ ಇರುವ 600 ಜನರ ನೇಮಕ ಮಾಡಿಕೊಳ್ಳಲಿದ್ದಾರೆ. ಮಲೆನಾಡು ಭಾಗದ ಪದವೀಧರ ನಿರುದ್ಯೋಗಿಗಳ ಬೆಂಗಳೂರಿಗೆ ಹೋಗಿ ಸಂದರ್ಶನ ಎದುರಿಸಲು ಸಾಧ್ಯವಿಲ್ಲ. ಈ ಕುರಿತು ಕಂಪನಿಗೆ ಮನವರಿಕೆ ಮಾಡಿಕೊಂಡಾಗ ನಮ್ಮ ಸಂಸ್ಥೆಯ ಮೂಲಕ ಉದ್ಯೋಗ ಮೇಳ ನಡೆಸಿ ಉದ್ಯೋಗ ಕಲ್ಪಿಸಲು ಅವಕಾಶ ಕಲ್ಪಿಸಿದ್ದಾರೆ. ಉದ್ಯೋಗಕ್ಕೆ ಯಾವುದೇ ಪದವಿ ಕಡ್ಡಾಯವಾಗಿದ್ದು, ಸಂದರ್ಶನಕ್ಕೆ ಹಾಜರಾಗುವವರು ಅಗತ್ಯ ದಾಖಲೆಗಳನ್ನು ತರಬೇಕು. ಶೇ. 50 ರ ಫಲಿತಾಂಶವನ್ನು ಪಡೆದವರಿಗೆ ಆದ್ಯತೆ ಇದೆ. ಸ್ಥಳದಲ್ಲಿಯೇ ಉದ್ಯೋಗ ಪ್ರಮಾಣಪತ್ರ ಕೊಡಿಸುವ ನಿಟ್ಟಿನಲ್ಲಿ ಸಹ ಪ್ರಯತ್ನ ನಡೆಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ : ಅರಮನೆ ಮುಂಭಾಗದ ಪಾರಿವಾಳಗಳನ್ನು ಸ್ಥಳಾಂತರಿಸಿ; ಆಯುಕ್ತರಿಗೆ ಬರೆದ ಪತ್ರದಲ್ಲೇನಿದೆ?
ಈ ಮೇಳದ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳೂ ಸೇರಿದಂತೆ ವಿವಿಧ ಮಾಧ್ಯಮಗಳ ಮೂಲಕ ಪ್ರಚಾರ ನೀಡಲಾಗಿದೆ. ಮಾಹಿತಿ ಪಡೆದ ಇನ್ನೂ ಎರಡು ಮೂರು ಕಂಪನಿಗಳು ತಾವೂ ಈ ವೇಳೆ ಪಾಲ್ಗೊಳ್ಳುವ ಕುರಿತು ಆಶಯ ವ್ಯಕ್ತಪಡಿಸಿವೆ. ಈ ಸಂಬಂಧ ಮಾತುಕತೆ ನಡೆದಿದೆ. ಇಲ್ಲಿ ಕೆಲಸಕ್ಕೆ ಸೇರ್ಪಡೆಯಾಗುವವರಿಗೆ ಕನಿಷ್ಠ 20 ಸಾವಿರ ರೂ. ವೇತನ ಲಭ್ಯವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದರು.
ವೇದಿಕೆ ವತಿಯಿಂದ ಹಿಂದಿನ ವರ್ಷಗಳಲ್ಲಿ ಸಹ ಉದ್ಯೋಗಮೇಳ ಆಯೋಜಿಸಲಾಗಿತ್ತು. ಕಳೆದ ಎರಡು ವರ್ಷ ಕೊರೊನಾ ಹಿನ್ನೆಲೆಯಲ್ಲಿ ಉದ್ಯೋಗ ಮೇಳ ನಡೆಸಿರಲಿಲ್ಲ. ಮುಂದಿನ ದಿನಗಳಲ್ಲಿ ಮಲೆನಾಡು ಭಾಗದ ಯುವಕರಿಗೆ ಉದ್ಯೋಗ ಕಲ್ಪಿಸಲು ಬೇರೆಬೇರೆ ಹೆಸರಾಂತ ಕಂಪನಿಗಳನ್ನು ಕರೆಸಿ ಉದ್ಯೋಗಮೇಳ ನಡೆಸುವ ಉದ್ದೇಶವಿದೆ. ಕಾರ್ಯಕ್ರಮವನ್ನು ಸಾರಕ್ಕಿಜಡ್ಡು ಮಠದ ಯೋಗೇಂದ್ರ ಸ್ವಾಮೀಜಿ ಉದ್ಘಾಟಿಸಲಿದ್ದು, ಎಎಸ್‌ಪಿ ರೋಹನ್ ಜಗದೀಶ್ ಉಪಸ್ಥಿತರಿರುವರು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ವೇದಿಕೆಯ ಶ್ರೀಕಾಂತ್, ಲೋಹಿತ್, ಮಧು, ಸಂಜಯ್, ವಿಶ್ವನಾಥ್ ಹಾಜರಿದ್ದರು.