Advertisement

ಬೆಳಗಾವಿ: 23ರಂದು ಉದ್ಯೋಗ ಮೇಳ

05:51 PM Dec 18, 2021 | Team Udayavani |

ಬೆಳಗಾವಿ: ನಗರದ ಗೋಗಟೆ ಎಂಜಿನಿಯರಿಂಗ್‌ ಕಾಲೇಜು ಆವರಣದಲ್ಲಿ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ ಇಂಜಿನಿಯರಿಂಗ್‌, ಡಿಪ್ಲೊಮಾ ಮತ್ತು ಐಟಿಐ ಪದವೀಧರರಿಗೆ ಇದೇ ದಿ.23ರಂದು ಉದ್ಯೋಗ ಮೇಳ ನಡೆಯಲಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಮೇಳವನ್ನು ಉದ್ಘಾಟಿಸಲಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ಹೇಳಿದರು.

Advertisement

ಸುವರ್ಣ ವಿಧಾನಸೌಧದಲ್ಲಿ ಶುಕ್ರವಾರ ಜಿಲ್ಲೆಯ ಸಚಿವರು ಮತ್ತು ಜನಪ್ರತಿನಿಧಿಗಳ ಜೊತೆ ಸಭೆ ನಡೆಸಿದ ಅವರು ಈಗಾಗಲೇ 34 ಕಂಪನಿಗಳು ಈ ಮೇಳದಲ್ಲಿ ಪಾಲ್ಗೊಳ್ಳಲು ಒಪ್ಪಿಗೆ ಸೂಚಿಸಿದ್ದು, ಇನ್ನೂ 70 ಕಂಪನಿಗಳು ಬರಲು ಉತ್ಸುಕವಾಗಿವೆ. ಮೇಳವು ಸಂಪೂರ್ಣ ವಾಗಿ ಹೆ„ಬ್ರಿಡ್‌ ಮಾದರಿಯಲ್ಲಿ ನಡೆಯಲಿದ್ದು, ಅರ್ಹ ಅಭ್ಯರ್ಥಿಗಳು ಸ್ಕಿಲ್‌ ಕನೆಕ್ಟ್ ಪೋರ್ಟಲ್‌ನಲ್ಲಿ ಹೆಸರು ನೊಂದಾಯಿಸಿಕೊಳ್ಳಬೇಕು ಎಂದರು.

ನೋಂದಣಿ ಮಾಡಿಕೊಂಡ ನಂತರ ಉದ್ಯೋಗದ ಸ್ವರೂಪ, ಯಾವ ಕಂಪನಿಯು ಅಭ್ಯರ್ಥಿಯನ್ನು ಸಂದರ್ಶಿಸಲಿದೆ ಎನ್ನುವ ಅಗತ್ಯ ಮಾಹಿತಿಗಳನ್ನು ಒದಗಿಸಲಾಗುವುದು ಎಂದು ಅವರು ಹೇಳಿದರು.

ದಿ. 23ರಂದು ನಡೆಯುವ ಮೊದಲ ಸುತ್ತಿನ ಸಂದರ್ಶನದಲ್ಲಿ ಆಯ್ಕೆಯಾಗುವವರಿಗೆ ದಿ. 24 ರಂದು ಎರಡನೇ ಸುತ್ತಿನ ಸಂದರ್ಶನ ನಡೆಯಲಿದೆ. ಸಂದರ್ಶನದಲ್ಲಿ ವಿಫಲರಾಗುವ ಅಭ್ಯರ್ಥಿಗಳಿಗೆ ಏನು ಕೊರತೆ ಇದೆ ಎಂಬುದನ್ನು ಕಂಡುಕೊಂಡು ಅಂತಹವರಿಗೆ ಸೂಕ್ತ  ಮತ್ತು ಅಗತ್ಯ ಕೌಶಲ್ಯ ತರಬೇತಿಗೆ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿದರು.

80 ಸಾವಿರ ಉದ್ಯೋಗಾಕಾಂಕ್ಷಿಗಳಲ್ಲಿ ಸುಮಾರು 40 ಸಾವಿರ ಜನರಲ್ಲಿ ಸರಿಯಾದ ಕೌಶಲ್ಯಗಳೇ ಇಲ್ಲ. ಈ ಕೊರತೆಯನ್ನು ನಿವಾರಿಸಲು ಸರಕಾರ ಬದ್ಧವಾಗಿದೆ ಎಂದು ಸಚಿವರು ಹೇಳಿದರು.

Advertisement

ಶಾಸಕ ಅಭಯ ಪಾಟೀಲ ಮಾತನಾಡಿ, ಬೆಳಗಾವಿ ಭಾಗದ ಯುವಕ ಮತ್ತು ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡಬೇಕು ಎಂದು ಸಚಿವರಲ್ಲಿ ಮನವಿ ಮಾಡಲಾಗಿತ್ತು. ಅದಕ್ಕೆ ಸ್ಪಂದಿಸಿದ ಸಚಿವರು ದಿ.23 ರಂದು ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಿದ್ದಾರೆ ಎಂದರು. ಸಭೆಯಲ್ಲಿ ಸಚಿವ ಉಮೇಶ ಕತ್ತಿ, ಶಾಸಕರಾದ ಅಭಯ ಪಾಟೀಲ, ಪಿ.ರಾಜೀವ, ಮಹೇಶ ಕುಮಟಳ್ಳಿ, ಮಹಾಂತೇಶ ದೊಡ್ಡಗೌಡರ, ಮಹಾದೇವಪ್ಪ ಯಾದವಾಡ,
ದುರ್ಯೋಧನ ಐಹೊಳೆ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next