ಹಾಸನ- ಮೈಸೂರು ರಸ್ತೆಯಲ್ಲಿ ಪ್ರಯಾಣಿಸುವವರು, ಕಡಿಮೆ ದರದಲ್ಲಿ ಒಳ್ಳೆ ಊಟ ಬೇಕು ಎಂದು ಅಪೇಕ್ಷಿಸಿದರೆ, ಇಲ್ಲಿದೆ ಒಂದು ಹೋಟೆಲ್‌ನ ಪರಿಚಯ. ಹಾಸನ- ಮೈಸೂರು ರಸ್ತೆಗೇ ಹೊಂದಿಕೊಂಡಂತೆ ಕೆ.ಆರ್.ನಗರದಲ್ಲಿ ಇರುವ ಈ ಹೋಟೆಲ್‌ನಲ್ಲಿ ಕಡಿಮೆ ದರದಲ್ಲಿ ಶುಚಿ ರುಚಿಯಾದ ತಿಂಡಿ- ಊಟ ಸಿಗುತ್ತೆ. ಅದುವೇ ಜ್ಞಾನೇಶ್ ಹೋಟೆಲ್. ಈ ರಸ್ತೆಯಲ್ಲಿ ಪ್ರಯಾಣಿಸುವವರು ಈ ಹೋಟೆಲ್ ನೋಡಿರುತ್ತಾರೆ. 15ಕ್ಕೂ ಹೆಚ್ಚು ವರ್ಷಗಳಿಂದ ಈ ಹೋಟೆಲ್ ಇದ್ದು. ಸದ್ಯ ಈ ಹೋಟೆಲ್‌ನ ಮಾಲಿಕರು ವೈ. ಪಿ. ಮಹದೇವ.
ಗಿರಾಕಿಗಳನ್ನು ಕಾಪಾಡಿಕೊಳ್ಳಬೇಕು : ಈ ಹಿಂದೆ, ಸಂತೆಯಲ್ಲಿ ಅಡುಗೆ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಮಹದೇವ ಅವರಿಗೆ ಅಂಥ ಆದಾಯವೇನೂ ಬರುತ್ತಿರಲಿಲ್ಲ. ಮುಂದೆ ಕೆ.ಆರ್.ನಗರದ ಹೋಟೆಲ್ಲೊಂದರ ಮುಂದೆ, ಬಾಳೆಹಣ್ಣು ವ್ಯಾಪಾರದಲ್ಲಿ ತೊಡಗಿಕೊಂಡರು. ಅವರ ಸ್ನೇಹಿತರೇ ನಡೆಸುತ್ತಿದ್ದ ಹೋಟೆಲ್ಲದು. ಹೀಗಾಗಿ, ಅವರಿಗೆ ಸುತ್ತಮುತ್ತಲ ಜನರ ಅಭಿರುಚಿ ಮತ್ತು ಹೋಟೆಲ್ ವ್ಯಾಪಾರದ ಒಳಹೊರಗು ಗೊತ್ತಾಗಿಬಿಟ್ಟಿತು. ಅಲ್ಲಿಂದ ಮುಂದೆ ಮಹಾದೇವ ಅವರು ಹೋಟೆಲ್ ಒಂದನ್ನು ಕೊಂಡುಕೊಂಡರು. ಹಳೆಯ ಹೋಟೆಲ್‌ಗೆ “ಜ್ಞಾನೇಶ್’ ಎಂದು ಹೆಸರಿಟ್ಟು ಮುಂದುವರಿಸಿದರು. ವ್ಯಾಪಾರ ತಿಳಿದುಕೊಂಡಿದ್ದರಿಂದ ಗಿರಾಕಿಗಳನ್ನು ಕಾಪಾಡಿಕೊಳ್ಳುವುದು ಕಷ್ಟವೆನಿಸಲಿಲ್ಲ. ಅಲ್ಲದೆ, ಪತ್ನಿ ಪ್ರಮೋದಾ ಅವರ ಜೊತೆಯೂ ಇರುವುದರಿಂದ ಹೋಟೆಲ್ ಚೆನ್ನಾಗಿ ನಡೆಯುತ್ತಿದೆ.
ಹೂವಿನಂಥ ಇಡ್ಲಿ : ಗ್ರಾಹಕರನ್ನು ಪ್ರೀತಿ ವಿಶ್ವಾಸದಿಂದ ಕಾಣುತ್ತಾರೆ. ಇಲ್ಲಿನ ಹೂವಿನಂಥ ಇಡ್ಲಿ, ಸಾಂಬಾರ್, ದೋಸೆ ಗ್ರಾಹಕರನ್ನು ಮತ್ತೂಮ್ಮೆ ಹೋಟೆಲ್‌ಗೆ ಭೇಟಿ ಕೊಡುವಂತೆ ಮಾಡುತ್ತದೆ ಎನ್ನುವುದು ಗಿರಾಕಿಗಳ ಮಾತು. ಹೋಟೆಲ್‌ಗೆ ಬೇಕಾಗುವ ಮಸಾಲೆ ಮತ್ತಿತರ ಪದಾರ್ಥಗಳನ್ನು ತಮ್ಮ ಮನೆಯಲ್ಲೇ ಸಿದ್ಧಪಡಿಸುವುದರಿಂದ ರುಚಿ ಕಾಪಾಡಿಕೊಳ್ಳಲು ಸಾಧ್ಯವಾಗಿದೆ ಎನ್ನುತ್ತಾರೆ ಮಹದೇವ. ಅನುಭವಿ ಅಡುಗೆ ಭಟ್ಟರಲ್ಲದೆ, ಒಟ್ಟು, ಏಳು ಮಂದಿ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಹೋಟೆಲ್ ತಿಂಡಿ, ಊಟ ತಟ್ಟೆ ಇಡ್ಲಿ, ವಡೆ (2 ಇಡ್ಲಿ ಒಂದು ವಡೆ ಸೇರಿ 35 ರೂ.), ತರಕಾರಿ ಬಾತ್, ಬಿಸಿಬೇಳೆ ಬಾತ್, ಚಿತ್ರಾನ್ನ, ಮೊಸರನ್ನ (25 ರೂ.), ಸಾದಾ ದೋಸೆ (10 ರೂ.), ಮಸಾಲೆ ದೋಸೆ (30 ರೂ.), ಸ್ಪೆಷಲ್ ಖಾಲಿ ಅಥವಾ ಸೆಟ್ ಮಸಾಲೆ ದೋಸೆ (15 ರೂ). ಮಧ್ಯಾಹ್ನ 12ರ ನಂತರ ಮುದ್ದೆ ಊಟ, ಚಪಾತಿ ಊಟ ಸಿಗುತ್ತೆ. (50 ರೂ.), ಬರೀ ಅನ್ನ- ಸಾಂಬಾರು ತೆಗೆದುಕೊಂಡರೆ ಜೊತೆಗೆ ಹಪ್ಪಳ, ಉಪ್ಪಿನಕಾಯಿ, ಮಜ್ಜಿಗೆ ಕೊಡ್ತಾರೆ (30 ರೂ.). ಮುದ್ದೆ ಅಥವಾ ಚಪಾತಿ ಊಟ ತೆಗೆದುಕೊಂಡ್ರೆ ಬೇಳೆ ಸಾರು, ಅನ್ನ, ಕೋಸಂಬರಿ, ತಿಳಿ ಸಾರು, ಹಪ್ಪಳ, ಉಪ್ಪಿನಕಾಯಿ, ಎರಡು ತರದ ಪಲ್ಯ, ಮಜ್ಜಿಗೆ, ಮೊಸರು ಕೊಡ್ತಾರೆ. ಟೀ, ಕಾಫಿ ಸಿಗುತ್ತೆ (6 ರೂ.)
-ಭೋಗೇಶ ಆರ್. ಮೇಲುಕುಂಟೆ