ಜಮಾತ್ ಉಲ್ ಮುಜಾಹಿದ್ದೀನ್ ಬಾಂಗ್ಲಾದೇಶ್ (ಜೆಎಂಬಿ) ಉಗ್ರ ಸಂಘಟನೆಯ 22 ಅಡಗುತಾಣಗಳು ಬೆಂಗಳೂರು ಹಾಗೂ ಹೊರವಲಯದಲ್ಲಿ ಪತ್ತೆಯಾಗಿವೆ ಎಂಬ ಮಾಹಿತಿ ನಿಜಕ್ಕೂ ರಾಜಧಾನಿ ಬೆಂಗಳೂರಷ್ಟೇ ಅಲ್ಲದೆ ರಾಜ್ಯಾದ್ಯಂತ ಆತಂಕಕ್ಕೆ ಕಾರಣವಾಗಿದೆ.
ಕೇಂದ್ರ ಗುಪ್ತಚರ ದಳ ಸೂಚನೆ ಮೇರೆಗೆ ಗೃಹ ಸಚಿವಾಲಯವು ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲು ಸೂಚನೆ ನೀಡಿದೆ. ಉಗ್ರರ ನುಸುಳುವಿಕೆ ತಡೆಗಟ್ಟುವುದು ಸೇರಿದಂತೆ ಭಯೋತ್ಪಾದಕರಿಗೆ ಕರ್ನಾಟಕ ಆಶ್ರಯ ತಾಣ ಆಗದಂತೆ ನೋಡಿಕೊಳ್ಳುವ ಮಹತ್ತರ ಹೊಣೆಗಾರಿಕೆ ರಾಜ್ಯ ಸರ್ಕಾರದ ಮೇಲೆ ಇದೆ.
ರೊಹಿಂಗ್ಯಾ ಮುಸ್ಲಿಂರ ಶಿಬಿರಗಳು ಹಾಗೂ ಬಾಂಗ್ಲಾ ವಲಸಿಗರ ಮೇಲೆ ಹೆಚ್ಚಿನ ನಿಗಾ ಇಡುವುದು ತೀರಾ ಅವಶ್ಯಕ. ಏಕೆಂದರೆ, ರಾಜ್ಯದಲ್ಲಿ ಜೆಎಂಬಿಯ ಮೂವರು ಉಗ್ರರನ್ನು ಎನ್‌ಐಎ ಬಂಧಿಸಿದೆ. ಈ ಬಗ್ಗೆ ತನಿಖೆಯೂ ನಡೆಯುತ್ತಿದೆ. ರಾಜ್ಯದಲ್ಲಿ ಉಳಿದುಕೊಂಡಿದ್ದ ಅವಧಿಯಲ್ಲಿ ಅವರು ನಡೆಸುತ್ತಿದ್ದ ಚಟುವಟಿಕೆಗಳು ಹಾಗೂ ಅವರು ಹೊಂದಿದ್ದ ಸಂಪರ್ಕಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಕರ್ನಾಟಕಕ್ಕೆ ಉಗ್ರರಿಂದ ಆತಂಕ ಎದುರಾಗದಂತೆ ನೋಡಿಕೊಳ್ಳಬೇಕಾಗಿದೆ. ಈ ವಿಚಾರದಲ್ಲಿ ರಾಜ್ಯ ಪೊಲೀಸರ ಹೊಣೆಗಾರಿಕೆಯೂ ಹೆಚ್ಚಾಗಿದೆ.
ಕೇಂದ್ರ ಗುಪ್ತಚರ ದಳ ಸೂಚನೆ ನೀಡಿದರೆ ಅಥವಾ ದೇಶದ ಇತರೆ ಭಾಗಗಲ್ಲಿ ಉಗ್ರರ ಕೃತ್ಯಗಳು ನಡೆದಾಗ ಅಲರ್ಟ್ ಆಗುವುದು ಬೇರೆ. ಉಗ್ರರು ಬೆಂಗಳೂರು ಸೇರಿದಂತೆ ಕರ್ನಾಟಕಕ್ಕೆ ಪ್ರವೇಶ ಮಾಡಿದ ಹಲವಾರು ಘಟನೆಗಳು ಹಿಂದೆ ನಡೆದಿವೆ. ಹೀಗಾಗಿ, ನಿರಂತರವಾಗಿ ಎಚ್ಚರ ವಹಿಸಬೇಕಾಗಿದೆ ಬೆಂಗಳೂರಿನ ಚಿಕ್ಕಬಾಣವಾರದ ಮನೆಯೊಂದರಲ್ಲಿ ಸ್ಫೋಟಕಗಳನ್ನು ತಯಾರಿಕೆಯಲ್ಲಿ ಭಾಗಿಯಾಗಿ ಆಶ್ರಯಪಡೆದುಕೊಂಡಿದ್ದ ಜೆಎಂಬಿ ಪ್ರಮುಖ ಉಗ್ರ ಕೌಸರ್‌ನ ನಾಲ್ವರು ಸಹಚರರ ಸುಳಿವು ರಾಜ್ಯ ಪೊಲೀಸರು ಹಾಗೂ ಎನ್‌ಐಎ ಅಧಿಕಾರಿಗಳಿಗೂ ಇದುವರೆಗೂ ಪತ್ತೆಯಾಗಿಲ್ಲ ಎಂಬ ಮಾಹಿತಿ ಆತಂಕಕಾರಿಯೂ ಹೌದು.
ಈಗಾಗಲೇ ಬಂಧಿಸಿರುವ ಜೆಎಂಬಿ ಉಗ್ರರ ಜತೆಗಿದ್ದ ನಾಲ್ವರು ರಾಜ್ಯದಲ್ಲಿಯೇ ತಲೆಮರೆಸಿಕೊಂಡಿರುವ ಶಂಕೆಯಿದೆ. ನಾಲ್ವರು ಆರೋಪಿಗಳು ಉಗ್ರ ಚಟುವಟಿಕೆಗಳನ್ನು ಸಕ್ರಿಯಗೊಳಿಸುತ್ತಿದ್ದಾರೆ ಎಂಬ ಮಾಹಿತಿಯೂ ಇರುವುದರಿಂದ ರಾಜ್ಯ ಸರ್ಕಾರ ಎಚ್ಚರ ತಪ್ಪುವಂತಿಲ್ಲ.
ಉಗ್ರರ ನೆಟ್‌ವರ್ಕ್ ಕರ್ನಾಟಕ ಹಾಗೂ ಸುತ್ತಮುತ್ತಲ ರಾಜ್ಯಗಳಲ್ಲಿ ವ್ಯಾಪಿಸಿದೆ ಎಂಬ ಮಾಹಿತಿ ಇರುವುದರಿಂದ ನೆರೆಯ ಆಂಧ್ರ, ತೆಲಂಗಾಣ, ಕೇರಳ, ತಮಿಳುನಾಡು ಪೊಲೀಸರ ಸಹಕಾರ ಪಡೆದು ಕಾರ್ಯೋನ್ಮುಖ ವಾಗಬೇಕಾಗಿದೆ.
ಉಗ್ರರು ಪ್ರವೇಶಿಸಿದ ನಂತರ ಸ್ಥಳೀಯವಾಗಿ ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡು ಜನರ ನಂಬಿಕೆ ಗಳಿಸಿ ಮನೆ ಬಾಡಿಗೆಗೆ ಪಡೆದು ಯಾರಿಗೂ ಗೊತ್ತಿಲ್ಲದಂತೆ ತಮ್ಮ ಚಟುವಟಿಕೆಗಳನ್ನು ನಡೆಸುವುದರಿಂದ ಪತ್ತೆ ಕಾರ್ಯ ಅಷ್ಟು ಸುಲಭವಲ್ಲ.
ಹಲವು ವರ್ಷಗಳ ಹಿಂದೆ ಬೆಂಗಳೂರನ್ನು ಬೆಚ್ಚಿ ಬೀಳಿಸಿದ್ದ ಎಂಎಸ್‌ಆರ್ ನಗರದಲ್ಲಿ ನಡೆದಿದ್ದ ಉಗ್ರರ ಎನ್‌ಕೌಂಟರ್ ಪ್ರಕರಣದ ನಂತರ ಮನೆ ಬಾಡಿಗೆಗೆ ಕೊಡುವಾಗ ಮಾಲೀಕರು ಪೂರ್ವಾಪರ ವಿಚಾರಿಸಿ ಗುರುತಿನ ಚೀಟಿ ಪರಿಶೀಲಿಸಿ ಕೊಡಬೇಕು ಎಂದು ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದರು. ಅದಾದ ನಂತರವೂ ಕೆಲವು ಘಟನೆಗಳ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ನಗರಗಳಲ್ಲಿಯೂ ಇದೇ ರೀತಿಯ ಸೂಚನೆ ನೀಡಲಾಗಿತ್ತು. ಆದರೆ, ಅದು ಸರಿಯಾಗಿ ಪಾಲನೆಯಾಗುತ್ತಿಲ್ಲ. ಹೀಗಾಗಿ, ಉಗ್ರರು ಸೇರಿದಂತೆ ಸಮಾಜಘಾತುಕ ಕೃತ್ಯ ಎಸಗುವವರಿಗೆ ಸುಲಭವಾಗಿ ಬಾಡಿಗೆಗೆ ಮನೆ ಸಿಗುತ್ತಿದೆ. ಈ ಬಗ್ಗೆಯೂ ಪೊಲೀಸ್ ಇಲಾಖೆ ಗಮನಹರಿಸಬೇಕಾಗಿದೆ.