ಶ್ರೀನಗರ: ಪಾಕ್ ಆಕ್ರಮಿತ ಕಾಶ್ಮೀರ (PoK) ಇಲ್ಲದೆ ಜಮ್ಮು ಮತ್ತು ಕಾಶ್ಮೀರವು “ಅಪೂರ್ಣ” ಎಂದು ಘೋಷಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಪಾಕಿಸ್ಥಾನನಕ್ಕೆ ಬಲವಾದ ಸಂದೇಶವನ್ನು ನೀಡಿದ್ದಾರೆ. ಪಾಕಿಸ್ಥಾನ ತನ್ನ ಭಯೋತ್ಪಾದಕ ಮೂಲಸೌಕರ್ಯವನ್ನು ಕಿತ್ತುಹಾಕಬೇಕು ಇಲ್ಲವಾದಲ್ಲಿ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಅಖ್ನೂರ್‌ನಲ್ಲಿ ನಡೆದ ಸಶಸ್ತ್ರ ಪಡೆಗಳ ಯೋಧರ ಸಭೆಯಲ್ಲಿ ಮಾತನಾಡಿದ ಸಿಂಗ್, 370 ನೇ ವಿಧಿಯನ್ನು ರದ್ದುಗೊಳಿಸಿರುವುದು ಈ ಪ್ರದೇಶದಲ್ಲಿ ಪರಿವರ್ತನೆಯನ್ನು ಪ್ರಾರಂಭಿಸಿದೆ ಎಂದು ಒತ್ತಿ ಹೇಳಿದರು.
“ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ತೀವ್ರವಾಗಿ ಬದಲಾಗಿದೆ ಮತ್ತು ಈ ಸತ್ಯವನ್ನು ಒಪ್ಪಿಕೊಳ್ಳಬೇಕು. ಪಿಒಕೆ ಇಲ್ಲದೆ ಜಮ್ಮು ಮತ್ತು ಕಾಶ್ಮೀರ ಅಪೂರ್ಣವಾಗಿದೆ, ಇದು ಭಾರತದ ಕಿರೀಟ ರತ್ನವಾಗಿ ಉಳಿದಿದೆ ಎಂದರು.
ಭಾರತದ ನಿಲುವನ್ನು ಪುನರುಚ್ಚರಿಸಿದ ಸಿಂಗ್, “ಪಾಕಿಸ್ಥಾನಕ್ಕೆ ಪಿಒಕೆ ವಿದೇಶಿ ಪ್ರದೇಶಕ್ಕಿಂತ ಹೆಚ್ಚೇನೂ ಅಲ್ಲ ಮತ್ತು ಜಮ್ಮು ಮತ್ತು ಕಾಶ್ಮೀರದ ಜನರ ಆಕಾಂಕ್ಷೆಗಳು ಎಂದಿಗೂ ಪಾಕಿಸ್ಥಾನದೊಂದಿಗೆ ಹೊಂದಿಕೆಯಾಗಲಿಲ್ಲ.
ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಈ ಪ್ರದೇಶದ ಅನೇಕ ಮುಸ್ಲಿಂ ನಿವಾಸಿಗಳು ಮಾಡಿದ ತ್ಯಾಗವನ್ನು ಉಲ್ಲೇಖಿಸಿ, ಪಾಕಿಸ್ಥಾನ ವು ಭಯೋತ್ಪಾದಕ ತರಬೇತಿ ಶಿಬಿರಗಳು ಮತ್ತು ಒಳನುಸುಳುವಿಕೆ ಚಟುವಟಿಕೆಗಳಿಗೆ ನೆಲೆಯಾಗಿ ಪಿಒಕೆ ಅನ್ನು ಬಳಸಿಕೊಳ್ಳುತ್ತಿದೆ. ಗಡಿಯ ಬಳಿ ರಚಿಸಲಾದ ಲಾಂಚ್ ಪ್ಯಾಡ್‌ಗಳ ಬಗ್ಗೆ ಭಾರತಕ್ಕೆ ಚೆನ್ನಾಗಿ ತಿಳಿದಿದೆ . ಪಾಕಿಸ್ಥಾನ ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಬೇಕು, ಇಲ್ಲದಿದ್ದರೆ ಪರಿಣಾಮ ಎದುರಿಸಬೇಕು ಎಂದು ಬಲವಾದ ಸಂದೇಶ ನೀಡಿದ್ದಾರೆ.