Advertisement

ಜಿಂದಾಲ್‌; “ಕೈ’ನಾಯಕರ ಸಂಧಾನ ವಿಫ‌ಲ

11:11 PM Jun 08, 2019 | Team Udayavani |

ಬೆಂಗಳೂರು: ಜಿಂದಾಲ್‌ ಸಂಸ್ಥೆಗೆ 3,667 ಎಕರೆ ಜಮೀನು ಮಾರಾಟ ಮಾಡಿರುವ ಪ್ರಕರಣದಲ್ಲಿ ರಾಜ್ಯ ಕಾಂಗ್ರೆಸ್‌ ನಾಯಕರ ಸಂಧಾನ ಸಭೆ ವಿಫ‌ಲವಾಗಿದೆ.

Advertisement

ಜಮೀನು ಮಾರಾಟಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್‌.ಕೆ. ಪಾಟೀಲ್‌ ಹಾಗೂ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್‌ ಜತೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಸತತ ಎರಡು ಗಂಟೆ ಮಾತುಕತೆ ನಡೆಸಿದರು.

ಎಚ್‌.ಕೆ.ಪಾಟೀಲ್‌ ರಾಜ್ಯದ ಹಿತದೃಷ್ಟಿಯಿಂದ ಸರ್ಕಾರದ ನಿರ್ಧಾರ ವಾಪಸ್‌ ಪಡೆಯುವಂತೆ ಪಟ್ಟು ಹಿಡಿದಿರುವುದರಿಂದ ಭಾನುವಾರ ಮುಖ್ಯಮಂತ್ರಿ ಜತೆ ಚರ್ಚಿಸಿ ಮುಂದಿನ ನಿರ್ಧಾರ ತಿಳಿಸುವುದಾಗಿ ಸಚಿವ ಜಾರ್ಜ್‌ ಭರವಸೆ ನೀಡಿದ್ದಾರೆಂದು ತಿಳಿದು ಬಂದಿದೆ.

ಇಬ್ಬರೂ ಪಕ್ಷದ ಹಿರಿಯ ನಾಯಕರನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅಸಹಾಯಕತೆಯಿಂದಲೇ ಮನವೊಲಿಸುವ ಯತ್ನ ನಡೆಸಿದ್ದಾರೆ. ಪಕ್ಷದ ಹಿರಿಯ ನಾಯಕರಾಗಿ ನೀವೇ ಈ ರೀತಿ ಬಹಿರಂಗವಾಗಿ ಪತ್ರ ಬರೆಯುವುದರಿಂದ ಸರ್ಕಾರ ಹಾಗೂ ಪಕ್ಷಕ್ಕೆ ಮುಜುಗರ ಉಂಟಾಗುತ್ತದೆ. ಬಿಜೆಪಿಯವರು ಇದನ್ನೇ ದೊಡ್ಡ ಅಸ್ತ್ರವಾಗಿ ಮಾಡಿಕೊಳ್ಳುತ್ತಾರೆ.

ಹೀಗೇಕೆ ಮಾಡಿದೀರಿ ಎಂದು ದಿನೇಶ್‌ ಗುಂಡೂರಾವ್‌ ಎಚ್‌.ಕೆ.ಪಾಟೀಲರನ್ನು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಎಚ್‌.ಕೆ. ಪಾಟೀಲ್‌ ತಾವು ಬಹಿರಂಗ ಪತ್ರ ಬರೆದಿರುವುದನ್ನು ಸಮರ್ಥಿಸಿಕೊಂಡಿದ್ದು, ಜಿಂದಾಲ್‌ ಸಂಸ್ಥೆಯ ಮೇಲೆ ಕ್ರಿಮಿನಲ್‌ ಆರೋಪವಿದೆ.

Advertisement

ಅಲ್ಲದೇ ರಾಜ್ಯ ಸರ್ಕಾರಕ್ಕೆ ಸುಮಾರು 2 ಸಾವಿರ ಕೋಟಿ ರೂಪಾಯಿ ಬಾಕಿ ಹಣ ಕೊಡಬೇಕಿದೆ. ಅಂತಹ ಸಂಸ್ಥೆಗೆ ಕೇವಲ 1.22 ಲಕ್ಷ ರೂಪಾಯಿಗೆ ಒಂದು ಎಕರೆಯಂತೆ 3,667 ಎಕರೆ ಜಮೀನು ಮಾರಾಟ ಮಾಡಿದರೆ, ರಾಜ್ಯದ ಜನತೆಗೆ ಯಾವ ಸಂದೇಶ ರವಾನೆಯಾಗುತ್ತದೆ?. ಇದು ಕಾಂಗ್ರೆಸ್‌ ಪಕ್ಷದ ನಡೆಯ ಬಗ್ಗೆ ಜನರಿಗೆ ಅನುಮಾನ ಮೂಡುವಂತೆ ಮಾಡುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆಂದು ತಿಳಿದು ಬಂದಿದೆ.

ಸಚಿವ ಜಾರ್ಜ್‌ ಕೂಡ ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿಲುವಿನ ಬಗ್ಗೆ ಸಮರ್ಥನೆ ಮಾಡಿಕೊಂಡಿದ್ದು, ಸರ್ಕಾರದ ಅಡ್ವೋಕೇಟ್‌ ಜನರಲ್‌ ಅವರ ಅಭಿಪ್ರಾಯ ಪಡೆದುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈಗಾಗಲೇ ಅವರಿಗೆ ಲೀಸ್‌ ನೀಡಿರುವ 10 ವರ್ಷದ ಅವಧಿ ಮುಕ್ತಾಯವಾಗಿರುವುದರಿಂದ ಕಾನೂನು ಪ್ರಕಾರ ಆ ಸಂಸ್ಥೆಗೆ ಜಮೀನು ಮಾರಾಟ ಮಾಡಿಕೊಡಬೇಕಾಗುತ್ತದೆ.

ಅದನ್ನೇ ಈಗ ಸರ್ಕಾರ ಮಾಡಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಆದರೆ, ಜಿಂದಾಲ್‌ ಸಂಸ್ಥೆಯಿಂದ ಸರ್ಕಾರಕ್ಕೆ ಯಾವುದೇ ಬಾಕಿ ಬರಬೇಕಿಲ್ಲ. ಸಂಸ್ಥೆಯ ವಿರುದ್ಧ ಯಾವುದೇ ತನಿಖೆ ನಡೆಯುತ್ತಿಲ್ಲ ಎಂದು ಸಚಿವ ಜಾರ್ಜ್‌ ಅವರು ಪತ್ರಿಕಾಗೋಷ್ಠಿ ನಡೆಸಿ ಸಮರ್ಥಿಸಿಕೊಂಡಿರುವುದಕ್ಕೆ ಎಚ್‌.ಕೆ. ಪಾಟೀಲ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಿಮ್ಮ ಸಮರ್ಥನೆಯಿಂದ ಕಾಂಗ್ರೆಸ್‌ ವರ್ಚಸ್ಸಿಗೆ ಧಕ್ಕೆಯಾಗುತ್ತದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಇಬ್ಬರೂ ನಾಯಕರು ತಮ್ಮ ವಾದಕ್ಕೆ ಪಟ್ಟು ಹಿಡಿದಿದ್ದರಿಂದ ದಿನೇಶ್‌ ಗುಂಡೂರಾವ್‌ ಅಸಹಾಯಕರಾಗಿದ್ದಾರೆ. ಮೈತ್ರಿ ಸರ್ಕಾರ ಹಾಗೂ ಪಕ್ಷದ ಹಿತದೃಷ್ಠಿಯಿಂದ ಬಹಿರಂಗ ಹೇಳಿಕೆ ಹಾಗೂ ಪತ್ರ ಬರೆದು ಮುಜುಗರಕ್ಕೀಡು ಮಾಡುವ ಬದಲು ಪಕ್ಷದ ವೇದಿಕೆಯಲ್ಲಿ ಚರ್ಚಿಸಿ, ಬಗೆಹರಿಸಿಕೊಳ್ಳುವುದು ಉತ್ತಮ ಎಂಬ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಎಚ್‌.ಕೆ. ಪಾಟೀಲರು ತಮ್ಮ ನಿಲುವಿಗೆ ಬದ್ದರಾಗಿದ್ದರಿಂದ ಭಾನುವಾರ ಮುಖ್ಯಮಂತ್ರಿ ಕುಮಾರಸ್ವಾಮಿ ಜೊತೆಗೆ ಚರ್ಚಿಸಿ ಅಂತಿಮ ನಿರ್ಧಾರ ತಿಳಿಸುವುದಾಗಿ ಸಚಿವ ಜಾರ್ಜ್‌ ಭರವಸೆ ನೀಡಿದ್ದಾರೆ.

ನನ್ನ ಅಭಿಪ್ರಾಯಗಳನ್ನು ಸಚಿವ ಕೆ.ಜೆ.ಜಾರ್ಜ್‌ ಮತ್ತು ದಿನೇಶ್‌ ಗುಂಡೂರಾವ್‌ ಎದುರು ಹೇಳಿದ್ದೇನೆ. ಜಾರ್ಜ್‌ ಕೂಡ ತಮ್ಮ ಅಭಿಪ್ರಾಯ ಹೇಳಿದ್ದಾರೆ. ಸರ್ಕಾರದ ಹಿತ ಗಮನದಲ್ಲಿಟ್ಟುಕೊಂಡು ಮೈತ್ರಿ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಭಾನುವಾರ ಮುಖ್ಯಮಂತ್ರಿಯವರ ಜತೆ ಚರ್ಚೆ ಮಾಡುತ್ತೇವೆ.
-ಎಚ್‌.ಕೆ. ಪಾಟೀಲ್‌, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ

ಜಿಂದಾಲ್‌ ವಿಚಾರವಾಗಿ ನಾನು ಹಾಗೂ ಎಚ್‌.ಕೆ. ಪಾಟೀಲ್‌ ಕೆಪಿಸಿಸಿ ಅಧ್ಯಕ್ಷರ ಸಮ್ಮುಖದಲ್ಲಿ ಸಾಕಷ್ಟು ಚರ್ಚೆ ಮಾಡಿದ್ದೇವೆ. ಇಬ್ಬರೂ ಭಾನುವಾರ ಮುಖ್ಯಮಂತ್ರಿ ಕುಮಾರಸ್ವಾಮಿಯನ್ನು ಭೇಟಿ ಮಾಡಲಿದ್ದೇವೆ. ಮುಖ್ಯಮಂತ್ರಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ.
-ಕೆ.ಜೆ.ಜಾರ್ಜ್‌, ಕೈಗಾರಿಕಾ ಸಚಿವ

ಜಿಂದಾಲ್‌ಗೆ ಜಮೀನು ಮಾರಾಟ ಮಾಡಿರುವ ವಿಷಯದಲ್ಲಿ ಎಚ್‌.ಕೆ. ಪಾಟೀಲರಿಗೆ ಇದ್ದ ಅನುಮಾನಗಳಿಗೆ ಸಚಿವ ಜಾರ್ಜ್‌ ಸ್ಪಷ್ಟನೆ ನೀಡಿದ್ದಾರೆ. ರಾಜ್ಯದ ಹಿತದೃಷ್ಟಿಯಿಂದ ಚರ್ಚೆ ನಡೆದಿದೆ. ಇದು ಭಿನ್ನಾಭಿಪ್ರಾಯವೂ ಅಲ್ಲ. ಸಂಧಾನವೂ ಅಲ್ಲ.
-ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next