Advertisement

ಶತಮಾನದ ಸಂತ, ಜ್ಞಾನಯೋಗಿ ಸಿದ್ಧೇಶ್ವರ ಶ್ರೀ ಮತ್ತೆ ಹುಟ್ಟಿ ಬರಲಿ

12:40 AM Jan 04, 2023 | Team Udayavani |

ಅಗಲಿದ ಶತಮಾನದ ಸಂತ ಜ್ಞಾನಯೋಗಾಶ್ರಮದ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರನ್ನು ನಾನು ಸುಮಾರು ಮೂರು ದಶಕಗಳಿಂದ ಬಲ್ಲವನಾಗಿದ್ದೇನೆ. ಅವರನ್ನು ಹತ್ತಿರದಿಂದ ನೋಡುವ, ಅವರೊಂದಿಗೆ ಕೆಲವು ಹೆಜ್ಜೆಗಳನ್ನು ನಡೆಯುವ, ಅವರೊಡನೆ ಮಾತನಾಡುವ ಹಾಗೂ ಅವರ ಪ್ರವಚನಗಳನ್ನು ಕೇಳುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಎಂದೇ ಭಾವಿಸಿದ್ದೇನೆ.

Advertisement

2013ರಲ್ಲಿ ಬಿಡುಗಡೆಯಾದ ನನ್ನ ಪುಸ್ತಕ “ಮುಂಜಾವಿಗೊಂದು ನುಡಿಕಿರಣ-365’ರಲ್ಲಿ ಅವರನ್ನು ಕುರಿತು ನಾನು ಬರೆದ ನುಡಿಯೊಂದು ಹೀಗಿದೆ: “ಸರಳತೆಯ ವ್ಯಾಖ್ಯೆ, ಸಜ್ಜನಿಕೆಯ ಸಾಕಾರ ಮೂರ್ತಿ, ಜ್ಞಾನ ಭಂಡಾರಿ, ಪ್ರಾಮಾಣಿಕತೆಯ ಸಂಕೇತ, ನಿರಾಡಂಬರದ ಕನ್ನಡಿ, ಬಿಳಿಬಟ್ಟೆಯಲ್ಲಿರುವ ಜಗದ್ಗುರು ಮಹಾಸ್ವಾಮಿ ಶ್ರೀ ಸಿದ್ಧೇಶ್ವರ ಸ್ವಾಮಿಗಳು’ ಕಿಸೆ ಇಲ್ಲದ ಖಾದಿ ಅಂಗಿ ಧರಿಸುತ್ತಿದ್ದ, ಪಾದಪೂಜೆ ಬೇಡವೆಂದ, ಹಣವನ್ನು ಮುಟ್ಟದ, ಹಾರ ಹಾಕಿಸಿಕೊಳ್ಳದ, ಪದ್ಮಶ್ರೀ ಹಾಗೂ ಗೌರವ ಡಾಕ್ಟರೆಟ್‌ನಂತಹ ಪುರಸ್ಕಾರ-ಪ್ರಶಸ್ತಿಗಳನ್ನು ವಿನಯದಿಂದ ನಿರಾಕರಿಸಿದ ಯೋಗಿ, ತ್ಯಾಗಿ, ಮಹಾತ್ಮ, ಸುಜ್ಞಾನಿ, ಜ್ಞಾನ ಸಾಗರದಲ್ಲಿ ಮಿಂದು ಪ್ರವಚನಗಳ ಮೂಲಕ ಗೌರಿಶಂಕರದ ಶಿಖರಕ್ಕೇರಿದ, ಶತಮಾನ ಕಂಡ ವಿಶಿಷ್ಟ ಮತ್ತು ಶ್ರೇಷ್ಠ ಸಂತ ಸಿದ್ಧೇಶ್ವರರಾಗಿದ್ದಾರೆ.

ಎಲ್ಲ ಸಂದರ್ಭಗಳಲ್ಲಿ ಸದಾ ನುಡಿದಂತೆ ನಡೆದಿದ್ದಾರೆ. ನಡೆದಂತೆ ನುಡಿದಿದ್ದಾರೆ. ಉತ್ಕೃಷ್ಟ ಹಾಗೂ ಸಾರ್ಥಕ ಬದುಕಿಗೆ ಸಾವಿರಾರು ಜನರಿಗೆ ಪ್ರೇರಣೆಯಾಗಿ ಅವರಲ್ಲಿ ಪರಿವರ್ತನೆ ತಂದ ಮಹಾಂತ ಅವರು. ಅವರಾಡಿದ ಮಾತುಗಳಲ್ಲಿ ಸತ್ವ ಮತ್ತು ಸತ್ಯ ಇದೆ. ಜತೆಗೆ ಆದರ್ಶ ಬದುಕಿಗೆ ಮಾದರಿಯಾಗಿದ್ದಾರೆ. ಅವರ ಸಂದೇಶ ಮನಸ್ಸಿಗೆ ಮುಟ್ಟಿ, ಹೃದಯದ ಆಳಕ್ಕೆ ಇಳಿದು ಗಟ್ಟಿಯಾಗಿ ನಿಲ್ಲುತ್ತದೆ. ಮಾತನಾಡುವವರು ಬಹಳ ಇದ್ದಾರೆ. ಆದರೆ ಎಲ್ಲರ ಮಾತುಗಳು ಪರಿಣಾಮಕಾರಿಯಾಗುವುದಿಲ್ಲ. ಮೃಗತ್ವದಿಂದ ಮನುಷ್ಯತ್ವದ ಕಡೆಗೆ, ಮನುಷ್ಯತ್ವದಿಂದ ದೈವತ್ವದ ಕಡೆಗೆ ಜೀವನದ ಪಯಣ ಸಾಗಲು ಅವರ ಪ್ರವಚನಗಳು ಸಂಜೀವಿನಿ. ಮೃಗತ್ವವೆಂದರೆ ಕಣ್ಣೀರು ಬರಿಸುವುದು, ಮನುಷ್ಯತ್ವವೆಂದರೆ ಕಣ್ಣೀರು ಒರೆಸುವುದು ಮತ್ತು ದೈವತ್ವವೆಂದರೆ ಕಣ್ಣೀರು ಬರದಂತೆ ನೋಡಿಕೊಳ್ಳುವುದು.
ಕೆಲವು ತಿಂಗಳುಗಳ ಹಿಂದೆ ಪೂಜ್ಯರ ಪ್ರವಚನ ಬೆಳಗಾವಿ ಜಿಲ್ಲೆ ನಿಪ್ಪಾಣಿಯಲ್ಲಿ ನಡೆಯುತ್ತಿತ್ತು. ನಾನು ಅವರ ಭೇಟಿಗೆ ತೆರಳಿದ್ದೆ. ಆಗ ಶಶಿಕಲಾ ಜೊಲ್ಲೆ ಅವರು ಸಚಿವರಾಗಿದ್ದರು. ಅವರ ಪತಿ ಅಣ್ಣಾಸಾಹೇಬ ಜೊಲ್ಲೆ ಕೂಡ ಇದ್ದರು. ಅವರೆಲ್ಲರ ಜತೆ ಸೇರಿ ಸ್ವಾಮೀಜಿಗಳ ಬಳಿ ತೆರಳಿದೆ.

ಆಗ ಶ್ರೀಗಳು ನನಗೆ ಮೂರು ಮಾತು ಹೇಳಿದರು. ಒಂದು, ಇವರು ಯಾವ ಕುರ್ಚಿ ಮೇಲೆ ಕೂರುತ್ತಾರೋ ಅದಕ್ಕೆ ಬೆಲೆ ತರುತ್ತಾರೆ. ಎರಡನೆಯದ್ದು ನಿಮ್ಮ ಆರೋಗ್ಯ ಚೆನ್ನಾಗಿದೆ. ಮೂರನೆಯದು ನೀವು ಚೆನ್ನಾಗಿ ಮಾತನಾಡುತ್ತೀರಿ. ಒಂದು ದಿನ ನೀವೇ ಮಾತನಾಡಬೇಕು. ಅದನ್ನು ನಾನು ಸಹಿತ ಇವರೆಲ್ಲ ಕೇಳಬೇಕು ಎಂದರು. ಇದಾದ ಒಂದು ವಾರದ ಬಳಿಕ ನಾನು ನಿಪ್ಪಾಣಿಗೆ ತೆರಳಿದೆ. ನಾನು ವೇದಿಕೆ ಮೇಲಿದ್ದೆ. ಸ್ವಲ್ಪ ಹೊತ್ತು ಮಾತನಾಡಿದೆ. ನಾನಾಡುವ ಮಾತನ್ನು ವೇದಿಕೆ ಕೆಳಗೆ ಕುಳಿತು ಪೂಜ್ಯರ ಸಹಿತ ನೂರಾರು ಜನ ಕೇಳಿದರು. ಸಾವಿರಾರು ಜನ ಅವರ ಮಾತು ಕೇಳಲು ಬಂದಿರುತ್ತಾರೆ. ಆದರೆ ಶ್ರೀಗಳು ನನಗೆ ಮಾತನಾಡಲು ಅವಕಾಶ ಕಲ್ಪಿಸಿದರು. ಇದು ಶ್ರೀಗಳ ಔದಾರ್ಯ. ನನ್ನ ಮೇಲಿನ ಪ್ರೀತಿ, ವಿಶ್ವಾಸದ ಪ್ರತೀಕ. ಅವತ್ತಿನ ದಿನ ಅವರ ಸಮಯವನ್ನು ನನಗೆ ದಾನ ಮಾಡಿ ಶ್ರೇಷ್ಠರೆನಿಸಿದರು. ಈ ಘಟನೆ ನನ್ನ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರಿದೆ. ಇದು ನನಗೆ ಸಿಕ್ಕ ಸೌಭಾಗ್ಯ ಎಂದರೆ ಅತಿಶಯೋಕ್ತಿ ಅಲ್ಲ.

ಪೂಜ್ಯರ ಆರೋಗ್ಯದಲ್ಲಿ ವ್ಯತ್ಯಾಸ ಆಗಿದೆ ಎಂದು ತಿಳಿದಾಗ ಬಹಳ ಕಳವಳವಾಯಿತು. ಅವರು ಶಿವೈಕ್ಯರಾಗಿದ್ದಾರೆ ಎಂದು ಗೊತ್ತಾದಾಗ ಹತ್ತಿರದಿಂದ ಅವರನ್ನು ನೋಡಿದ ನನಗೆ ದೊಡ್ಡ ಆಘಾತವಾಯಿತು. ನೂರಕ್ಕೆ ನೂರು ನುಡಿದಂತೆ ನಡೆದ-ನಡೆದಂತೆ ನುಡಿದ ಪೂಜ್ಯರಂತಹ ಇನ್ನೊಂದು ಉದಾಹರಣೆ ಸಿಗುವುದು ದುರ್ಲಭ ಅಥವಾ ಸಾಮಾನ್ಯವಾಗಿ ಅಸಾಧ್ಯ. ಆದ್ದರಿಂದ ಮನುಕುಲದ ಒಳಿತಿಗಾಗಿ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಪುನಃ ಈ ನಾಡಿನಲ್ಲಿ ಹುಟ್ಟಿ ಬರಲಿ ಎಂಬುದು ನನ್ನ ಹಾಗೂ ನಾಡಿನ ಅಸಂಖ್ಯಾತ ಭಕ್ತರ ಪ್ರಾರ್ಥನೆಯಾಗಿದೆ.

Advertisement

-ನ್ಯಾ| ಶಿವರಾಜ ವಿ. ಪಾಟೀಲ,
ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳು

Advertisement

Udayavani is now on Telegram. Click here to join our channel and stay updated with the latest news.

Next