Advertisement

ಜಿಂದಾಲ್‌ಗಿಲ್ಲ ಜಮೀನು

12:15 AM May 28, 2021 | Team Udayavani |

ಬೆಂಗಳೂರು: ಬಳ್ಳಾರಿಯ ಜಿಂದಾಲ್‌ ಸಂಸ್ಥೆಗೆ ಕಡಿಮೆ ದರದಲ್ಲಿ ಜಮೀನು ಪರಭಾರೆ ಮಾಡುವ ನಿರ್ಧಾರವನ್ನು ರಾಜ್ಯ ಸರಕಾರ ಕೈಬಿಟ್ಟಿದೆ. ಬಿಜೆಪಿ ವರಿಷ್ಠರ ಸೂಚನೆಯ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Advertisement

ಎ. 26ರಂದು ಸಿಎಂ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಜಿಂದಾಲ್‌ಗೆ 3,667 ಎಕರೆ ಜಮೀನನ್ನು ಮಾರಾಟ ಮಾಡುವ ನಿರ್ಧಾರ ತೆಗೆದು ಕೊಳ್ಳಲಾಗಿತ್ತು. ಕೆಲವು ಬಿಜೆಪಿ ಶಾಸಕರಿಂದಲೇ ಇದಕ್ಕೆ ವಿರೋಧ ವ್ಯಕ್ತವಾಗಿತ್ತು.

ದಿಲ್ಲಿ ವರಿಷ್ಠರ ಸೂಚನೆ :

ಕಡಿಮೆ ದರಕ್ಕೆ ಭೂಮಿ ನೀಡುವುದನ್ನು ತಡೆಹಿಡಿದಿರುವ ನಿರ್ಧಾರದ ಹಿಂದೆ ಬಿಜೆಪಿ ವರಿಷ್ಠರ ಸೂಚನೆ ಇದೆ ಎನ್ನಲಾಗುತ್ತಿದೆ. ಶಾಸಕ ಅರವಿಂದ ಬೆಲ್ಲದ ನೇತೃತ್ವದಲ್ಲಿ ಸುಮಾರು 15ಕ್ಕೂ ಹೆಚ್ಚು ಶಾಸಕರು ವರಿಷ್ಠರಿಗೆ ಈ ಬಗ್ಗೆ ದೂರು ಸಲ್ಲಿಸಿದ್ದರು. ಇತ್ತೀಚೆ ಗಷ್ಟೇ ಅರವಿಂದ ಬೆಲ್ಲದ ಅವರು ದಿಲ್ಲಿಗೆ ತೆರಳಿ ವರಿಷ್ಠರ ಮೇಲೆ ಒತ್ತಡ ಹೇರಿದ್ದರು ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಜಿಂದಾಲ್‌ಗೆ ಜಮೀನು ನೀಡಿರುವ ತೀರ್ಮಾನ ಕೈಬಿಡುವಂತೆ ವರಿಷ್ಠರು ಸಿಎಂ ಯಡಿಯೂರಪ್ಪ ಅವರಿಗೆ ಸೂಚನೆ ನೀಡಿದ್ದರು ಎಂದು ತಿಳಿದುಬಂದಿದೆ.

ಕೋರ್ಟ್‌ ತೀರ್ಪಿನ ಬಳಿಕ ನಿರ್ಧಾರ :

Advertisement

ಹಿಂದೆ ಜಿಂದಾಲ್‌ಗೆ ಜಮೀನು ನೀಡುವಂತೆ ಹೈಕೋರ್ಟ್‌ ಹೇಳಿತ್ತು. ಈ ಹಿನ್ನೆಲೆಯಲ್ಲಿ ಹಿಂದಿನ ಸಂಪುಟ ಸಭೆಯಲ್ಲಿ ಚರ್ಚಿಸಿ ಜಮೀನು ನೀಡಲು ನಿರ್ಧರಿಸಲಾಗಿತ್ತು. ಈಗ ಕೋರ್ಟ್‌ನಲ್ಲಿ ಪಿಐಎಲ್‌ ಹಾಕಲಾಗಿದೆ. ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಹೀಗಾಗಿ ಕೋರ್ಟ್‌ ಏನು ತೀರ್ಪು ನೀಡುತ್ತದೆ ಎಂಬುದನ್ನು ಪರಿಶೀಲಿಸಿ ಮುಂದೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಏನಿದು ಜಿಂದಾಲ್‌ ವಿವಾದ? :

ಜಿಂದಾಲ್‌ ಭೂಮಿ ಪರಭಾರೆ ವಿವಾದ ಇಂದು-ನಿನ್ನೆಯದಲ್ಲ. ಇದು 2005ರಲ್ಲಿ  ಕಾಂಗ್ರೆಸ್‌-ಜೆಡಿಎಸ್‌ ಸರಕಾರದ ಅವಧಿಯಲ್ಲಿ ಆದ ನಿರ್ಧಾರ. ಆಗ ಧರಂ ಸಿಂಗ್‌ ಸಿಎಂ ಆಗಿದ್ದು,  ಬಳ್ಳಾರಿ-ಹೊಸಪೇಟೆ ಭಾಗದಲ್ಲಿ ಎರಡು ಹಂತಗಳಲ್ಲಿ ಜಿಂದಾಲ್‌ ಕಂಪೆನಿಗೆ 3,667 ಎಕರೆ ಭೂಮಿ ನೀಡುವ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆ ಒಪ್ಪಂದದಲ್ಲಿ ಮೊದಲ 10 ವರ್ಷಗಳ ಕಾಲ ಭೂಮಿಯನ್ನು ಲೀಸ್‌ಗೆ ನೀಡುವುದು, ಬಳಿಕ ಅದನ್ನು ಸೇಲ್‌ ಡೀಡ್‌ ಆಗಿ ಮಾರ್ಪಡಿಸಿಕೊಳ್ಳುವುದು ಸೇರಿತ್ತು. ಅಂದು ಪ್ರತೀ ಎಕರೆಗೆ 1.22 ಲಕ್ಷ ರೂ.ಗಳಿಂದ 1.50 ಲಕ್ಷ ರೂ. ನೀಡುವ ಬಗ್ಗೆ ನಿರ್ಧರಿಸಲಾಗಿತ್ತು. 2005ರಲ್ಲಿ 2,000.58 ಎಕರೆ ನೀಡಲು ಒಪ್ಪಿಗೆ ನೀಡಲಾಗಿತ್ತು. 2007ರಲ್ಲಿ ಜೆಡಿಎಸ್‌-ಬಿಜೆಪಿ ಸರಕಾರದ ಅವಧಿಯಲ್ಲಿ ಉಳಿದ 1,666 ಎಕರೆ ನೀಡಲಾಗಿತ್ತು.

ಆನಂದ ಸಿಂಗ್‌ಗೆ “ಜಿಂದಾಲ್‌’ ಜಯ :

ಜಿಂದಾಲ್‌ ಜಮೀನು ಪರಭಾರೆ ವಿಚಾರದಲ್ಲಿ ಸಚಿವ ಆನಂದ್‌ ಸಿಂಗ್‌ ಮತ್ತೆ ಗೆದ್ದಿದ್ದಾರೆ. ಈ ಹಿಂದೆ ಮೈತ್ರಿ ಸರಕಾರದಲ್ಲಿ ಇದ್ದಾಗಲೂ ಅವರು ಇದನ್ನು ವಿರೋಧಿಸಿದ್ದರು. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ ತ್ಯಜಿಸಿ ಬಿಜೆಪಿ ಸೇರಿದ್ದರು. ಬಳಿಕ ಉಪಚುನಾವಣೆಯಲ್ಲಿ ಗೆದ್ದು ಸಚಿವರಾಗಿದ್ದಾರೆ. ಆದರೆ ಬಿಜೆಪಿ ಸರಕಾರವೂ ಜಮೀನು ಮಾರಾಟಕ್ಕೆ ಮುಂದಾಗಿದ್ದರಿಂದ ಅವರಿಗೆ ಹಿನ್ನಡೆಯಾಗಿತ್ತು. ಸಂಪುಟದ ನಿರ್ಧಾರವನ್ನು ವಿರೋಧಿಸಿ, ತನ್ನ ಹಿಂದಿನ ನಿಲುವಿಗೆ ಈಗಲೂ ಬದ್ಧ ಎಂದಿದ್ದರು.

ಒಪ್ಪಂದ ಆದದ್ದು ಯಾವಾಗ? :

ಮೊದಲ ಹಂತ :

2005: ಕಾಂಗ್ರೆಸ್‌-ಜೆಡಿಎಸ್‌ ಸರಕಾರದ ಅವಧಿ.

2,000.58 ಎಕರೆ ಜಮೀನು ನೀಡಲು ಒಪ್ಪಿಗೆ

ಎರಡನೇ ಹಂತ:

2007: ಜೆಡಿಎಸ್‌-ಬಿಜೆಪಿ ಸರಕಾರದ ಅವಧಿ

1,666 ಎಕರೆ ಭೂಮಿ ನೀಡಲು ಒಪ್ಪಿಗೆ

ಭೂಮಿ ಮಾರಾಟ ಮಾಡುವ ನಿರ್ಧಾರ

2019: ಜೆಡಿಎಸ್‌-ಕಾಂಗ್ರೆಸ್‌ ಸರಕಾರದ ಅವಧಿ.

2021: ಬಿಜೆಪಿ ಸರಕಾರದ ಅವಧಿ

ಯಾರ್ಯಾರ ವಿರೋಧ? :

  1. ಎಚ್‌.ಕೆ. ಪಾಟೀಲ್‌, ಆನಂದ್‌ ಸಿಂಗ್‌, ಜೆಡಿಎಸ್‌- ಕಾಂಗ್ರೆಸ್‌ ಸರಕಾರದ ಅವಧಿ.
  2. ಆನಂದ್‌ ಸಿಂಗ್‌, ಬಸನಗೌಡ ಯತ್ನಾಳ್‌, ಅರವಿಂದ ಬೆಲ್ಲದ- ಬಿಜೆಪಿ ಅವಧಿ.

ಎರಡು ಬಾರಿ ಉಪಸಮಿತಿ ರಚನೆ :

ಜೆಡಿಎಸ್‌-ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ಎಂ.ಬಿ. ಪಾಟೀಲ್‌ ನೇತೃತ್ವದ ಸಂಪುಟ ಉಪ ಸಮಿತಿ ಹಿಂದಿನ ಒಪ್ಪಂದದಂತೆ ಭೂಮಿ ಒದಗಿಸ ಬಹುದು ಎಂದಿತ್ತು. ಈಗ ಜಗದೀಶ್‌ ಶೆಟ್ಟರ್‌  ನೇತೃತ್ವದ ಸಂಪುಟ ಉಪಸಮಿತಿಯೂ ಭೂಮಿ ನೀಡಬಹುದು ಎಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next