ನವದೆಹಲಿ:ದೆಹಲಿಯ ವಿಜಯ್ ಚೌಕ್ ಸಮೀಪ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯನ್ನು ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್ ಪಿಎಫ್) ಬುಧವಾರ (ಆಗಸ್ಟ್ 26, 2020) ಬಂಧಿಸಿದೆ ಎಂದು ಮೂಲಗಳು ತಿಳಿಸಿದೆ.
ವರದಿಯ ಪ್ರಕಾರ, ಈತ ತಾನು ಜಮ್ಮು-ಕಾಶ್ಮೀರದ ಬದ್ಗಾಮ್ ಜಿಲ್ಲೆಯವನು ಎಂದು ತಿಳಿಸಿದ್ದು, ಸಂಸತ್ ಭವನದ ಸುತ್ತಮುತ್ತ ಅನುಮಾನಾಸ್ಪದವಾಗಿ ಸುತ್ತಾಡುತ್ತಿದ್ದ ವೇಳೆ ಸಿಆರ್ ಪಿಎಫ್ ಸಿಬ್ಬಂದಿಗೆ ಈತನ ಚಟುವಟಿಕೆ ಕುರಿತು ಮಾಹಿತಿ ಪಡೆದ ಬಳಿಕ ಬಂಧಿಸಿರುವುದಾಗಿ ವರದಿ ವಿವರಿಸಿದೆ.
ಪ್ರಾಥಮಿಕ ತನಿಖೆ ವೇಳೆ ಈ ವ್ಯಕ್ತಿ ಸಿಆರ್ ಪಿಎಫ್ ಗೆ ದಾರಿ ತಪ್ಪಿಸುವ ಮಾಹಿತಿ ನೀಡಿದ್ದ. ಬಂಧಿಸಿದ ವೇಳೆ ಆತನಿಂದ ವಶಪಡಿಸಿಕೊಂಡ ದಾಖಲೆಯಲ್ಲಿ ಕೆಲವು ಮಾಹಿತಿ ಕೋಡ್ ವರ್ಡ್ಸ್ ನಲ್ಲಿ ಇದ್ದಿರುವುದಾಗಿ ವರದಿ ತಿಳಿಸಿದೆ.
ಎರಡು ಗುರುತು ಪತ್ರ, ಒಂದು ಆಧಾರ್ ಕಾರ್ಡ್ ಮತ್ತು ಡ್ರೈವಿಂಗ್ ಲೈಸೆನ್ಸ್ ಅನ್ನು ಬಂಧಿತ ವ್ಯಕ್ತಿಯಿಂದ ಜಪ್ತಿ ಮಾಡಿಕೊಳ್ಳಲಾಗಿದೆ. ಎರಡು ಗುರುತು ಪತ್ರದಲ್ಲಿ ಬೇರೆ, ಬೇರೆ ಹೆಸರುಗಳಿವೆ. ಡ್ರೈವಿಂಗ್ ಲೈಸೆನ್ಸ್ ನಲ್ಲಿ ಫಿರ್ದೌಸ್ ಎಂದಿದ್ದರೆ, ಆಧಾರ್ ಕಾರ್ಡ್ ನಲ್ಲಿ ಮಂಝೂರ್ ಅಹ್ಮದ್ ಎಂದಿದೆ!
ಈತ ಜಮ್ಮು-ಕಾಶ್ಮೀರದ ಬದ್ಗಾಮ್ ಜಿಲ್ಲೆಯ ಬೀರ್ವಾ ದ ನಿವಾಸಿ ಎಂದು ತಿಳಿದುಬಂದಿದೆ. ಬಂಧನದ ವೇಳೆ ಬ್ಯಾಗ್ ಅನ್ನು ವಶಪಡಿಸಿಕೊಂಡಿದ್ದಾರೆ. ಸಿಆರ್ ಪಿಎಫ್ ಅಧಿಕಾರಿಗಳ ಪ್ರಕಾರ, ಸಂಶಯಾಸ್ಪದ ಚಟುವಟಿಕೆ ನಿಟ್ಟಿನಲ್ಲಿ ಬಂಧಿಸಿದಾಗ ಈತ ತನ್ನ ಹೇಳಿಕೆಯನ್ನು ಬದಲಾಯಿಸುತ್ತಿದ್ದಾನೆ ಎಂದು ತಿಳಿಸಿದ್ದಾರೆ.
ತನಿಖೆಯ ವೇಳೆ ಮೊದಲು ಈತ 2016ರಲ್ಲಿ ತಾನು ದೆಹಲಿಗೆ ಬಂದಿರುವುದಾಗಿ ತಿಳಿಸಿದ್ದ. ನಂತರ ಹೇಳಿದ್ದು…ನಾನು ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ದೆಹಲಿಗೆ ಬಂದಿರುವುದಾಗಿ ಮಾಹಿತಿ ನೀಡಿದ್ದ. ಲಾಕ್ ಡೌನ್ ನ ಸಮಯದಿಂದ ತಾನು ದೆಹಲಿಯಲ್ಲಿಯೇ ಇದ್ದಿರುವುದಾಗಿ ಸಿಆರ್ ಪಿಎಫ್ ಅಧಿಕಾರಿಗಳಿಗೆ ತಿಳಿಸಿದ್ದಾನೆ. ಈತ ಯಾರು ಎಂಬ ಬಗ್ಗೆ ಇನ್ನಷ್ಟೇ ಸ್ಪಷ್ಟ ಗುರುತು ತಿಳಿದುಬರಬೇಕಾಗಿದೆ. ತಾನು ಜಾಮೀಯಾ ಪ್ರದೇಶದಲ್ಲಿ ವಾಸವಾಗಿದ್ದೇನೆ ಎಂದು ಮೊದಲು ಹೇಳಿದ್ದು, ನಂಗತರ ನಿಜಾಮುದ್ದೀನ್ ಪ್ರದೇಶದಲ್ಲಿ ವಾಸವಾಗಿರುವುದಾಗಿ ನಂತರ ತಿಳಿಸಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ.
ಬಂಧನಕ್ಕೊಳಗಾದ ವ್ಯಕ್ತಿಯನ್ನು ದೆಹಲಿ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಅಲ್ಲಿ ಪಾರ್ಲಿಮೆಂಟ್ ಹೌಸ್ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೊಳಪಡಿಸಲಿದ್ದಾರೆ. ಈಗಾಗಲೇ ಕಲೆ ಹಾಕಿದ್ದ ಮಾಹಿತಿಯನ್ನು ವಿವಿಧ ಏಜೆನ್ಸಿ (ಗುಪ್ತಚರ ಇಲಾಖೆ)ಗಳ ಜತೆ ಹಂಚಿಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.