Advertisement

ಜೆಜೆಎಂ; ಬಹುತೇಕ ಕಾಮಗಾರಿ ಪೂರ್ಣ

05:16 PM May 29, 2022 | Team Udayavani |

ಬೈಲಹೊಂಗಲ: ಪ್ರತಿ ಮನೆಗೆ ಶುದ್ಧ ನೀರು ಪೂರೈಸುವ ಜಲಜೀವನ ಮಿಷನ್‌ ಯೋಜನೆ (ಜೆಜೆಎಂ) ಅನುಷ್ಠಾನ ಕಾರ್ಯ ತಾಲೂಕಿನಲ್ಲಿ ಪ್ರಗತಿ ಕಂಡು ಬಂದಿದೆ. ಗ್ರಾಪಂ ಸಿಬ್ಬಂದಿ, ಜನರ ಸಹಕಾರದಿಂದ ಶೇ.80 ಕಾಮಗಾರಿ ಪೂರ್ಣಗೊಂಡು ಕಾರ್ಯಕ್ರಮ ಅನುಷ್ಠಾನ ಸಮರ್ಪಕವಾಗಿ ನಡೆದಿದೆ.

Advertisement

ಕೇಂದ್ರ-ರಾಜ್ಯ ಸರ್ಕಾರಗಳ ಮಹತ್ವಾಕಾಂಕ್ಷಿ ಯೋಜನೆಯಾದ ಜೆಜೆಎಂ ಯೋಜನೆಗೆ ಸರ್ಕಾರಗಳು ಶೇ.37.5 ಅನುದಾನ ಕೊಡುತ್ತವೆ. ಉಳಿದ ಶೇ.25 ಅನುದಾನದಲ್ಲಿ ಶೇ.5 ಅನುದಾನ ಗ್ರಾಪಂಗಳು ತಮ್ಮ 15ನೇ ಹಣಕಾಸು ಆಯೋಗದ ಅಡಿಯಲ್ಲಿ ಪಾವತಿಸಬೇಕಿದೆ. ಉಳಿದ ಶೇ.10 ರಷ್ಟನ್ನು ಗ್ರಾಮಸ್ಥರು ವಂತಿಕೆಯಾಗಿ ನೀಡಬೇಕಿದೆ.

ಕಳೆದ ಮೂರಾಲ್ಕು ವರ್ಷಗಳ ಹಿಂದೆ ಭೀಕರ ಬರಗಾಲ, ಕೊರೊನಾ ಸಂದರ್ಭದಲ್ಲಿ ಬೇಸಿಗೆ ಕಾಲದಲ್ಲಿ ನೀರಿನ ಅಭಾವ ಕಂಡು ಬಂದಿತ್ತು. ತಾಲೂಕಿನ ಹೋಗರ್ತಿ, ಕೊಳ್ಳಾನಟ್ಟಿ ಮೊದಲಾದ ಗ್ರಾಮಗಳಲ್ಲಿ ನೀರಿನ ಅಭಾವ ಕಂಡು ಬಂದು ನೀರಿಗಾಗಿ ಹೊಡೆದಾಟಗಳು ನಡೆದಿದ್ದವು. ಅಲ್ಲದೇ ಬೈಲಹೊಂಗಲದ ಜಿಪಂ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ದಿನಾಲು ಸಾವಿರಾರು ಜನರು ಫೋನ್‌ ಮೂಲಕ ನೀರಿನ ಸಮಸ್ಯೆ ಬಗ್ಗೆ ಅಳಲು ತೋಡಿಕೊಳ್ಳುತ್ತಿದ್ದರು. ಆದರೆ ಕಳೆದ ನಾಲ್ಕು ವರ್ಷಗಳಿಂದ ಉತ್ತಮ ಮಳೆಯಾದ್ದರಿಂದ ಎಲ್ಲಿಯೂ ಬೇಸಿಗೆ ಕಾಲದಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಸಿದ ನಿದರ್ಶನಗಳಿಲ್ಲ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಾರಂಭದಲ್ಲಿ ತೊಂದರೆ: ತಾಲೂಕಿನಲ್ಲಿ ಅಷ್ಟೇ ಏಕೆ ಜಿಲ್ಲೆಯಲ್ಲಿ ಅನುಷ್ಠಾನದ ಪ್ರಾರಂಭದಲ್ಲಿ ಕೇವಲ ನೆಲ ಅಗೆದು ಯೋಜನೆ ಸಂಪೂರ್ಣವಾಯಿತೆಂದು ಸುಳ್ಳು ಲೆಕ್ಕ ತೋರಿಸುತ್ತಾರೆಂದು ಹಲವರು ಆಡಿಕೊಂಡರು. ಕೆಲವೆಡೆ ಕಿಡಿಗೇಡಿಗಳು ಪೈಪ್‌ಲೈನ್‌ ಒಡೆದು ಹಾಳು ಮಾಡಿ ಯೋಜನೆಗೆ ಕೆಟ್ಟ ಹೆಸರು ಬರುವಂತೆ ನೋಡಿಕೊಳ್ಳಲಾಯಿತು. ಆದರೆ ಉತ್ತಮ ಅಧಿ ಕಾರಿಗಳು, ಗ್ರಾಪಂ ಸದಸ್ಯರ ಸಹಕಾರದಿಂದ ತಾಲೂಕಿನಲ್ಲಿ ಯೋಜನೆ ಸಾಕಾರಗೊಳ್ಳಲು ಮಾರ್ಗ ತೋರಿಸಿದೆ. ಇದೊಂದು ಯಶಸ್ವಿ ಹಂತಕ್ಕೆ ಬರಲು ಪ್ರತಿಯೊಬ್ಬರ ಕಾರ್ಯ ಶ್ಲಾಘಿಸಬೇಕಿದೆ.

Advertisement

 43 ಗ್ರಾಮಗಳಲ್ಲಿ ಯಶಸ್ವಿ ಯೋಜನೆ: ತಾಲೂಕಿನ 43 ಗ್ರಾಮಗಳಲ್ಲಿ ಯಶಸ್ವಿಯಾಗಿ ಯೋಜನೆಗೆ ಚಾಲನೆ ದೊರಕಿ ಕೆಲಸ ಮುಕ್ತಾಯ ಹಂತದಲ್ಲಿದೆ. ರಸ್ತೆ ಅಗೆದು ಪೈಪ್‌ಲೈನ್‌ ಅಳವಡಿಕೆ ಕೆಲಸದ ವೇಗ ಹೆಚ್ಚಿಸಿದೆಯಲ್ಲದೇ ಬಹುತೇಕ ಗ್ರಾಮಗಳಲ್ಲಿ ನೀರು ಪಡೆಯುವ ಸನ್ನಿವೇಶ ಕಂಡು ಬರುತ್ತದೆ. 43 ಹಳ್ಳಿಗಳಲ್ಲಿ ಯೋಜನೆ ಫಲಕಾರಿಯಾಗಿದ್ದು, ಒಟ್ಟಾರೆ 5120.29 ಲಕ್ಷ ರೂ. ಬಿಡುಗಡೆಯಾಗಿದ್ದು, ಅದರಲ್ಲಿ ಇಲ್ಲಿಯವರೆಗೆ 3182.29 ಲಕ್ಷ ರೂ. ಕಾರ್ಯ ನಡೆದಿದೆ. ತಾಲೂಕಿನಲ್ಲಿ 35,394 ಗ್ರಾಮಗಳಲ್ಲಿ ನಲ್ಲಿ ನೀರು ಒದಗಿಸಲಾಗಿದೆ. ಕಳೆದ ವರ್ಷ 40 ಹಳ್ಳಿಗಳನ್ನು ಯೋಜನೆ ಅನುಷ್ಠಾನಗೊಳಿಸಿದ್ದು, ಈ ಬಾರಿ 43 ಹಳ್ಳಿಗಳನ್ನು ಒಳಪಡಿಸಿದ್ದು ತಾಲೂಕಿನ 88 ಹಳ್ಳಿಗಳಲ್ಲಿ 5 ಹಳ್ಳಿಗಳಲ್ಲಿ ಮಾತ್ರ ಯೋಜನೆ ಅನುಷ್ಠಾನದ ಬಾಕಿ ಇದೆ. ಕೆಲವೆಡೆ ಸರ್ಕಾರದ ಅನುಮೋದನೆಗಾಗಿ ನೀರಿಕ್ಷಿಸಲಾಗುತ್ತಿದೆ. ಮುರಕೀಭಾವಿಯಲ್ಲಿ ಪೈಪ್‌ಲೈನ್‌ನಿಂದ ನೀರು ಹರಿಸುವ್‌ ಕಾರ್ಯ ಪ್ರಾಯೋಗಿಕವಾಗಿದ್ದು, ಮುರಕೀಬಾವಿ ಗ್ರಾಮಕ್ಕೆ 151.58 ಲಕ್ಷ ರೂ. ಅನುದಾನ ಲಭಿಸಿದೆ. ಅದರಲ್ಲಿ 105.86 ಲಕ್ಷ ರೂ. ವ್ಯಯ ಮಾಡಲಾಗಿದೆ. 738 ಮನೆಗಳಿಗೆ ಇದರಿಂದ ಅನುಕೂಲವಾಗಿದೆ ಎಂದು ಗ್ರಾಪಂ ಪಿಡಿಒ ರಮೇಶ ನಂದಿಹಳ್ಳಿ ತಿಳಿಸಿದ್ದಾರೆ.

ಸಂಗೊಳ್ಳಿಯಲ್ಲಿ ಪೈಪ್‌ಲೈನ್‌ನಿಂದ ನೀರು ಹರಿಸುವ ಕಾರ್ಯ ನಡೆಸಿದ್ದು, ಈ ಗ್ರಾಮಕ್ಕೆ 245 ಲಕ್ಷ ರೂ. ಅನುದಾನ ಲಭಿಸಿದೆ. ಅದರಲ್ಲಿ 193.79 ಲಕ್ಷ ರೂ. ವ್ಯಯ ಮಾಡಲಾಗಿದೆ. 1007 ಮನೆಗಳಿಗೆ ಇದರಿಂದ ಅನುಕೂಲವಾಗಿದೆ ಎಂದು ಗ್ರಾಪಂ ಸದಸ್ಯ ಬಸವರಾಜ ಕೊಡ್ಲಿ ಉದಯವಾಣಿಗೆ ಮಾಹಿತಿ ನೀಡಿದ್ದಾರೆ.

ತಾಲೂಕಿನಲ್ಲಿ ಜಲಜೀವನ್‌ ಮಿಷನ್‌ ಯೋಜನೆ ಅನುಷ್ಠಾನ ಕಾರ್ಯ ಉತ್ತಮ ರೀತಿಯಲ್ಲಿ ನಡೆದಿದ್ದು ಎಲ್ಲರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಪ್ರತಿಯೊಂದು ಹಳ್ಳಿಯ ಮನೆಗೂ ನೀರು ಸಿಗುವ ನಿಟ್ಟಿನಲ್ಲಿ ಶ್ರಮಿಸಲಾಗುತ್ತಿದೆ. ಎಸ್‌.ಕೆ. ಮೂಗಸಜ್ಜಿ, ಎಇಇ, ಜಿ.ಪಂ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ, ಬೈಲಹೊಂಗಲ        

– ಸಿ.ವೈ. ಮೆಣಶಿನಕಾಯಿ

Advertisement

Udayavani is now on Telegram. Click here to join our channel and stay updated with the latest news.

Next