ಶ್ರೀನಗರ: ಜಮ್ಮು -ಕಾಶ್ಮೀರದಲ್ಲಿ ಬುಧವಾರ 2ನೇ ಹಂತದ ಮತದಾನ ನಡೆಯಲಿದೆ. 2ನೇ ಹಂತದಲ್ಲಿ 239 ಅಭ್ಯರ್ಥಿಗಳು ಕಣದಲ್ಲಿದ್ದು, 25 ಲಕ್ಷಕ್ಕೂ ಅಧಿಕ ಮತದಾರರು ತಮ್ಮ ಹಕ್ಕು ಚಲಾವಣೆ ಮಾಡಲಿದ್ದಾರೆ.
ಒಟ್ಟು 6 ಜಿಲ್ಲೆಗಳಲ್ಲಿ ಬುಧವಾರ ಮತದಾನ ನಡೆಯಲಿದ್ದು, ಕಾಶ್ಮೀರದ 3 ಹಾಗೂ ಜಮ್ಮು ವಲಯದ 3 ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ. ಒಟ್ಟು 3,502 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದ್ದು, ಇದರಲ್ಲಿ 1,056 ಮತಗಟ್ಟೆಗಳು ನಗರ ಪ್ರದೇಶದಲ್ಲಿದ್ದರೆ, 2,446 ಮತಗಟ್ಟೆಗಳು ಗ್ರಾಮೀಣ ಪ್ರದೇಶದಲ್ಲಿವೆ. ಅಲ್ಲದೇ ಮತದ ಪ್ರಮಾಣವನ್ನು ಹೆಚ್ಚಿಸಲು 157 ವಿಶೇಷ ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ.
370ನೇ ವಿಧಿ ರದ್ದತಿಯ ಬಳಿಕ ಇದೇ ಮೊದಲ ಬಾರಿಗೆ ಜಮ್ಮು-ಕಾಶ್ಮೀರದಲ್ಲಿ ಚುನಾವಣೆ ನಡೆಯುತ್ತಿದ್ದು, ಭದ್ರತೆಯ ದೃಷ್ಟಿಯಿಂದ 3 ಹಂತಗಳಲ್ಲಿ ಚುನಾವಣೆ ನಡೆಸಲಾಗುತ್ತಿದೆ.
ದಿಗ್ಗಜರ ಭವಿಷ್ಯ ಇಂದು ನಿರ್ಧಾರ
2ನೇ ಹಂತದ ಚುನಾವಣೆಯಲ್ಲಿ ಜಮ್ಮು-ಕಾಶ್ಮೀರದ ಮಾಜಿ ಸಿಎಂ ಒಮರ್ ಅಬ್ದುಲ್ಲಾ, ಕಾಂಗ್ರೆಸ್ ಅಧ್ಯಕ್ಷ ತಾರಿಖ್ ಹಮೀದ್ ಕರ್ರಾ ಮತ್ತು ಬಿಜೆಪಿ ಮುಖ್ಯಸ್ಥ ರವೀಂದ್ರ ರೈನಾ ಕಣ ದಲ್ಲಿದ್ದಾರೆ. ಜತೆಗೆ ಅಪ್ನಿ ಪಕ್ಷದ ಅಧ್ಯಕ್ಷ ಅಲ್ತಾಫ್ ಬುಕಾರಿ, ಮಾಜಿ ಸಚಿವರಾದ ಅಲಿ ಮೊಹಮ್ಮದ್ ಸಾಗರ್, ಅಬ್ದುಲ್ ರಹೀಮ್ ರಾಥರ್, ಚೌಧರಿ ಜುಲ್ಫಿಕರ್ ಅಲಿ, ಸಯ್ಯದ್ ಮುಷ್ತಾಕ್ ಬುಕಾರಿ ಕಣದಲ್ಲಿದ್ದಾರೆ. ಅಲ್ಲದೇ ಜೈಲು ಸೇರಿರುವ ಪ್ರತ್ಯೇಕತಾವಾದಿ ನಾಯಕ ಸರ್ಜನ್ ಅಹ್ಮದ್ ವಾಘೆ 2 ಕ್ಷೇತ್ರಗಳಲ್ಲಿ ಕಣಕ್ಕಿಳಿಯುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.