ಸೋಪೋರ್ : ಜಮ್ಮು ಕಾಶ್ಮೀರದ ಬಾರಾಮುಲ್ಲಾ ದಲ್ಲಿನ ಸೋಪೋರ್‌ನಲ್ಲಿ ಉಗ್ರರು ಸಿಡಿಸಿದ ಸುಧಾರಿತ ಸ್ಫೋಟಕದಿಂದಾಗಿ ಗಸ್ತು ಕರ್ತವ್ಯದಲ್ಲಿದ್ದ ಪೊಲೀಸರ ಪೈಕಿ ಮೂವರು ಮೃತಪಟ್ಟು ಇತರ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಇಂದು ಶನಿವಾರ ನಡದಿದೆ.
ಸೋಪೋರ್‌ನ ಜನನಿಬಿಡ ಮಾರುಕಟ್ಟೆ ಪ್ರದೇಶದಲ್ಲಿಂದು ಉಗ್ರರು ಅವಿತಿಟ್ಟಿದ್ದ ಸುಧಾರಿತ ಸ್ಫೋಟಕವನ್ನು ಅಂಗಡಿಯೊಂದರ ಪಕ್ಕದ ಓಣಿಯಲ್ಲಿ ಅವಿತಿರಿಸಿದ್ದರು. ಇದು ಬಾರಾಮುಲ್ಲಾದಲ್ಲಿನ ಸೋಪೋರ್‌ನ ಛೋಟಾ ಬಜಾರ್ ಮತ್ತು ಬಡಾ ಬಜಾರ್ ನಡುವಿರುವ ಜಾಗವಾಗಿದೆ.
ಉಗ್ರರು ಅವಿತಿಟ್ಟಿದ್ದ ಸ್ಫೋಟಕದ ಮೇಲೆ ಪೊಲೀಸರ ವಾಹನ ಹರಿದು ಹೋದಾಗ ಅದು ಸ್ಫೋಟಗೊಂಡಿತು. ಸ್ಫೋಟದ ಬಳಿಕ ಇಡಿಯ ಪ್ರದೇಶವನ್ನು ಪೊಲೀಸರು ಸುತ್ತುವರಿದಿದ್ದು ಶೋಧ ಕಾರ್ಯಾಚರಣೆ ಜಾರಿಯಲ್ಲಿದೆ.
ಗಾಯಾಳು ಪೊಲೀಸರನ್ನು ಸಮೀಪದ ಆಸ್ಪತ್ರೆಗೆ ಸೇರಿಸಲಾಗಿದೆ. ಈ ಪೊಲೀಸರು ಭಾರತೀಯ ಮೀಸಲು ಪೊಲೀಸ್ ಪಡೆಯ ಮೂರನೇ ಬೆಟಾಲಿಯನ್‌ಗೆ ಸೇರಿದವರಾಗಿದ್ದಾರೆ.
ಪ್ರತ್ಯೇಕತಾವಾದಿಗಳು ಇಂದು ಸೋಪೋರ್ ಬಂದ್ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಈ ಇಡಿಯ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಸ್ಫೋಟದಲ್ಲಿ ನಾಲ್ವರು ಪೊಲೀಸರು ಮೃತಪಟ್ಟಿರುವುದಕ್ಕೆ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು ಶೋಕ, ಸಂತಾಪ ವ್ಯಕ್ತಪಡಿಸಿದ್ದಾರೆ.