Advertisement

Job For Kannadigas: ಮೀಸಲಿಗೆ ಆಕ್ಷೇಪಿಸಿದ್ದ ಉದ್ಯಮ ಒಕ್ಕೂಟಗಳು

01:50 AM Jul 18, 2024 | Team Udayavani |

ಬೆಂಗಳೂರು: ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ರಾಜ್ಯ ಸರಕಾರದ ಪ್ರಸ್ತಾವಿತ ಮಸೂದೆಗೆ ಖಾಸಗಿ ವಲಯದ ಉದ್ಯಮಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಖಾಸಗಿ ಸಂಸ್ಥೆಗಳ ನೇಮಕಾತಿ ವಿಚಾರದಲ್ಲಿ ತಲೆ ಹಾಕದಂತೆ ಕೆಲವು ಉದ್ಯಮಿಗಳು ಎಚ್ಚರಿಕೆಯನ್ನೂ ನೀಡಿದ್ದಾರೆ.

Advertisement

ಸಂಪುಟ ಸಭೆಯಲ್ಲಿ “ಕರ್ನಾಟಕ ರಾಜ್ಯ ಕೈಗಾರಿಕೆಗಳು, ಕಾರ್ಖಾನೆಗಳು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಉದ್ಯೋಗ ಮಸೂದೆ -2024’ಕ್ಕೆ ಅನುಮೋದನೆ ದೊರೆತಿದ್ದ ಬಗ್ಗೆ ಸಿಎಂ ಸಿದ್ದರಾಮಯ್ಯ, ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದರು.

ಖಾಸಗಿ ವಲಯದ ಕಂಪೆನಿಗಳಲ್ಲಿ ಶೇ. 100ರಷ್ಟು ಮೀಸಲಾತಿಯನ್ನು ಸ್ಥಳೀಯರಿಗೆ ನೀಡಬೇಕೆನ್ನುವ ಅಂಶವುಳ್ಳ ಮಸೂದೆಯು ಕನ್ನಡಿಗರ ಪರವಾಗಿದೆ ಎಂದು ಸಿಎಂ ಟ್ವೀಟ್‌ ಮಾಡಿದ್ದರು. ಆದರೆ ಇದಕ್ಕೆ ಉದ್ಯಮಿಗಳು ಆಕ್ಷೇಪ ಎತ್ತಿದ ಬಳಿಕ ಈ ಟ್ವೀಟ್‌ ಅನ್ನು ಅಳಿಸಿ ಹಾಕಿದ್ದ ಸಿಎಂ, ಶೇ. 50ರಿಂದ 75 ಮೀಸಲಾತಿಯ ಹೊಸ ಪೋಸ್ಟ್‌ ಹಾಕಿದ್ದರು. ಸರಕಾರದ ಕ್ರಮಕ್ಕೆ ಬಯೋಕಾನ್‌ ಸಂಸ್ಥೆಯ ಅಧ್ಯಕ್ಷೆ ಕಿರಣ್‌ ಮಜೂಮಾªರ್‌ ಶಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

ಮೂಲಸೌಕರ್ಯ ಹೆಚ್ಚಿಸಿ
ಇದೇ ವಿಚಾರದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಪದ್ಮಶ್ರೀ ಪುರಸ್ಕೃತ ಉದ್ಯಮಿ ಮೋಹನ ದಾಸ್‌ ಪೈ ಅವರು, ಇದೊಂದು ಪ್ರಗತಿಪರವಲ್ಲದ, ಅನಾವಶ್ಯಕ, ಕ್ರೂರ, ಸಂವಿ ಧಾನಬಾಹಿರ, ಕಾನೂನು ಬಾಹಿರ ಮಸೂದೆ ಎಂದು ಟೀಕಿಸಿದ್ದರು.

ಸಂವಿಧಾನದ 19ನೇ ಪರಿಚ್ಛೇದದ ಪ್ರಕಾರ ಇದು ಅಸಮಾನತೆಯನ್ನು ಎತ್ತಿ ಹಿಡಿದಂತಾಗುತ್ತದೆ. ಹರಿಯಾಣ ಸರಕಾರದ ಇಂತಹುದೇ ತೀರ್ಮಾನಕ್ಕೆ ಅಲ್ಲಿನ ಹೈಕೋರ್ಟ್‌ ತಡೆಯೊಡ್ಡಿದೆ. ಕರ್ನಾಟಕದಲ್ಲೇ ಹುಟ್ಟಿ, ಬೆಳೆದು 15 ವರ್ಷದಿಂದ ವಾಸ ಇರುವವರನ್ನು ಹಾಗೂ ಕನ್ನಡ ಓದಲು, ಬರೆಯಲು, ಮಾತನಾಡಲು ಬರುವವರನ್ನು “ಸ್ಥಳೀಯ’ ಎಂದು ಮಸೂದೆಯಲ್ಲಿ ವಿಶ್ಲೇಷಿಸಲಾಗಿದೆ.

Advertisement

ಇದಕ್ಕೆ ಎಸೆಸೆಲ್ಸಿ ಪ್ರಮಾಣಪತ್ರವನ್ನು ಸಾಕ್ಷಿಯಾಗಿ ಪರಿಗಣಿಸುವುದಾಗಿ ತಿಳಿಸಿದೆ. ನನ್ನ ಬಳಿ ಈ ಪ್ರಮಾಣಪತ್ರ ಇಲ್ಲವಾದರೆ ನಾನು ಉದ್ಯೋಗಕ್ಕೆ ಅರ್ಜಿ ಸಲ್ಲಿಸುವಂತಿಲ್ಲವೇ? ನನ್ನನ್ನು ಸ್ಥಳೀಯ ಎಂದು ಪರಿಗಣಿಸಲಾಗುತ್ತದೆಯೇ? ಬೆಂಗಳೂರಿನಲ್ಲಿ ರಸ್ತೆಗುಂಡಿಗಳನ್ನು ಸರಿಪಡಿಸಿ, ಸ್ಥಳೀಯರಿಗೆ ಉತ್ತಮ ಶಿಕ್ಷಣ ಕೊಡುವುದರತ್ತ ಗಮನಿಸಿ ಎಂದು ಸರಕಾರಕ್ಕೆ ಸಲಹೆ ಕೊಟ್ಟಿದ್ದರು.

“ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ನಮಗೆ ಕೌಶಲಭರಿತ ಪ್ರತಿಭೆಗಳ ಅಗತ್ಯವಿದೆ. ಸ್ಥಳೀಯರಿಗೆ ಉದ್ಯೋಗ ಕೊಡಬೇಕೆಂಬ ಭರದಲ್ಲಿ ತಂತ್ರಜ್ಞಾನ ಕ್ಷೇತ್ರ ದಲ್ಲಿ ಮುಂದಿರುವ ನಮ್ಮ ಸ್ಥಾನದ ಮೇಲೆ ದುಷ್ಪರಿಣಾಮ ಆಗಬಾರದು.” -ಕಿರಣ್‌ ಮಜೂಮ್ದಾರ್‌ ಶಾ, ಬಯೋಕಾನ್‌ ಅಧ್ಯಕ್ಷೆ

ಇದು ಸಂವಿಧಾನದ ಉಲ್ಲಂಘನೆ
ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ ಒದಗಿಸುವ ಕರ್ನಾಟಕ ಸರಕಾರದ ಕ್ರಮ ಅರ್ಥವ್ಯವಸ್ಥೆಗೆ ಒಳ್ಳೆಯದಲ್ಲ. ಜತೆಗೆ ಅದು ಪ್ರತಿಕೂಲವಾಗಿ ಪರಿಮಿಸಲಿದೆ. ಯಾವುದೇ ರಾಜ್ಯದಲ್ಲಿಯೇ ಆಗಲಿ, ಇಂಥ ವ್ಯವಸ್ಥೆ ಜಾರಿಯಲ್ಲಿದ್ದರೆ ಅದು ಸಂವಿಧಾನದ ಉಲ್ಲಂಘನೆಯೇ ಆಗಲಿದೆ.
-ಜಯಂತ್‌ ಚೌಧರಿ, ಕೇಂದ್ರ ಸಚಿವ

ಸೌಹಾರ್ದಯುತ ಪರಿಹಾರ ಅಗತ್ಯ
“ತಾಂತ್ರಿಕ ಕ್ಷೇತ್ರದಲ್ಲಿ ಹಾಗೂ ರಾಷ್ಟ್ರದ ಪ್ರಮುಖ ಕೈಗಾರಿಕೀಕರಣಗೊಂಡ ರಾಜ್ಯವಾಗಲು ನಮಗೆ ನುರಿತ ಪ್ರತಿಭಾವಂತರ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರಕಾರ ಪ್ರಸ್ತಾಪಿಸಿರುವ ವಿಧೇಯಕವನ್ನು ಪುನರ್‌ ಪರಿಶೀಲಿಸುವ ಅಗತ್ಯವಿದೆ. ಕನ್ನಡಿಗರಿಗೆ ವಿಶೇಷವಾಗಿ ಮ್ಯಾನೇಜ್‌ಮೆಂಟ್‌ ಕೋಟದಲ್ಲಿ ಶೇ. 25ರಷ್ಟನ್ನು ಕೊಡಬೇಕು. ಈ ನಿಟ್ಟಿನಲ್ಲಿ ಸೌಹಾರ್ದಯುತ ಪರಿಹಾರ ಸರಕಾರ ಕಂಡುಕೊಳ್ಳಬೇಕು.” – ರಮೇಶ್‌ಚಂದ್ರ ಲಹೋಟಿ, ಎಫ್ಕೆಸಿಸಿಐ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next