ಜೀವನದಲ್ಲಿ ಸೋಲು – ಗೆಲುವು ಸಮಾನವಾಗಿ ಬರುತ್ತದೆ. ಆದರೆ ಅವುಗಳಿಗಾಗಿ ಕಾಯುವ ತಾಳ್ಮೆ ನಮ್ಮಗಿಲ್ಲ ಅಷ್ಟೇ. ಕೆಲವೊಮ್ಮೆ ಸೋಲೇ ಸರಣಿಯಾಗಿ ಬಂದರೆ, ಇನ್ನು ಕೆಲವೊಮ್ಮೆ ಸಂತಸವೇ ಬರುತ್ತದೆ. ಅಂತಿಮವಾಗಿ ಸೋಲು – ಗೆಲುವು ಅಂದರೆ ಬದುಕಿನ ಸುಖ – ದುಃಖ ಎರಡೂ ಸಮಾನವಾಗಿ ಬರುತ್ತದೆ.
ಎಷ್ಟೋ ಸಲ ಜೀವನದಲ್ಲಿ ಅನಿರೀಕ್ಷಿತ ತಿರುವುಗಳು ಬರುತ್ತವೆ. ಆ ಅನಿರೀಕ್ಷಿತ ತಿರುವು ನಮ್ಮ ಬದುಕಿನಲ್ಲಿ ಖುಷಿಯನ್ನೂ ತರಬಹುದು, ದುಃಖವನ್ನೂ ತರಬಹುದು. ಒಟ್ಟಿನಲ್ಲಿ ಅನಿರೀಕ್ಷಿತವಾಗಿ ಬರುವ ತಿರುವುಗಳಿಂದಲೇ ಬದುಕು ಬದಲಾಗುತ್ತದೆ.
ಈ ಮೇಲಿನ ಮಾತುಗಳನ್ನು ಹೇಳಿದ್ದು, ಒಂದು ಸಾಧಕಿಯ ಜೀವನದ ಕಥೆಯನ್ನು ಹೇಳುವುದಕ್ಕೆ.ಆಕೆ ಜಮ್ಮು ಕಾಶ್ಮೀರದ ಹುಡುಗಿ. ಭಾರತದ ಸ್ವರ್ಗದ ಸೊಬಗನ್ನು ನೋಡಿತ್ತಾ ಬೆಳೆದ ಕುಟುಂಬದ ಮುದ್ದಿನ ಬಾಲೆ. ಹೆಸರು ಇಶ್ರತ್ ಅಕ್ತರ್.
ಇಶ್ರತ್ ಶಾಲೆಗೆ ಹೋಗುತ್ತಿದ್ದ ದಿನಗಳದು. ಹತ್ತನೇ ತರಗತಿಯಲ್ಲಿದ್ದ ದಿನಗಳವು. ಎಲ್ಲಾ ದಿನದಂತೆ ಆ ದಿನವೂ ಹಾಗೆಯೇ ಇತ್ತು. ಕುಟುಂಬದ ಸದಸ್ಯರೊಂದಿಗೆ ಮಧ್ಯಾಹ್ನದ ಊಟ ಮಾಡಿ ಹೊರ ಹೋಗಿ ಗಾಳಿಯ ತಂಪು ಸವಿಯಲು ಮನೆಯ ಬಾಲ್ಕನಿಗೆ ಹೊರಟವಳ ದಾರಿಯಲ್ಲಿ ದೇವರು ಅದೊಂದು ವಿಧಿ ಲಿಖಿತ ನಿಯಮವನ್ನು ಬರೆದಿದ್ದ. ಬಾಲ್ಕನಿಯಿಂದ ಕಾಲು ಜಾರಿ ಎರಡನೇ ಮಹಡಿಯಿಂದ ಇಶ್ರತ್ ದೊಪ್ಪನೆ ಕೆಳಗೆ ಬಿದ್ದಿದ್ದಾಳೆ. ಬಿದ್ದ ರಭಸಕ್ಕೆ ಕಣ್ಣುಗಳು ಮುಚ್ಚಿವೆ. ಹೊರ ಪ್ರಪಂಚದ ಜ್ಞಾನವೇ ಇಲ್ಲದಂತೆ ಎಲ್ಲವೂ ಶೂನ್ಯವಾಗಿದೆ. ಅಕ್ಕಪಕ್ಕದವರು ಬಂದು ಮುಖಕ್ಕೆ ನೀರು ಎರಚಿ, ಎಬ್ಬಿಸಿ, ಎರಡು ಕೈಹಿಡಿದು ನಿಲ್ಲಿಸಲು ಯತ್ನಿಸಿದರು. ಇಶ್ರತ್ ಕಣ್ಣು ತೆರೆದಿದ್ದಾಳೆ. ಮಾತನಾಡುತ್ತಿದ್ದಾಳೆ. ಆದರೆ ನಿಲ್ಲಲು ಮಾತ್ರ ಆಗುತ್ತಲೇ ಇಲ್ಲ.
ಆಸ್ಪತ್ರೆ ಮತ್ತು ಆಘಾತದಲ್ಲಿ ಇಶ್ರತ್ :
ಬಾರಮುಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಶ್ರೀನಗರದ ಆಸ್ಪತ್ರೆಗೆ ಇಶ್ರತ್ ಅವರನ್ನು ಕರೆದುಕೊಂಡು ಹೋಗಲಾಗುತ್ತದೆ. ಸ್ಟ್ರೆಚರ್ ನಲ್ಲಿ ಅಲ್ಲಿ ಆರು ದಿನಗಳ ಬಳಿಕ ಸರ್ಜರಿ ನಡೆಸಲಾಗುತ್ತದೆ. ಇಶ್ರತ್ ಅಕ್ಕನ ಬಳಿ, ನನಗೇನಾಗಿದೆ. ಡಾಕ್ಟರ್ ಏನು ಹೇಳಿದ್ರು ಎಂದು ಕೇಳುತ್ತಲೇ ಇದ್ರು, ಏನಿಲ್ಲ ಎಂದು ಹೇಳಿ ಇಶ್ರತ್‌ಅವರನ್ನು ನೋವಿನಲ್ಲೇ ಆಶಾದಾಯಕ ಮಾತನ್ನು ಹೇಳಿ ಸುಮ್ಮನೆ ಕೂರಿಸುತ್ತಾರೆ. ಆದರೆ ಈ ಮಾತುಗಳು ಜಾಸ್ತಿ ಸಮಯ ಆಸರೆಯಾಗಿ ಉಳಿಯಲಿಲ್ಲ. ಗಂಟೆಗಟ್ಟಲೆ ಸರ್ಜರಿ ಮಾಡಿದ ಬಳಿಕ ಡಾಕ್ಟರ್ ಇಶ್ರತ್ ಅವರ ತಂದೆಯ ಹತ್ತಿರ ಒಂದು ಮಾತನ್ನು ಹೇಳುತ್ತಾರೆ. ಆ ಮಾತನ್ನು ಬೆಡ್ ನಲ್ಲಿ ಅರೆ ಕಣ್ಣು ತೆರೆದು ವಿಶ್ರಾಂತಿ ಪಡೆಯುತ್ತಿದ್ದ ಇಶ್ರತ್ ಅವರನ್ನು ಆಘಾತಕ್ಕೆ ಒಳಗಾಗುವಂತೆ ಮಾಡುತ್ತದೆ.
ನಿಮ್ಮ ಮಗಳ ಸ್ಪೈನಲ್ ಕಾರ್ಡ್(ಬೆನ್ನು ಹುರಿ)ಗೆ ಹಾನಿಯಾಗಿದೆ ಅವಳು ಎಂದೂ ನಡೆಯಲು ಆಗಲ್ಲ ಎನ್ನುವ ಮಾತನ್ನು ಡಾಕ್ಟರ್ ಹೇಳುತ್ತಾರೆ. ಮಾತನ್ನು ಕೇಳಿದ ಕೂಡಲೇ ತಡೆದಿಟ್ಟುಕೊಂಡಿದ್ದ ದುಃಖ ಒಮ್ಮೆಗೆ ಅಳುವಿನ ಮೂಲಕ ಹೊರ ಬರುತ್ತದೆ. ವಾರ್ಡ್ ಹೊರಗೆ ಬಂದು ಗಳಗಳನೇ ಅತ್ತು ಬಿಡುತ್ತಾರೆ. ಮಗನಂತಿದ್ದ, ಮಗಳ ಸ್ಥಿತಿಗೆ ಮರುಗುತ್ತಾರೆ.
ನಿನ್ನೆ ಮೊನ್ನೆಯವರೆಗೆ ನಡೆಯುತ್ತಿದ್ದ ನಾನು, ಇವತ್ತು ಹೀಗೆ, ಈ ಸ್ಥಿತಿಯಲ್ಲಿದ್ದೇನೆ ಎಂದು ಮನೆಗೆ ಬಂದು ಕೋಣೆಯ ಒಳಗೆ ಹೋದ ಇಶ್ರತ್ ಬೆಳಕು, ಭರವಸೆ ಎರಡೂ ತನ್ನ ಜೀವನದಲ್ಲಿ ಇನ್ನು ಮುಂದೆ ಶೂನ್ಯವೆಂದು ತನ್ನನ್ನು ತಾನು ನೋವಿನಲ್ಲಿ ಇರಿಸಿ, ದುಃಖ ಪಡುತ್ತಾಳೆ. ಯಾರೊಂದಿಗೂ ಮಾತಿಲ್ಲ. ಮೌನವೊಂದೇ ಸಾಕು ಸಾಯುವವರೆಗೂ ಎಂದು ಖಿನ್ನತೆ (ಡಿಪ್ರೆಶನ್) ಗೆ ಜಾರುತ್ತಾರೆ. ಆರು ತಿಂಗಳು ಮನೆಯೊಳಗೆಯೇ ಇದ್ದು, ನರಕದ ಅನುಭವದಲ್ಲಿ ಬದುಕುತ್ತಾರೆ.
ಭರವಸೆ ಕೊಟ್ಟ ಅಕ್ಕ; ಕನಸು ಕಂಡ ಇಶ್ರತ್:
ಇಶ್ರತ್ ಅವರ ಅಕ್ಕ ನರ್ಸಿಂಗ್ ನಲ್ಲಿ ಕೆಲಸ ಮಾಡುತ್ತಿದ್ದರು. ಅದೊಂದು ದಿನ ತನ್ನ ತಂಗಿಯ ಸ್ಥಿತಿಯನ್ನು ನೋಡಿ , ಬಾರಮುಲ್ಲಾದಲ್ಲಿ ಒಂದು ಕ್ಯಾಂಪ್ ಬಂದಿದೆ. ಅಲ್ಲಿಗೆ ನೀನು ಹೋಗು, ಫಿಸಿಯೋಥೆರಪಿಗಳು ಬರುತ್ತಾರೆ ಎಂದು ಹೇಳುತ್ತಾರೆ. ಇಶ್ರತ್ ಅಲ್ಲಿಗೆ ಹೋಗುತ್ತಾರೆ. ಆದಾದ ಮೇಲೆ ಅವರನ್ನು ಮೆಡಿಕಲ್ ಕ್ಯಾಂಪ್ ನಲ್ಲಿ ಇನ್ನಷ್ಟು ಚಿಕಿತ್ಸೆಗಾಗಿ ಶ್ರೀನಗರದ ಮತ್ತೊಂದು ಕ್ಯಾಂಪ್ ಗೆ ಬನ್ನಿಯೆಂದು ವೈದ್ಯರು ಹೇಳುತ್ತಾರೆ. ಶ್ರೀನಗರದ ಮೆಡಿಕಲ್ ಕ್ಯಾಂಪ್ ನಲ್ಲಿ ಒಂದಷ್ಟು ತಿಂಗಳು ಇಶ್ರತ್ ಕಳೆಯುತ್ತಾ ಅಪಘಾತದಿಂದ ಹೊರ ಬರುವ ಪ್ರಯತ್ನ ಮಾಡುತ್ತಾರೆ. ದಿನನಿತ್ಯ ಅಲ್ಲಿರುವ ಇತರ ರೋಗಿಗಳೊಂದಿಗೆ ಮಾತಾನಾಡುತ್ತಾರೆ. ಬೆರೆಯುತ್ತಾರೆ. ವೀಲ್ ಚೇರ್ ನಲ್ಲೇ ಬದುಕಲು ಆರಂಭಿಸುತ್ತಾರೆ.
ವೀಲ್ ಚೇರ್ ನಲ್ಲಿ ಕುಳಿತು ಪರಿಸರದ ಸೊಬಗು ಸವಿಯಲು ಕ್ಯಾಂಪಸ್ ನಲ್ಲಿ ಅತ್ತಿತ್ತ ಹೋಗುವಾಗ, ಅಲ್ಲೊಂದು ವೀಲ್ ಚೇರ್ ವುಳ್ಳ ಹುಡುಗರ ಗುಂಪೊಂದು ಬಾಸ್ಕೆಟ್‌ಬಾಲ್ ಆಡುತ್ತಾ, ತಮಗೇನು ಆಗಲೇ ಇಲ್ಲ. ತಮ್ಮ ದೇಹದ ಯಾವುದೇ ಅಂಗವನ್ನು ಕಳೆದುಕೊಳ್ಳಲೇ ಇಲ್ಲ ಎಂದು ಖುಷಿಯಿಂದ ಆಡುತ್ತಿರುತ್ತಾರೆ. ಈ ದೃಶ್ಯ ಇಶ್ರತ್ ಅವರನ್ನು ಸೆಳೆಯುತ್ತದೆ.
ನನ್ನ ಹಾಗೆ ಅವರು ಕೂಡ ವೀಲ್ ಚೇರ್ ನಲ್ಲಿದ್ದಾರೆ ಅವರು ಆಡುತ್ತಾರೆ ಅಂದರೆ ನಾನ್ಯಾಕೆ ಆಡಬಾರದು. ನನ್ನಿಂದ ಅದು ಯಾಕೆ ಸಾಧ್ಯವಿಲ್ಲ ಎನ್ನುವ ಪ್ರಶ್ನೆಯೊಂದು ಸಾಧಿಸುವ ಮುನ್ನ ಸಾಧಕಿಯ ಮನದಲ್ಲಿ ಬರುತ್ತದೆ.
ಆ ಗುಂಪಿನೊಂದಿಗೆ ಹುಡುಗರೊಂದಿಗೆ ಮಾತಾನಾಡಿದ ಮೇಲೆ, ಅವರು ಕಾಶ್ಮೀರದ ಬಾಸ್ಕೆಟ್ ಬಾಲ್ ತಂಡದ ಸದಸ್ಯರೆಂದು ಇಶ್ರತ್ ಅವರಿಗೆ ತಿಳಿಯುತ್ತದೆ. ಇಶ್ರತ್ ನೀವು ಮಾತ್ರವಲ್ಲ. ನಿಮ್ಮ ಹಾಗೆ ದೈಹಿಕ ದೌರ್ಬಲ್ಯ ಹೊಂದಿರುವ ತುಂಬಾ ಹುಡುಗಿಯರಿಗೆ ಕ್ರೀಡೆಯಲ್ಲಿ ಆಸಕ್ತಿಯಿದೆ ಎಂದು ಹೇಳಿ ಇಶ್ರತ್ ಅವರ ಮನದಲ್ಲಿದ್ದ ಸಾಧಿಸುವ ಉಮೇದಿಗೆ ಬಾಸ್ಕೆಟ್ ಬಾಲ್ ಆಡುತ್ತಿದ್ದ ಹುಡುಗರು ಪ್ರೇರಣೆ ನೀಡುತ್ತಾರೆ.
ಆತ್ಮವಿಶ್ವಾಸ ತುಂಬಿದ ವೀಲ್ ಚೇರ್..
ಇದಾದ ಕೆಲ ದಿನಗಳ ಬಳಿಕ ತಾವಿದ್ದ ಎನ್ ಜಿಒನಲ್ಲಿ( ಮೆಡಿಕಲ್ ಕ್ಯಾಂಪ್) ಇಶ್ರತ್ ಬಾಸ್ಕೆಟ್ ಬಾಲ್ ಆಡುತ್ತೇನೆ ಎಂದು ಹೇಳುತ್ತಾರೆ. ಹುಡುಗರೊಂದಿಗೆ ವೀಲ್ ಚೇರ್ ನಲ್ಲೇ ಕುಳಿತು ಬಾಸ್ಕೆಟ್ ಬಾಲ್ ಆಡುವ ಅಭ್ಯಾಸವನ್ನು ಶುರು ಮಾಡುತ್ತಾರೆ. ದಿನಗಳೆದಂತೆ ಬಾಸ್ಕೆಟ್ ಬಾಲ್ ಹಾಗೂ ವೀಲ್ ಚೇರ್ ಇಶ್ರತ್ ಅವರಿಗೆ ಆತ್ಮವಿಶ್ವಾಸದ ಸಂಕೇತವಾಗಿ ಕಾಣುತ್ತದೆ. ತಾನು ಕೂಡ ಏನಾದರೂ ಸಾಧಿಸಬಲ್ಲೆ ಎನ್ನುವ ಛಲ ಅವರಲ್ಲಿ ಹುಟ್ಟಿಕೊಳ್ಳುತ್ತದೆ.
2018 ರಲ್ಲಿ ಮೊದಲ ಬಾರಿ ಬಾಸ್ಕೆಟ್ ಬಾಲ್ ಶಿಬಿರಕ್ಕೆ ಹೋಗುತ್ತಾರೆ. ಅದು ಕೂಡ 10 ಜನರ ಹುಡುಗರೊಂದಿಗೆ. ( ಆ ಸಮಯದಲ್ಲಿ ಜಮ್ಮು – ಕಾಶ್ಮೀರದಲ್ಲಿ ಹುಡುಗಿಯರ ತಂಡವಿರಲಿಲ್ಲ) ಅಲ್ಲಿ ದಿಲ್ಲಿಯ ಪರವಾಗಿ ಆಡಲು ಆಯ್ಕೆ ಆಗುತ್ತಾರೆ. ತಮಿಳುನಾಡಿನಲ್ಲಿ ನ್ಯಾಷನಲ್ ಬಾಸ್ಕೆಟ್ ಬಾಲ್ ಚಾಂಪಿಯನ್ ಶಿಪ್ ನಲ್ಲಿ ಇಶ್ರತ್ ಆಡುತ್ತಾರೆ.
ಎರಡನೇ ಬಾರಿ ಮೊಹಲಿಯಲ್ಲಿ ನ್ಯಾಷನಲ್ ಆಡಲು ಹೋಗುತ್ತಾರೆ. ಆಗ ಇಶ್ರತ್ ಅವರೊಂದಿಗೆ ಮತ್ತೊಬ್ಬ ಹುಡುಗಿಯೂ ಇರುತ್ತಾರೆ. ಮೊಹಾಲಿಗೆ ಹೋಗುವ ಮುನ್ನ ಇಶ್ರತ್ ಅವರು ತಮ್ಮ ರಾಜ್ಯದ ತಂಡವನ್ನು (2019) ಕಟ್ಟುತ್ತಾರೆ. ಜಮ್ಮು-ಕಾಶ್ಮೀರದ ಹುಡುಗಿಯರ ತಂಡ ಮೊಹಾಲಿಯಲ್ಲಿ ಉತ್ತಮ ರೀತಿ ಆಡುತ್ತದೆ.
ಮನೆಗೆ ಬಂದು ಶುಭ ಸುದ್ದಿ ತಿಳಿಸಿದ ಪೊಲೀಸರು..
ಮೊಹಾಲಿಯಲ್ಲಿ ಪಂದ್ಯ ಆಡಿ ಮನೆಯಲ್ಲಿ ಕುಳಿತಿದ್ದ ಇಶ್ರತ್ ಅವರ ಮನೆಗೆ ಅದೊಂದು ದಿನ ಪೊಲೀಸರು ಹಾಗೂ ಸೇನೆಯ ಅಧಿಕಾರಿಗಳು ಬರುತ್ತಾರೆ. ಪೊಲೀಸರನ್ನು ನೋಡಿ ಒಮ್ಮೆಗೆ ಹೆದರಿದ ಇಶ್ರತ್ ಅವರಿಗೆ ಪೊಲೀಸರು ಫೋನ್ ನೀಡುತ್ತಾರೆ. (ಅಂದು ಕಾಶ್ಮೀರದ ಪರಿಸ್ಥಿತಿ ಸರಿಯಾಗಿಲ್ಲದ ಕಾರಣ ಇಂಟರ್ ನೆಟ್ ಹಾಗೂ ಫೋನ್ ಕರೆಗಳನ್ನು ಸ್ಥಗಿತಗೊಳಿಸಲಾಗಿತ್ತು) ನಿಮ್ಮ ಕೋಚ್ ಕರೆ ಮಾಡಿದ್ದಾರೆ ಎಂದು ಪೊಲೀಸರು ಫೋನ್ ಕರೆಯನ್ನು ಇಶ್ರತ್ ಅವರಿಗೆ ನೀಡುತ್ತಾರೆ. “ಇಶ್ರತ್ ನಿಮ್ಮ ಸೆಲೆಕ್ಷನ್ ಕ್ಯಾಂಪ್ ಚೆನ್ನೈನಲ್ಲಿ ಆಗುತ್ತಿದೆ. ಇನ್ನು ಎರಡು ದಿನದಲ್ಲಿ ನೀವು ಅಲ್ಲಿರಬೇಕು” ಎಂದು ಕೋಚ್ ಹೇಳುತ್ತಾರೆ. ಎರಡೇ ದಿನದಿಲ್ಲಿ ಅಲ್ಲಿಗೆ ಹೋಗುವುದು ಆ ಸಮಯದಲ್ಲಿ ಕಷ್ಟವಾಗಿತ್ತು. ಆದರೆ ಮೇಜರ್ ಚಂದನ್ ಇಶ್ರತ್ ಅವರ ಬೆನ್ನಿಗೆ ನಿಂತು ಪ್ರೋತ್ಸಾಹಿಸುತ್ತಾರೆ. ಚೆನ್ನೈಗೆ ಹೋಗುವ ಎಲ್ಲಾ ಏರ್ಪಾಡನ್ನು ಮಾಡಿಕೊಡುತ್ತಾರೆ.
ಇಶ್ರತ್ ಅಂದು ಮೊದಲ ಬಾರಿ ಒಂಟಿಯಾಗಿ ಪಯಣ ಬೆಳೆಸುತ್ತಾರೆ. ವೀಲ್ ಚೇರ್ ಇದೆ. ಬೆನ್ನ ಹಿಂದೆ ಆತ್ಮವಿಶ್ವಾಸವೆಂಬ ಕಾಣದ ಶಕ್ತಿಯಿದೆ. ಮೂರು ದಿನದ ಕ್ಯಾಂಪ್ ನಲ್ಲಿ ಭಾಗಿಯಾಗುತ್ತಾರೆ. ಆ ಬಳಿಕ ಎಲ್ಲರ ಬದುಕಿನಲ್ಲಿ ಬರುವ ಅನಿರೀಕ್ಷಿತ ತಿರುವು ಇಶ್ರತ್ ಅವರ ಬದುಕಿನಲ್ಲಿ ಎರಡನೇ ಭಾರಿ ಬರುತ್ತದೆ. ಈ ಬಾರಿ ಸಂತಸವಾಗಿ. ಕ್ಯಾಂಪ್ ನಲ್ಲಿ “ಇಶ್ರತ್ ನೀವು ಭಾರತ ತಂಡಕ್ಕೆ ಆಯ್ಕೆ ಆಗಿದ್ದೀರಿ” ಎಂದು ಘೋಷಣೆ ಮಾಡುತ್ತಾರೆ. ಇದನ್ನು ಕೇಳಿದ ಇಶ್ರತ್ ಅವರಿಗೆ ಇದು ಕಾಲಿನಲ್ಲಿ ಬಲವಿಲ್ಲದಿದ್ದರೂ ಎದ್ದು ಕುಣಿದಾಡಿದಷ್ಟು ಖುಷಿ ಕೊಡುತ್ತದೆ.
ಥೈಲ್ಯಾಂಡ್ ನಲ್ಲಿ ಭಾರತ ತಂಡದ ಜೆರ್ಸಿ ತೊಟ್ಟು ಅಪಘ್ಘಾನಿಸ್ತಾನ, ಚೀನ, ಇರಾನ್, ಕಾಂಬೋಡಿಯಾ, ಮಲೇಷ್ಯಾ ತಂಡಗಳ ಜೊತೆ ಬಾಸ್ಕೆಟ್ ಬಾಲ್ ಆಡುತ್ತಾರೆ. ಭಾರತದ ಪರವಾಗಿ ಕಾಶ್ಮೀರದ ಮೊದಲ ವೀಲ್ ಚೇರ್ ಬಾಸ್ಕೆಟ್ ಬಾಲ್ ಪ್ಲೇಯರ್ ಎಂಬ ಹೆಗ್ಗಳಿಕೆಯನ್ನು ಇಶ್ರತ್ ಪಡೆಯುತ್ತಾರೆ.
ಥೈಲ್ಯಾಂಡ್ ನಿಂದ ವಾಪಸ್ ಬಂದ ಬಳಿಕ ಇಶ್ರತ್ ಅವರ ಬಗ್ಗೆ ಕೊಂಕು ಮಾತಾನಾಡುತ್ತಿದ್ದ ವ್ಯಕ್ತಿಗಳೆಲ್ಲಾ, ತಲೆಬಾಗಿ ಗೌರವಿಸಲು ಶುರು ಮಾಡುತ್ತಾರೆ. ಕೇಂದ್ರ ಕ್ರೀಡಾ ಸಚಿವರು ಇಶ್ರತ್ ಅವರನ್ನು ವಿಶೇಷವಾಗಿ ಗೌರವಿಸಿ, ಟ್ವೀಟ್ ಮಾಡಿ ಶುಭ ಕೋರುತ್ತಾರೆ. ಇಂದು ಇಶ್ರತ್ ತಮ್ಮ ಬದುಕಿನ ಯಾನದ ಬಗ್ಗೆ ಹಲವಾರು ಶಾಲಾ- ಕಾಲೇಜುಗಳಿಗೆ ಹೋಗಿ ಸ್ಪೂರ್ತಿದಾಯಕ ಮಾತುಗಳನ್ನು ಆಡುತ್ತಾರೆ. ವೀಲ್ ಚೇರ್ ನಲ್ಲಿದ್ದೇ ಇಶ್ರತ್ ಕಾರಿನ ಲೈಸೆನ್ಸ್ ಪಡೆದುಕೊಂಡಿದ್ದಾರೆ. ಅಪಘಾತದಿಂದ ಕಲಿಕೆಯನ್ನು ನಿಲ್ಲಿಸಿದ್ದ ಇಶ್ರತ್ ಈಗ ಮೊದಲ ವರ್ಷದ ಕಲಾ ವಿಭಾಗದಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ.
ವೀಲ್ ಚೇರ್ ನಲ್ಲಿರುವುದು ದೌರ್ಬಲ್ಯ ಅಲ್ಲ, ಅದೇ ಬಲ. ಅದೇ ಆತ್ಮವಿಶ್ವಾಸವೆಂದು ಇಶ್ರತ್ ಅವರು ತೋರಿಸಿ ಕೊಟ್ಟಿದ್ದಾರೆ.
–ಸುಹಾನ್ ಶೇಕ್