Advertisement

ಜಿಯೋ ಫೋನ್‍ ನೆಕ್ಸ್ಟ್: ಕೀಪ್ಯಾಡ್‍ ಫೋನಿನಿಂದ ಬಡ್ತಿ

05:05 PM Feb 10, 2022 | Team Udayavani |

ರಿಲಯನ್ಸ್ ಜಿಯೋ ಕಂಪೆನಿ ತನ್ನ ಜಿಯೋ ನೆಟ್‍ ವರ್ಕ್ ಮೂಲಕ ಕಡಿಮೆ ಬೆಲೆಗೆ ಡಾಟಾ ನೀಡಿ ಹೆಚ್ಚು ಚಂದಾದಾರರನ್ನು ಹೊಂದಿದ ಸಾಧನೆ ಮಾಡಿದೆ. ಗ್ರಾಮೀಣ ಪ್ರದೇಶದ ಜನರೂ ಇಂಟರ್‍ ನೆಟ್‍ ಬಳಕೆ ಮಾಡುವ ನಿಟ್ಟಿನಲ್ಲಿ ಜಿಯೋ ಕೊಡುಗೆ ಹೆಚ್ಚಿನದು. ಬಡ ಜನರು ಕೀ ಪ್ಯಾಡ್‍ ಫೋನಿನಿಂದ ಸ್ಮಾರ್ಟ್ ಫೋನ್‍ ಬಳಕೆಯತ್ತ ತರುವ ಉದ್ದೇಶದಿಂದ ಬೇಸಿಕ್‍ ಸ್ಮಾರ್ಟ್ ಫೋನನ್ನು ಕೆಲ ದಿನಗಳ ಹಿಂದೆ ಹೊರ ತಂದಿತು. ಅದು ಜಿಯೋ ಫೋನ್‍ ನೆಕ್ಸ್ಟ್.

Advertisement

ಈ ಫೋನು ಕೀ ಪ್ಯಾಡ್‍ ಮೊಬೈಲ್‍ ಬಳಸುತ್ತಿದ್ದು ಅದರಿಂದ ಬಡ್ತಿ ಹೊಂದಿ ಟಚ್‍ ಸ್ಕ್ರೀನ್‍ ಮೊಬೈಲ್‍ ಬಳಸುವವರಿಗಾಗಿ ಜಿಯೋ ಹಾಗೂ ಗೂಗಲ್‍ ಸಹಭಾಗಿತ್ವದಲ್ಲಿ ತಯಾರಿಸಿರುವಂಥದ್ದು.

ಇದರ ದರ 6500 ರೂ. ಇದೆ. ಅಮೆಜಾನ್‍. ಇನ್‍ ನಲ್ಲಿ 5890 ರೂ. ದರವಿದೆ. ಜಿಯೋ ಸ್ಟೋರ್ ಗಳಲ್ಲಿ, ಇನ್ನಿತರ ಮೊಬೈಲ್‍ ಮಾರಾಟಗಾರರಲ್ಲಿ ದೊರಕುತ್ತದೆ.  ಇದರಲ್ಲಿ ಎರಡು ಸಿಮ್‍ ಹಾಕಬಹುದು. ಆದರೆ ಒಂದು ಸಿಮ್‍ ಕಡ್ಡಾಯವಾಗಿ ಜಿಯೋ ಇರಲೇಬೇಕು! ಇನ್ನೊಂದು ಸಿಮ್‍ ಬೇರೆಯ ಕಂಪೆನಿಯದ್ದು ಬಳಸಬಹುದು. ಆದರೆ ಅದರಲ್ಲಿ ಡಾಟಾ ಕೆಲಸ ಮಾಡುವುದಿಲ್ಲ!  ಬೇರೆ ಸಿಮ್‍ ಅನ್ನು ಕೇವಲ ಕರೆ ಮಾಡಲು ಬಳಸಬಹುದು. ಜಿಯೋ ನೆಟ್‍ ವರ್ಕ್ ಇರುವುದು 4ಜಿ ಯಲ್ಲಿ ಮಾತ್ರವಾದ್ದರಿಂದ ಇದು 4ಜಿ ಫೋನ್‍ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಪ್ರಗತಿ ಓಎಸ್: ಈ ಆರಂಭಿಕ ದರ್ಜೆಯ ಫೋನ್‍ ಗಾಗಿ ಜಿಯೋ ಮತ್ತು ಗೂಗಲ್‍ ಜೊತೆಗೂಡಿ ಇದಕ್ಕಾಗೇ ಪ್ರಗತಿ ಓಎಸ್‍ ಅನ್ನು ರೂಪಿಸಿವೆ. ಈ ಪ್ರಗತಿ ಓಎಸ್‍ ಎಂದರೆ ಹೆಚ್ಚು ಕಡಿಮೆ ಅಂಡ್ರಾಯ್ಡ್ ಗೋ ರೀತಿಯೇ ಇದೆ. ಸ್ಟಾಕ್‍ ಆಂಡ್ರಾಯ್ಡ್ ಫೋನನ್ನೇ ಹೋಲುತ್ತದೆ. ಗೂಗಲ್‍ ಪ್ಲೇ ಸ್ಟೋರ್ ಸೇರಿದಂತೆ ಗೂಗಲ್‍ನ  ಆಪ್‍ ಗಳಿವೆ. ಪ್ಲೇ ಸ್ಟೋರ್ ಮೂಲಕ ಬೇಕಾದ ಆಪ್‍ ಡೌನ್ ಲೋಡ್‍ ಮಾಡಿಕೊಳ್ಳಬಹುದು.

ಇದನ್ನೂ ಓದಿ:ಯೂಟ್ಯೂಬ್ ನಲ್ಲಿ ಸಬ್‌ಸ್ಕ್ರೈಬರ್ ಸಂಖ್ಯೆಯನ್ನು ಹೈಡ್ ಮಾಡುವುದು ಹೇಗೆ?

Advertisement

ಗೂಗಲ್‍ ಟ್ರಾನ್ಸ್ ಲೇಟ್‍ ಅನ್ನು ಕ್ಯಾಮರಾ ಜೊತೆ ಅಂತರ್ಗತ ಮಾಡಲಾಗಿದೆ.  ಈ ಫೋನಿನ ಕ್ಯಾಮರಾವನ್ನು ಇಂಗ್ಲಿಷ್‍ ಪಠ್ಯದ ಮೇಲೆ ಹಿಡಿದು, ಕನ್ನಡ ಆಯ್ಕೆ ಮಾಡಿದರೆ ಇಂಗ್ಲಿಷ್‍ ನಿಂದ ಕನ್ನಡಕ್ಕೆ ಆ ಪಠ್ಯವನ್ನು ಅನುವಾದ ಮಾಡಿ ಪ್ರದರ್ಶಿಸುತ್ತದೆ. ಬೇಕೆಂದರೆ ಆ ಪಠ್ಯವನ್ನು ಧ್ವನಿಯ ಮೂಲಕವೂ ಆಲಿಸಬಹುದು. 10 ಭಾರತೀಯ ಭಾಷೆಗಳಿಗೆ ಈ ಅನುವಾದ ಮಾಡಬಹುದು.  ಕ್ಯಾಮರಾ ಮಾತ್ರವಲ್ಲದೇ, ನೀವು ಯಾವುದೇ ಇಂಗ್ಲಿಷ್‍ ಅಥವಾ ಬೇರೆ ಭಾಷೆಯ ಪಠ್ಯ ನೋಡಿದಾಗ, ಅದನ್ನು ನಿಮಗೆ ಬೇಕಾದ ಭಾಷೆಯಲ್ಲಿ ಅನುವಾದ ಮಾಡುತ್ತದೆ. ಅದನ್ನು ಓದಬಹುದು, ಧ್ವನಿ ಆಯ್ಕೆ ಮಾಡಿದರೆ ಕೇಳಬಹುದು.

ಪರದೆ ಮತ್ತು ದೇಹದ ವಿನ್ಯಾಸ: ಇದು 5.45 ಇಂಚಿನ ಎಚ್‍. ಡಿ. ಪ್ಲಸ್‍ ಪರದೆ ಹೊಂದಿದೆ. ಕಾರ್ನಿಂಗ್‍ ಗೊರಿಲ್ಲಾ ಗ್ಲಾಸ್‍ 3 ರಕ್ಷಣೆ ಇದೆ. ಫೋನಿನ ಪರದೆಯ ಮೇಲೆ ಮತ್ತು ಕೆಳಗೆ ಹಿಂದಿನ ಜನರೇಷನ್‍ನ ಫೋನ್‍ ಗಳ ರೀತಿ ದೊಡ್ಡ ಬೆಜಲ್‍ ಗಳಿವೆ. ಇಡೀ ಫೋನ್‍ ಪ್ಲಾಸ್ಟಿಕ್‍ ದೇಹ ಹೊಂದಿದೆ.

ಹಿಂಬದಿಯ ಪ್ಲಾಸ್ಟಿಕ್‍ ಪ್ಯಾನೆಲ್‍ ಅನ್ನು ತೆಗೆಯಬಹುದಾಗಿದೆ. (ತೆಗೆಯಲೇಬೇಕು!) ಬ್ಯಾಟರಿ ಸಹ ತೆಗೆದು ಹಾಕಬಹುದು. ಹಿಂಬದಿಯ ಪ್ಯಾನೆಲ್‍ ತೆಗೆದು ಸಿಮ್‍, ಮೆಮೊರಿ ಕಾರ್ಡ್ ಹಾಕಬೇಕು. ಇದೊಂಥರ ಕೀಪ್ಯಾಡ್‍ ಇಲ್ಲದ, ಆದರೆ ಕೀಪ್ಯಾಡ್‍ ಫೋನಿನ ಇನ್ನೆಲ್ಲ ಅಂಶಗಳನ್ನು ಒಳಗೊಂಡಿದೆ!

ಪ್ರೊಸೆಸರ್ ರ್ಯಾಮ್‍: ಇದರಲ್ಲಿರುವು ಸ್ನಾಪ್‍ ಡ್ರಾಗನ್‍ 215 ಪ್ರೊಸೆಸರ್‍.  ಇದು ಅತ್ಯಂತ ಆರಂಭಿಕ ದರ್ಜೆಯ ಪ್ರೊಸೆಸರ್‍. ಕಡಿಮೆ ದರದ ಫೋನ್‍ ಗಾಗಿಯೇ ತಯಾರಿಸಿರುವುದು. ಹೆಚ್ಚಿನ ವೇಗವನ್ನು ನಿರೀಕ್ಷಿಸುವಂತಿಲ್ಲ. ಆಗಾಗ ಸ್ವಲ್ಪ ನಿಧಾನ ಚಲನೆ ಕಂಡು ಬರುತ್ತದೆ. ಇದು ಆರಂಭಿಕ ದರ್ಜೆಯ ಫೋನಿನಲ್ಲಿ ಸ್ವಾಭಾವಿಕ. ಒಂದು ಸಾಧಾರಣ ಬಳಕೆಗೆ ಸೂಕ್ತವಾಗಿದೆ. 2 ಜಿಬಿ ರ್ಯಾಮ್‍ ಹಾಗೂ 32 ಜಿಬಿ ಆಂತರಿಕ ಮೆಮೊರಿ ಹೊಂದಿದೆ. ಈ ದರಕ್ಕೆ 32 ಜಿಬಿ ಆಂತರಿಕ ಸಂಗ್ರಹ ಹೊಂದಿರುವುದು ಪ್ಲಸ್‍ ಪಾಯಿಂಟ್‍. ಮೆಮೊರಿ ಇನ್ನೂ ಹೆಚ್ಚು ಬೇಕೆಂದರೆ ಮೈಕ್ರೋ ಎಸ್‍ಡಿ ಕಾರ್ಡ್ ಹಾಕಿಕೊಳ್ಳಬಹುದು.

ಕ್ಯಾಮರಾ, ಬ್ಯಾಟರಿ: ಹಿಂಬದಿ 13 ಮೆಗಾಪಿಕ್ಸಲ್‍, ಮುಂಬದಿ 8 ಮೆಗಾಪಿಕ್ಸಲ್‍ ಕ್ಯಾಮರಾ ಇದೆ. 3400 ಎಂಎಎಚ್‍ ಬ್ಯಾಟರಿ ಹೊಂದಿದೆ. ಇದಕ್ಕೆ ಮೈಕ್ರೋ ಯುಎಸ್‍ ಬಿ ಚಾರ್ಜರ್ ನೀಡಲಾಗಿದೆ. ಬ್ಯಾಟರಿ ಬಾಳಿಕೆ ಒಂದು ದಿನಕ್ಕೂ ಮೀರಿ ಬರುತ್ತದೆ.

ಇದೊಂದು ಆರಂಭಿಕ ದರ್ಜೆಯ ಫೋನ್‍. ಇದರಲ್ಲಿ ಹೆಚ್ಚಿನದನ್ನು ಬಳಕೆದಾರರು ಅಪೇಕ್ಷಿಸುವಂತಿಲ್ಲ. ಕಾಸಿಗೆ ತಕ್ಕ ಕಜ್ಜಾಯ ಎಂಬಂತೆ ಕಡಿಮೆ ದರಕ್ಕೆ ತಕ್ಕನಾಗಿದೆ. ಜಿಯೋ ಕಂಪೆನಿ ಇದರ ದರವನ್ನು 5 ಸಾವಿರ ಅಥವಾ 5,500 ರೂ. ಗೆ ನಿಗದಿಗೊಳಿಸಿದರೆ ಈ ದರಕ್ಕೆ ಇದು ಒಂದು ಉತ್ತಮ ಫೋನ್‍ ಎನ್ನಬಹುದು.

-ಕೆ. ಎಸ್‍. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next