Advertisement

ಕಾಶ್ಮೀರಕ್ಕೆ ಕಲ್ಲೇ ಮಾರಕ: ಮೋದಿ

08:38 AM May 20, 2018 | Team Udayavani |

ಶ್ರೀನಗರ: ಜಮ್ಮು ಕಾಶ್ಮಿರದಲ್ಲಿ ತಪ್ಪು ಹಾದಿ ಹಿಡಿದ ಪ್ರತಿ ಯುವಕ ಎತ್ತುವ ಕಲ್ಲು ಕೂಡ ಕಾಶ್ಮೀರ ಮತ್ತು ದೇಶಕ್ಕೆ ಮಾರಕ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವಿವಿಧ ಯೋಜನೆಗಳ ಉದ್ಘಾಟನೆಗಾಗಿ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿರುವ ಮೋದಿ, ಕಾಶ್ಮೀರವನ್ನು ಸುಸ್ಥಿರಗೊಳಿಸಲು ಯುವಕರು ಮುಂದಾಗಬೇಕಿದೆ ಎಂದಿದ್ದಾರೆ.

Advertisement

ಕಾಶ್ಮೀರದ ಅಭಿವೃದ್ಧಿ ಬೇಕಿಲ್ಲದ ವಿದೇಶಿ ಶಕ್ತಿಗಳು ಈ ಕೃತ್ಯದ ಹಿಂದಿವೆ. ಇಲ್ಲಿನ ತಪ್ಪು ಹಾದಿ ಹಿಡಿದ ಯುವಕ ಹಿಡಿಯುವ ಕಲ್ಲು ಹಾಗೂ ಶಸ್ತ್ರಾಸ್ತ್ರವು ಕಾಶ್ಮೀರವನ್ನು ತಲ್ಲಣಗೊಳಿಸುತ್ತದೆ. ಇದನ್ನು ತೊರೆದು ಯುವಕರು ಮುಖ್ಯವಾಹಿನಿಯ ಅಭಿವೃದ್ಧಿಗೆ ಕೈಜೋಡಿಸಬೇಕಿದೆ. ಅವರ ಮತ್ತು ಮುಂದಿನ ತಲೆಮಾರಿನ ಭವಿಷ್ಯದ ದೃಷ್ಟಿಯಿಂದ ಇದು ಮಹತ್ವದ್ದು ಎಂದಿದ್ದಾರೆ. ಎಲ್ಲ ಸಮಸ್ಯೆಗೂ ಅಭಿವೃದ್ಧಿಯೇ ಪರಿಹಾರ ಎಂದೂ ಅವರು ಹೇಳಿದ್ದಾರೆ.

ಕಿಶನ್‌ಗಂಗಾ ವಿದ್ಯುತ್‌ ಯೋಜನೆ ಉದ್ಘಾಟಿಸಿ ಮಾತನಾಡಿದ ಮೋದಿ, ನಾನು ಅಧಿಕಾರ ವಹಿಸಿಕೊಂಡ ನಂತರ ಪ್ರತಿ ವರ್ಷವೂ ಕಾಶ್ಮೀರಕ್ಕೆ ಭೇಟಿ ನೀಡಿದ್ದೇನೆ ಎಂದಿದ್ದಲ್ಲದೆ, ಈ ಯೋಜನೆ ಯಿಂದಾಗಿ ರಾಜ್ಯಕ್ಕೆ ಸಾಕಷ್ಟು ವಿದ್ಯುತ್‌ ಸಿಗಲಿದೆ. ಸದ್ಯ ರಾಜ್ಯಕ್ಕೆ ಅಗತ್ಯವಿರುವ ವಿದ್ಯುತ್ತನ್ನು ಇತರ ರಾಜ್ಯಗಳಿಂದ ಖರೀದಿಸಲಾಗುತ್ತಿದೆ. ಇಡೀ ದೇಶಕ್ಕೆ ಸಾಲುವಷ್ಟು ವಿದ್ಯುತ್ತನ್ನು ಉತ್ಪಾದಿಸುವ ಸಾಮರ್ಥ್ಯ ವನ್ನು ಜಮ್ಮು ಕಾಶ್ಮೀರ ಹೊಂದಿದೆ ಎಂದಿದ್ದಾರೆ.

ಅಲ್ಲದೆ ರಸ್ತೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ರಾಜ್ಯದ ಪ್ರಮುಖ ಚಟುವಟಿಕೆಯೇ ಪ್ರವಾಸೋದ್ಯಮ. ಆದರೆ ಹಳೆಯ ವಿಧಾನದ ಪ್ರವಾಸೋದ್ಯಮ ಈಗ ನಡೆಯದು. ಪ್ರವಾಸಿಗರಿಗೆ ಸೌಲಭ್ಯಗಳು ಬೇಕಿದೆ. ಗಂಟೆಗಟ್ಟಲೆ ಸಣ್ಣ ರಸ್ತೆಯಲ್ಲಿ ಸಿಕ್ಕಿಹಾಕಿಕೊಳ್ಳಲು ಪ್ರವಾಸಿಗರು ಬಯಸುವುದಿಲ್ಲ. ನಿರಂತರ ವಿದ್ಯುತ್‌ ಅವರಿಗೆ ಅಗತ್ಯವಿದೆ. ಉತ್ತಮ ನೈರ್ಮಲ್ಯ ಹಾಗೂ ವಿಮಾನ ಸಂಪರ್ಕವೂ ಬೇಕಿದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಕ್ಕರೆ ರಾಜ್ಯದ ಯುವಕರಿಗೆ ಉದ್ಯೋಗ ಅವಕಾಶಗಳೂ ಸಿಗುತ್ತವೆ ಎಂದು ಹೇಳಿದರು.

ಪ್ರತಿಭಟನೆ: ರಂಜಾನ್‌ ಮಾಸದ ವೇಳೆಯ ಕದನ ವಿರಾಮವನ್ನು ಹಿಂಪಡೆಯುವಂತೆ ಜಮ್ಮು ಕಾಶ್ಮೀರ ನ್ಯಾಷನಲ್‌ ಪ್ಯಾಂಥರ್ಸ್‌ ಪಾರ್ಟಿ (ಜೆಕೆಎನ್‌ಪಿಪಿ) ಪ್ರತಿಭಟನೆ ನಡೆಸಿದೆ. ಮೋದಿ ಕಾಶ್ಮೀರಕ್ಕೆ ಆಗಮಿಸಿದ ವೇಳೆಯಲ್ಲೇ, ಮಾಜಿ ಸಚಿವ ಹರ್ಶ್‌ ದೇವ್‌ ಸಿಂಗ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಪಾಕಿಸ್ತಾನ ಹಾಗೂ ಉಗ್ರರು ಈ ಕದನ ವಿರಾಮವನ್ನು ತಿರಸ್ಕರಿಸಿದ್ದಾರೆ. ಹೀಗಾಗಿ ಕೇಂದ್ರ ತನ್ನ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

Advertisement

ಮಿರ್ವೇಜ್‌ ವಶಕ್ಕೆ: ಗೃಹ ಬಂಧನವನ್ನು ಮೀರಿ ಲಾಲ್‌ ಚೌಕ್‌ ಕಡೆಗೆ ಪಾದಯಾತ್ರೆ ನಡೆಸಲು ಯತ್ನಿಸಿದ ಪ್ರತ್ಯೇಕತಾವಾದಿ ಹುರಿಯತ್‌ ಕಾನ್ಫರೆನ್ಸ್‌ ಮುಖಂಡ ಮಿರ್ವೇಜ್‌ ಉಮರ್‌ ಫಾರೂಕ್‌ರನ್ನು ವಶಕ್ಕೆ ಪಡೆಯಲಾಗಿದೆ. ಕಾಶ್ಮೀರ ಸಮಸ್ಯೆಯನ್ನು ಪರಿಹರಿಸುವಂತೆ ಒತ್ತಾಯಿಸಿ ಅವರು ಪಾದಯಾತ್ರೆ ನಡೆಸಲು ಬಯಸಿದ್ದರು.

ಗವರ್ನರ್‌ರನ್ನೇ ಮರೆತ ಮೆಹಬೂಬಾ: ಕಿಶನ್‌ಗಂಗಾ ವಿದ್ಯುತ್‌ ಯೋಜನೆಯ ಉದ್ಘಾಟನೆ ವೇಳೆ ಕಾರ್ಯಕ್ರಮದಲ್ಲಿ ಮಾತನಾಡು ವಾಗ, ರಾಜ್ಯಪಾಲ ಎನ್‌.ಎನ್‌.ವೋಹ್ರಾರನ್ನು ಸಂಬೋಧಿಸುವುದನ್ನೇ ಸಿಎಂ ಮೆಹಬೂಬಾ ಮುಫ್ತಿ ಮರೆತ ಘಟನೆ ನಡೆಯಿತು. ಆದರೆ ಕೊನೆಗೆ ತಮ್ಮ ತಪ್ಪಿನ ಅರಿವಾಗಿ ರಾಜ್ಯಪಾಲರ ಕ್ಷಮೆ ಕೇಳಿದರು.

ಜೋಜಿಲಾ ಸುರಂಗಕ್ಕೆ ಶಂಕುಸ್ಥಾಪನೆ
ಏಷ್ಯಾದಲ್ಲೇ ಅತಿ ಉದ್ದದ ಜೋಜಿಲಾ ಸುರಂಗ ನಿರ್ಮಾಣ ಕಾಮಗಾರಿಗೆ ಪ್ರಧಾನಿ ಮೋದಿ ಶನಿವಾರ ಶಂಕುಸ್ತಾಪನೆ ನೆರವೇರಿಸಿದ್ದಾರೆ.  6809 ಕೋಟಿ ರೂ. ವೆಚ್ಚದ ಈ ಯೋಜನೆ ಶ್ರೀನಗರ, ಕಾರ್ಗಿಲ್‌ ಮತ್ತು ಲೇಹ್‌ ಮಧ್ಯದ ಪ್ರಯಾಣದ ಅಂತರವನ್ನು ಕಡಿಮೆ ಮಾಡಲಿದೆ. 5 ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳ್ಳ ಲಿದೆ. ಅಲ್ಲದೆ ಇದು ಸರ್ವಋತುವಿನಲ್ಲೂ ಕಾರ್ಯನಿರ್ವಹಿಸಲಿದೆ. ಶ್ರೀನಗರದಿಂದ ಲೇಹ್‌ಗೆ 3.5 ಗಂಟೆಗಳ ಪ್ರಯಾಣವನ್ನು ಇದು 15 ನಿಮಿಷಕ್ಕೆ ಇಳಿಸಲಿದೆ. ಒಟ್ಟು ಉದ್ದ 14.2 ಕಿ.ಮೀ ಆಗಿರಲಿದೆ.

ಏನೇನು ಕಾರ್ಯಕ್ರಮ?
ಕಾಶ್ಮೀರದ ಗುರೇಜ್‌ ಪ್ರದೇಶದಲ್ಲಿ ನಿರ್ಮಿಸಲಾದ 330 ಮೆ.ವ್ಯಾ ಕಿಶನ್‌ಗಂಗಾ ವಿದ್ಯುತ್‌ ಯೋಜನೆ  ಉದ್ಘಾಟನೆ
ಶ್ರೀನಗರ ರಿಂಗ್‌ ರೋಡ್‌ಗೂ ಮೋದಿ ಶಂಕುಸ್ಥಾಪನೆ. 42.1 ಕಿ.ಮೀ ಉದ್ದದ ನಾಲ್ಕು ಲೇನ್‌ನ ಶ್ರೀನಗರ ರಿಂಗ್‌ ರೋಡ್‌ ಪಶ್ಚಿಮ ಶ್ರೀನಗರದ ಗಲಂಧರ್‌ ಮತ್ತು ಬಡ್ನಿಪೋರಾ ಜಿಲ್ಲೆಯ ಸಂಬಾಲ್‌ಗೆ ಸಂಪರ್ಕ. ಶ್ರೀನಗರದ ವಾಹನ ದಟ್ಟಣೆ ಕಡಿಮೆ ಮಾಡುವಲ್ಲಿ ಮಹತ್ವದ ಯೋಜನೆ
ಏಷ್ಯಾದ ಅತಿ ಉದ್ದದ ಜೋಜಿಲಾ ಸುರಂಗ ನಿರ್ಮಾಣ ಕಾರ್ಯಕ್ಕೆ ಶಂಕುಸ್ಥಾಪನೆ

Advertisement

Udayavani is now on Telegram. Click here to join our channel and stay updated with the latest news.

Next