ಕಲಬುರಗಿ: ನಗರದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಉದ್ಯೋಗ ಮೇಳದಲ್ಲಿ 353ಕ್ಕೂ ಅಧಿಕ ಜನ ನಿರುದ್ಯೋಗಿ ಯುವಕ ಮತ್ತು ಯುವತಿಯರು ವಿವಿಧ ಕಂಪನಿಗಳಿಗೆ ಸ್ಥಳದಲ್ಲೇ ಆಯ್ದೆಯಾದರು. ಇಲ್ಲಿನ ಎಂ.ಎಸ್.ಕೆ.ಮಿಲ್ ರಸ್ತೆಯಲ್ಲಿರುವ ಸರ್ಕಾರಿ ಕೈಗಾರಿಕಾ ಕೇಂದ್ರದ ಹಿಂಭಾಗದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಆವರಣದಲ್ಲಿ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿತ್ತು. ಕಲಬುರಗಿ ಮತ್ತು ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ 14 ಕಂಪನಿಗಳು ಮೇಳದಲ್ಲಿ ಭಾಗವಹಿಸಿದ್ದವು.
ಜಿಲ್ಲಾದ್ಯಂತ ಒಟ್ಟಾರೆ 2,242 ನಿರುದ್ಯೋಗ ಯುವಕರು ಹಾಗೂ ಯುವತಿಯರು ಮೇಳದಲ್ಲಿ ಪಾಲ್ಗೊಂಡರು. ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಐಟಿಐ, ಎಂಎಸ್ಸಿ, ಎಂಬಿಎ, ಡಿ.ಇಡಿ, ಬಿ.ಇಡಿ ಪೂರೈಸಿದ ವಿದ್ಯಾವಂತರು ಮೇಳಕ್ಕೆ ಆಗಮಿಸಿದ್ದರು. ಬಿಇ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮಾಡಿದವರೂ ಭಾಗವಹಿಸಿದ್ದರು.
2,242 ಜನರ ಪೈಕಿ 353 ಜನರ ಸಂದರ್ಶನ ಮಾಡಿ ಉದ್ಯೋಗದ ಭರವಸೆ ನೀಡಲಾಯಿತು. ಅಲ್ಲಿಯೇ 14 ಯುವಕರಿಗೆ ಉದ್ಯೋಗ ಪ್ರಮಾಣಪತ್ರ ಕೊಟ್ಟು ಉದ್ಯೋಗ ಕಲ್ಪಿಸಲಾಯಿತು. ಅಲ್ಲದೇ, 253 ಯುವಕ ಹಾಗೂ ಯುವತಿಯರನ್ನು ನೇಮಕಕ್ಕೆ ಅಂತಿಮಗೊಳಿಸಿ, ನಿಗದಿತ ದಿನದಂದು ಮತ್ತೂಂದು ಸುತ್ತಿನ ಸಂದರ್ಶನಕ್ಕೆ ಬರುವಂತೆ ಕಂಪನಿಗಳು ಸೂಚಿಸಿದವು.
ಕೈಗಾರಿಕಾ ತರಬೇತಿ ಕೇಂದ್ರದಿಂದ ಜಿಂದಾಲ್ ಸೇರಿದಂತೆ ಹಲವು ಕಂಪನಿಗಳಿಗಾಗಿ 155 ಜನರನ್ನು ಅಪ್ರಂಟಿಸ್ ಶಿಪ್‌ಗೆ ನೇಮಕ ಮಾಡಿಕೊಳ್ಳಲಾಯಿತು. ಭಾರತ್ ಫೈನಾಶಿಯಲ್ ಲಿಮಿಟೆಡ್‌ಗೆ 24, ಸತ್ಯ ಮೈಕ್ರೊ ಕ್ಯಾಪಿಟಲ್ ಕಂಪನಿಗೆ 30, ಕಿರಣ ಇನ್ಫೋಟೆಕ್‌ಗೆ 16, ಅನ್ನಪೂರ್ಣ ಫೈನಾನ್ಸ್‌ಗೆ 17, ಸಾಯಿ ಫಾರ್ಮಿಕಲ್ಚರ್‌ಗೆ 26 ಮತ್ತು ಸ್ಪಂದನಾ ಬ್ರೈಟ್ ಪಿಚೂರ್ ಇನೋವೇಷನ್ ನಿಂದ 20, ಕರಾವಳಿ ಟೀಚರ್ ಸಂಸ್ಥೆಗೆ 22 ಜನರು ನೇಮಕಗೊಂಡರು.
ಪ್ರತಿ ಜಿಲ್ಲೆಯಿಂದ ಪ್ರತಿ ವರ್ಷ ಐದು ಸಾವಿರ ಐಟಿಐ ವಿದ್ಯಾರ್ಥಿಗಳಿಗೆ ಅಪ್ರಂಟಿಸ್ ಶಿಪ್ ಮಾಡಲು ಅವಕಾಶ ಇದೆ. ಕೇಂದ್ರ ಸರ್ಕಾರ ಅಪ್ರಂಟಿಸ್‌ಶಿಪ್ ಯುವಕರಿಗೆ ಕನಿಷ್ಠ 7 ಸಾವಿರ ರೂ. ವೇತನ ನಿಗದಿ ಮಾಡಿದೆ. ಕೆಲ ಕಂಪನಿಗಳು ಇದಕ್ಕೂ ಹೆಚ್ಚಿನ ವೇತನ ನೀಡಿ ಅಪ್ರಂಟಿಸ್‌ಶಿಪ್ ಆಯ್ಕೆ ಮಾಡಿಕೊಳ್ಳುತ್ತೇವೆ ಎಂದು ಕೈಗಾರಿಕಾ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕ ಡಾ| ಶರಣಬಸಪ್ಪ ಸಂಡು ಮಾಹಿತಿ ನೀಡಿದರು.
ಉದ್ಯೋಗ ಮೇಳದಲ್ಲಿ ಆಯ್ಕೆಯಾದ ಯುವಕ, ಯುವತಿಯರು ಉದ್ಯೋಗಕ್ಕೆ ಸೇರಿಕೊಳ್ಳಬೇಕು. ಆಗಲೇ ಉದ್ಯೋಗ ಮೇಳ ಸಾರ್ಥಕತೆ ಆಗುತ್ತದೆ. ಜತೆಗೆ
ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಮೇಳದಲ್ಲಿ ನಿರುದ್ಯೋಗಿಗಳು ಪಾಲ್ಗೊಳ್ಳಲು ವಿಶ್ವಾಸ ಮೂಡುತ್ತದೆ.
ಭಾರತಿ ಎಸ್.
ಪ್ರಭಾರಿ ಸಹಾಯಕ ನಿದೇರ್ಶಕಿ,
ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ