Advertisement
ಮಕ್ಕಳು ಎಸ್.ಎಸ್.ಎಲ್.ಸಿ. ತಲುಪುತ್ತಿದ್ದಂತೆ ತಂದೆ ತಾಯಿಗಳಿಗೆ ಚಿಂತೆ ಆರಂಭ. ಮಕ್ಕಳನ್ನು ಮುಂದೆ ಯಾವ ಕೋರ್ಸ್‌ಗೆ ಸೇರಿಸಿದರೆ ಒಳಿತು? ವಿಜ್ಞಾನವೊ, ಕಲೆಯೊ, ವಾಣಿಜ್ಯವೋ? ಜೊತೆಗೆ, ಆ ಮಗು ಎಸ್.ಎಸ್.ಎಲ್.ಸಿಯಲ್ಲಿ ಗಳಿಸುವ ಅಂಕವೂ ಅವನ ಭವಿಷ್ಯವನ್ನು ನಿರ್ಧರಿಸಿಬಿಡುತ್ತದೆ. ವಿಜ್ಞಾನ, ಗಣಿತಗಳಲ್ಲಿ ಹೆಚ್ಚು ಅಂಕಗಳಿಸಿದ್ದರೆ ವಿಜ್ಞಾನ, ಅದರಲ್ಲಿ ಸುಮಾರಾಗಿ ಬಂದರೆ ವಾಣಿಜ್ಯ, ಕಡಿಮೆ ಬಂದರೆ ಕಲೆ. ಹೆಚ್ಚಾಗಿ ಎಲ್ಲ ತಾಯ್ತಂದೆಯರ, ಹಿರಿಯರ ಆಲೋಚನೆ ಹೀಗೇ ಇರುತ್ತದೆ. ಆದರೆ, ವಾಸ್ತವದಲ್ಲಿ ಮಗುವಿನ ಅಂತರಂಗದ ತುಡಿತ ಏನಿದೆ ಎಂದು ತಿಳಿಯುವ ಪ್ರಯತ್ನವನ್ನು ಹೆಚ್ಚಿನವರು ಮಾಡುವುದೇ ಇಲ್ಲ. ಬದುಕಿನ ಅಳತೆಯ ಮಾಪಕ ಹಣವೋ, ಆಸ್ತಿಯೋ, ಐಷಾರಾಮಿ ಜೀವನವೋ ಅಲ್ಲ. ಅದು ಒಳಗಿನ ಆನಂದ ತೃಪ್ತಿಗಳನ್ನು ತುಂಬಿಕೊಡುವಷ್ಟಿದ್ದರೆ ಸಾಕು. ಆದರೆ, ಈ ಅರಿವು ಮೂಡುವ ವೇಳೆಗೆ ಹರೆಯವೇ ಜಾರಿ ಹೋಗಿರುತ್ತದೆ! ಇದರಲ್ಲಿ ಶಿಕ್ಷಣ ವ್ಯವಸ್ಥೆಯ ದೋಷ ಒಂದು ಭಾಗವಾದರೆ ಪಾಲಕ / ಪೋಷಕರ ಒತ್ತಡ ಇನ್ನೊಂದು ಭಾಗವಾಗಿ, ಮಗುವಿನ ಸೃಜನಶೀಲತೆಯನ್ನು ಒತ್ತಿಹಾಕಿಬಿಡುತ್ತವೆ.
ವಿಜ್ಞಾನವನ್ನು ಆಯ್ದುಕೊಂಡ ವಿದ್ಯಾರ್ಥಿಗಳಿಗೆ ಮೆಡಿಕಲ್, ಇಂಜಿನಿಯರಿಂಗ್ ಬಿಟ್ಟು ಬೇರೆ ಕೋರ್ಸ್‌ಗಳಿಲ್ಲವೆ ಎಂದರೆ, ಅದು ಹಾಗಲ್ಲ, ಬೇಕಾದಷ್ಟು ಕೋರ್ಸ್‌ಗಳಿವೆ. ಆದರೆ, ಇವರು ಅತ್ತ ಮುಖ ಮಾಡುತ್ತಿಲ್ಲ ಅಷ್ಟೆ. ಫಿಸಿಯೊಥೆರಪಿ, ಇಂಟಗ್ರೇಟಡ್ ಎಂ.ಎಸ್.ಸಿ., ನರ್ಸಿಂಗ್, ಡೈರಿ ಟೆಕ್ನಾಲಜಿ, ಫಾರ್ಮಸಿ, ಆಕ್ಯುಪೇಷನಲ್ ಥೆರಪಿ, ಜನರಲ್ ನರ್ಸಿಂಗ್, ಮೆಡಿಕಲ್ ಲ್ಯಾಬ್ ಟೆಕ್ನಾಲಜಿ, ಪ್ಯಾರಾಮೆಡಿಕಲ್ ಕೋರ್ಸ್‌ಗಳು ಇವೆಲ್ಲ ಪದವಿಗಳಿವೆ. ಫಾರೆನ್ಸಿಕ್ ಸೈನ್ಸ್ ಕೂಡ ಬೇಡಿಕೆಯಲ್ಲಿರುವ ಕೋರ್ಸ್. ಇನ್ನು ವಿಜ್ಞಾನದ ವಿದ್ಯಾರ್ಥಿಗಳು ಗಳಿಸಬಹುದಾದ ಡಿಪ್ಲೊಮಾಗಳ ಪಟ್ಟಿ ಕೂಡ ದೊಡ್ಡದು. ಬ್ಯೂಟಿಕಲ್ಚರ್ ಅಂಡ್ ಹೇರ್ ಡ್ರೆಸಿಂಗ್, ಕಂಪ್ಯೂಟರ್ ಹಾರ್ಡ್‌ವೇರ್, ಫ್ಯಾಷನ್ ಡಿಸೈನಿಂಗ್, ಡ್ರೆಸ್ ಡಿಸೈನಿಂಗ್, ಕಟಿಂಗ್ ಅಂಡ್ ಟೇಲರಿಂಗ್, ವೆಬ್ ಡಿಸೈನಿಂಗ್, ಗ್ರಾಫಿಕ್ ಡಿಸೈನಿಂಗ್, ಟೆಕ್ಸ್‌ಟೈಲ್ ಡಿಸೈನಿಂಗ್, ಹಾಸ್ಪಿಟಲ್ ಕೇರ್ ಅಂಡ್ ಹೆಲ್ತ್ ಮ್ಯಾನೇಜ್‌ಮೆಂಟ್, ಫಿಲ್ಮ್ ಆರ್ಟ್ ಆಡಿಯೊ / ವಿಷುವಲ್ ಎಡಿಟಿಂಗ್, ಅನಿಮೇಷನ್ ಮತ್ತು ಮಲ್ಟಿಮೀಡಿಯಾ, ಏರ್ ಹೋಸ್ಟೆಸ್, ಏರ್ ಕ್ರೂ, ಇವೆಂಟ್ ಮ್ಯಾನೇಜ್‌ಮೆಂಟ್ ಇವೆಲ್ಲ ಹೊಸ ಕೋರ್ಸ್‌ಗಳು. ಸಾಂಪ್ರದಾಯಿಕವಾದ ಸಿವಿಲ್, ಇಲೆಕ್ಟ್ರಿಕಲ್, ಮೆಕಾನಿಕಲ್ ಇತ್ಯಾದಿ ಕೋರ್ಸ್‌ಗಳಿಗಿಂತ ಭಿನ್ನವಾದ ಈ ಹೊಸ ಡಿಪ್ಲೊಮಾಗಳು ನವಮಾದರಿಯ ಜೀವನಕ್ಕೆ ಇಂಬುಕೊಡುವಂಥಹವು. ವಾಣಿಜ್ಯ ವಿಷಯದಲ್ಲಿ ವಿದ್ಯಾಭ್ಯಾಸ ಮಾಡಿದವರಿಗೆ ಬಿ.ಕಾಂ. ಬಿ.ಬಿ.ಎ.ಗಳಲ್ಲದೆ, ಬಿ.ಬಿ.ಎಸ್., ಬ್ಯಾಚಲರ್ ಇನ್ ಇಕಾನಾಮಿಕ್ಸ್, ಬಿ.ಎಮ್.ಎಸ್., ಸಿ.ಎ., ಸಿ.ಎಸ್. ಸರ್ಟಿಫೈಡ್ ಫೈನಾನ್ಷಿಯಲ್ ಪ್ಲಾನರ್ (ಸಿ.ಎಫ್.ಪಿ) ಸಿ.ಎಮ್.ಎ, ಬಿ.ಎಫ್.ಎ. ಬ್ಯಾಚಲರ್ ಆಫ್ ಅಕೌಂಟಿಂಗ್, ಬ್ಯಾಚಲರ್ ಆಫ್ ಆಕುrಯೇರಿಯಲ್ ಸೈನ್ಸ್ (ಪ್ರಾಡಕ್ಟ್ ಬೆಲೆ ನಿಷ್ಕರ್ಷೆ, ಮೌಲ್ಯ ವಿವೇಚನೆ, ಲಾಭ-ನಷ್ಟ ಲೆಕ್ಕಾಚಾರಗಳ ವಿಜ್ಞಾನ; ಮುಖ್ಯವಾಗಿ ಇನುÒರೆನ್ಸ್ ರಿಸ್ಕ್ಗಳನ್ನು ಮತ್ತು ಪ್ರೀಮಿಯಮ್‌ಗಳನ್ನು ಸ್ಟಾಟಿಸ್ಟಿಕ್ಸ್ ಬಳಸಿ ಲೆಕ್ಕ ಹಾಕುವ ಪರಿಣತಿ) ಇವೆಲ್ಲ ಕೋರ್ಸ್‌ಗಳಲ್ಲಿ ಮುಂದುವರಿಯಬಹುದು. ಇದಲ್ಲದೆ ಮಾನವ ಸಂಪನ್ಮೂಲ ನಿರ್ವಹಣೆ, ಮ್ಯಾನೇಜ್‌ಮೆಂಟ್ ಅಕೌಂಟಿಂಗ್, ಬ್ಯಾಂಕಿಂಗ್, ಬ್ಯುಸಿನೆಸ್ ಕಮ್ಯುನಿಕೇಷನ್, ಬ್ಯುಸಿನೆಸ್ ನಿಯಂತ್ರಣದ ರೂಪುರೇಷೆಗಳ ನಿಷ್ಕರ್ಷೆಯ ಹೊಣೆಯನ್ನೂ ಇವರು ಹೊರಬಹುದು. ಕಲಾಕಾರರು
ಕಲಾ ವಿಷಯದಲ್ಲಿ ಅಧ್ಯಯನ ಮುಂದುವರೆಸಿದವರೆಲ್ಲ ಅಧ್ಯಾಪಕರಾಗಬೇಕಾಗಿಲ್ಲ. ಬಿ.ಎಫ್.ಎ., ಬಿ.ಎಚ್.ಎಮ್, ಬಿ.ಇ.ಎಮ್., ಬಿ.ಜೆ.ಎಮ್., ಬಿ.ಎಫ್.ಡಿ, ಬಿ.ಎಸ್.ಡಬ್ಲೂ, ಬಿ.ಆರ್.ಎಮ್ (ಬ್ಯಾಚಲರ್ ಆಫ್ ರೀಟೇಲ್ ಮೆನೇಜ್‌ಮೆಂಟ್), ಎವಿಯೇಷನ್ ಕೋರ್ಸ್ (ಕ್ಯಾಬಿನ್ ಕ್ರೂ), ಬಿ.ಟಿ.ಟಿ.ಎಮ್ (ಬ್ಯಾಚಲರ್ ಆಫ್ ಟ್ರಾವಲ್ ಆಂಡ್ ಟೂರಿಸಮ್ ಮೆನೇಜ್‌ಮೆಂಟ್) ಈ ಎಲ್ಲ ಕೋರ್ಸ್‌ಗಳು ಅವರಿಗೆ ಜೀವನದ ಮಾರ್ಗವನ್ನು ತೆರೆಯಬಲ್ಲವು. ಯಾವುದೇ ಕಲಿಕೆಯ ಉದ್ದೇಶ ಉದ್ಯೋಗ. ಹಾಗಾದರೆ, ಈ ಮೂರು ಮಾರ್ಗಗಳಲ್ಲಿ ಯಾವ ಮಾರ್ಗದಿಂದ ಉತ್ತಮ ಬದುಕನ್ನು ಅರಸಬಹುದು? ಇದೊಂದು ಕೋಟಿ ವರಹದ ಪ್ರಶ್ನೆ. ಆದರೆ, ಉತ್ತರ ಮಾತ್ರ ಲೇಖನದ ಮೊದಲ ಪ್ಯಾರಾದಲ್ಲಿಯೇ ಇದೆ. ಕೇವಲ ಹೊಟ್ಟೆ ತುಂಬಿಸಿಕೊಳ್ಳುವುದು, ಮೈ ತಣಿಸುವುದು, ಆಸ್ತಿ ಕೂಡಿಡುವುದು ಮುಖ್ಯವಲ್ಲ. ಹಾಗೆಂದು, ಹಣದ ಹಂಗೇ ಬೇಡವೆಂದಲ್ಲ. ಆದರೆ, ವೃತ್ತಿಯಿಂದ ಆನಂದ, ತೃಪ್ತಿ ದೊರೆಯದಿದ್ದರೆ ಅದು ಶಿಕ್ಷೆ ಎಂದು ತೋರಿಬರುತ್ತದೆ. ಮೊದಲಿಗೆ, ಮಕ್ಕಳ ಒಲವು ಯಾವ ಕ್ಷೇತ್ರದ ಕಡೆಗಿದೆ ಎಂದು ಗಮನಿಸಿ ಆ ನಿಟ್ಟಿನಲ್ಲಿ ಬೆಳೆಯಲು ಪೋ›ತ್ಸಾಹ ನೀಡಬೇಕು. ಯಾವ ಕೋರ್ಸ್ ತೆಗೆದುಕೊಂಡರು ಎಂಬುದು ಮುಖ್ಯವಲ್ಲ. ಯಾವ ಶ್ರೇಣಿಯಲ್ಲಿ ಉತ್ತೀರ್ಣರಾದರು ಮತ್ತು ಯಾವ ಮಟ್ಟಿಗಿನ ಸಂತೋಷವನ್ನು ಅವರು ಆ ಕಲಿಕೆಯಲ್ಲಿ ಕಂಡುಕೊಂಡರು ಎಂಬುದು ಮುಖ್ಯ. ಬಲವಂತಕ್ಕೆ ಇಂಜಿನಿಯರಿಂಗ್ ಓದಿ ಮೂರನೆಯ ದರ್ಜೆಯಲ್ಲಿ ಪಾಸಾಗುವುದಕ್ಕಿಂತ ಬಿ.ಎಸ್‌ಸಿಯಲ್ಲಿ ಚಿನ್ನದ ಪದಕ ಗಳಿಸುವುದು ಉತ್ತಮವಲ್ಲವೆ?
Related Articles
Advertisement
ಪ್ರೊ|| ರಘು. ವಿ, ಪ್ರಾಂಶುಪಾಲರು