ಹಾವೇರಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶದ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ. 22 ಮತ್ತು 23ರಂದು ನಗರದ ಹುಕ್ಕೇರಿಮಠದ ಶ್ರೀ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯದ ಆವರಣದಲ್ಲಿ ನಡೆಯಲಿದೆ.
ಫೆ. 22ರಂದು ಬೆಳಗ್ಗೆ 10:30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಹುಕ್ಕೇರಿಮಠದ ಸದಾಶಿವ ಶ್ರೀಗಳು ಸಾನ್ನಿಧ್ಯ ವಹಿಸುವರು. ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹಾಗೂ ಉಪಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಖಾತೆ ಸಚಿವ ಡಾ| ಸಿ.ಎನ್.ಅಶ್ವತ್‌ನಾರಾಯಣ ಘನ ಉಪಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಉದ್ಯೋಗಮೇಳ ಉದ್ಘಾಟಿಸುವರು. ಕೃಷಿ ಸಚಿವರಾದ ಬಿ.ಸಿ.ಪಾಟೀಲ ಭಾಗವಹಿಸುವರು. ಶಾಸಕ ನೆಹರು ಓಲೇಕಾರ ಅಧ್ಯಕ್ಷತೆ ವಹಿಸುವರು. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸರ್ಕಾರದ ಕಾರ್ಯದರ್ಶಿ ಡಾ| ಎಸ್.ಸೆಲ್ವಕುಮಾರ್, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಆಯುಕ್ತ ಕೆ.ಪಿ.ಮೋಹನ್‌ರಾಜ್, ಬೆಳಗಾವಿ ವಿಭಾಗೀಯ(ತರಬೇತಿ) ಜಂಟಿ ನಿರ್ದೇಶಕ ಪಿ.ರಮೇಶ ಪಾಲ್ಗೊಳ್ಳಲಿದ್ದಾರೆ.
ಉದ್ಯೋಗ ಮೇಳದಲ್ಲಿ ಜಿಲ್ಲೆಯ ನಿರುದ್ಯೋಗ ವಿಕಲಚೇತನರಿಗೂ ಆದ್ಯತೆ ನೀಡಲಾಗಿದ್ದು, ವಿಕಲಚೇತನರು ಇತ್ತೀಚಿನ ತಮ್ಮ ಭಾವಚಿತ್ರ, ವಿಕಲಚೇತನರ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಹಾಗೂ ವಿದ್ಯಾರ್ಹತೆಯ ಅಂಕಪಟ್ಟಿಯೊಂದಿಗೆ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು ಸಂಘಟಕರು ಕೋರಿದ್ದಾರೆ. ಉದ್ಯೋಗಾಕಾಂಕ್ಷಿಗಳು ಮೇಳದಲ್ಲಿ ಉಚಿತವಾಗಿ ಭಾಗವಹಿಸಿ ತಮ್ಮ ವಿದ್ಯಾರ್ಹತೆ ಹಾಗೂ ಪ್ರತಿಭೆಗನುಗುಣವಾಗಿ ನೇರ ಸಂದರ್ಶನದ ಮೂಲಕ ಉದ್ಯೋಗ ಪಡೆದುಕೊಳ್ಳಬಹುದಾಗಿದೆ. ಉದ್ಯೋಗಮೇಳದಲ್ಲಿ 100 ಕ್ಕೂ ಹೆಚ್ಚು ಖಾಸಗಿ ಕಂಪನಿಗಳು ಭಾಗವಹಿಸಿ ತಮ್ಮ ಕಂಪನಿಗಳಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲಿದ್ದಾರೆ. ಎಸ್.ಎಲ್.ಎಲ್.ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ವಿವಿಧ ವೃತ್ತಿಪರ ಕೋರ್ಸು, ಪದವಿ ಹಾಗೂ ಸ್ನಾತಕೋತ್ತರ ಪದವಿ ಹೊಂದಿರುವ ಅಭ್ಯರ್ಥಿಗಳು, ಅನಕ್ಷರಸ್ಥರು ಸಹ ಉದ್ಯೋಗಮೇಳದಲ್ಲಿ ಭಾಗವಹಿಸಬಹುದಾಗಿದೆ. ಅಭ್ಯರ್ಥಿಗಳು ಆಧಾರ್ ಕಾರ್ಡ್, ಶೈಕ್ಷಣಿಕ ದಾಖಲೆ, ಅಂಕಪಟ್ಟಿಗಳು ಹಾಗೂ ಕನಿಷ್ಠ 10 ಬಯೋಡೆಟಾ ಪ್ರತಿಗಳೊಂದಿಗೆ ಸಂದರ್ಶನ ವೇಳೆಯಲ್ಲಿ ಹಾಜರಿರಬೇಕು. ಆನ್‌ಲೈನ್ ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿದ ಉದ್ಯೋಗಾಕಾಂಕ್ಷಿಗಳು ನೋಂದಣಿ ಪ್ರಿಂಟೆಡ್ ಪ್ರತಿಯನ್ನು ಉದ್ಯೋಗಮೇಳದ ದಿನ ತಪ್ಪದೇ ತರಬೇಕು. ಉದ್ಯೋಗಮೇಳದಲ್ಲಿ ಭಾಗವಹಿಸಲು ಯಾವುದೇ ಶುಲ್ಕವಿರುವುದಿಲ್ಲ.
ಉದ್ಯೋಗ ಮೇಳದಲ್ಲಿ ಭಾಗವಹಿಸಲು ಸಂಪೂರ್ಣ ಉಚಿತವಾಗಿದ್ದು, ಅಭ್ಯರ್ಥಿಗಳನ್ನು ನೇರಸಂದರ್ಶನ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.