ರಾಂಚಿ: ಬುಡಕಟ್ಟು ಜನರನ್ನು ಆಧುನಿಕತೆಯತ್ತ ಉತ್ತೇಜಿಸುವ ಸಲುವಾಗಿ, ಜಾರ್ಖಂಡ್ ಮುಕ್ತಿ ಮೋರ್ಚಾದ (ಜೆಎಂಎಂ) ನಾಯಕ, ಶಾಸಕ ಸೈಮನ್ ಮರಾಂಡಿ, ತಮ್ಮ ಕ್ಷೇತ್ರದಲ್ಲಿ ಮುತ್ತಿಕ್ಕುವ ಸ್ಪರ್ಧೆ ಏರ್ಪಡಿಸಿರುವುದು ಈಗ ವಿವಾದ ಎಬ್ಬಿಸಿದೆ.
ತಮ್ಮ ಲಿಟ್ಟಿಪಾರಾ ಕ್ಷೇತ್ರದಲ್ಲಿನ ಗಿರಿಜನರ ತಾಣವಾದ ತಲ್ಪಹರಿ ಎಂಬ ಹಳ್ಳಿಯಲ್ಲಿ ಶನಿವಾರ ರಾತ್ರಿ ಬುಡಕಟ್ಟು ಜನಾಂಗದ ದಂಪತಿಗಳಿಗಾಗಿ ಕಿಸ್ಸಿಂಗ್ ಸ್ಪರ್ಧೆ ನಡೆಸಿದ್ದಾರೆ. ಭಾಗವಹಿಸಿದ್ದ ದಂಪತಿಗಳು “ಮುತ್ತೂಂದ ನೀಡುವೆನು ಹತ್ತಿರ ಹತ್ತಿರ ಬಾ’ ಅಂತ ಮುತ್ತಿಕ್ಕಿರುವ ಫೋಟೋಗಳು ಸಂಪ್ರದಾಯಸ್ಥರ ಕಣ್ಣು ಕೆಂಪಾಗಿಸಿವೆ. ಸ್ಪರ್ಧೆಯಲ್ಲಿ ಅತ್ಯುತ್ತಮವಾಗಿ ಮುತ್ತಿಕ್ಕಿದ (!) ಮೂವರು ದಂಪತಿಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ವಿತರಿಸಲಾಗಿದೆ. ಸ್ಥಳೀಯ ಪತ್ರಿಕೆಗಳಲ್ಲಿಯೂ ಇದು ತಡವಾಗಿ (ಸೋಮವಾರ) ವರದಿಯಾಗಿವೆ.
ಈ ಸ್ಪರ್ಧೆಯಲ್ಲಿ ಜೆಎಂಎಂನ ಮತ್ತೂಬ್ಬ ಹಿರಿಯ ನಾಯಕ ಹಾಗೂ ಶಾಸಕ ಸ್ಟೀಫನ್ ಮರಾಂಡಿ ಕೂಡ ಹಾಜರಿದ್ದು, ನೂರಾರು ಪ್ರೇಕ್ಷಕರು ಈ ಸ್ಪರ್ಧೆಯನ್ನು ಸವಿದರೆಂದು ವರದಿಯಲ್ಲಿ ಹೇಳಲಾಗಿದೆ. ಪ್ರಕರಣಕ್ಕೆ ಆಡಳಿತಾರೂಢ ಬಿಜೆಪಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಬಿಜೆಪಿಯ ಹಿರಿಯ ನಾಯಕ, “”ಇಂಥ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಜೆಎಂಎಂ ಏನನ್ನು ಸಾಬೀತುಪಡಿಸಲು ಬಯಸುತ್ತಿದೆ? ಆಧುನಿಕ ಜೀವನಕ್ಕೆ ಒಗ್ಗಿಕೊಳ್ಳಲು ಹಿಂದು ಮುಂದು ನೋಡುವ ಆದಿವಾಸಿಗಳಿಗೆ ಆಧುನಿಕತೆಯ ಪರಿಚಯ ಮಾಡಿಸಲು, ಆ ಬಗ್ಗೆ ಆತ್ಮಸ್ಥೈರ್ಯ ತುಂಬಲು ಸಾಕಷ್ಟು ದಾರಿಗಳಿವೆ. ಅದೆಲ್ಲಾ ಬಿಟ್ಟು ಇಂಥ ಸ್ಪರ್ಧೆಯ ಮೊರೆ ಹೋಗಿ ದ್ದೇಕೆ” ಎಂದು ಪ್ರಶ್ನಿಸಿರುವ ಅವರು “”ಕಿಸ್ಸಿಂಗ್ ಸ್ಪರ್ಧೆ ಮೂಲಕ ಬುಡಕಟ್ಟು ಜನರ ಸಂಸ್ಕೃತಿಯನ್ನು ಅಪಹಾಸ್ಯ ಮಾಡಲಾಗಿದೆ” ಎಂದು ದೂರಿದ್ದಾರೆ.
ಈ ಕಿಸ್ಸಿಂಗ್ ಸ್ಪರ್ಧೆಯು ಪ್ರೇಮ ಹಾಗೂ ಆಧುನಿಕತೆಯ ಪರಿಚಯ ಮಾಡುವ ಉದ್ದೇಶದಿಂದ ನಡೆಸಲಾಗಿದೆ. ಆಧುನಿಕತೆಗೆ ಒಗ್ಗಲು ಸಂಕೋಚ ಪಡುವ ಅವರಲ್ಲಿನ ಆ ಗುಣವನ್ನು ಹೋಗಲಾಡಿ ಸಲು ಈ ಸ್ಪರ್ಧೆ ಏರ್ಪಡಿಸಲಾಗಿತ್ತಷ್ಟೆ.
ಸೈಮನ್ ಮರಾಂಡಿ, ಜೆಎಂಎಂ ಶಾಸಕ ಹಾಗೂ ಸ್ಪರ್ಧೆಯ ಆಯೋಜಕ